ಉತ್ತರಪ್ರದೇಶ: ಟ್ರಕ್ ಒಂದರ ಟೈರ್ ಸ್ಪೋಟಗೊಂಡು ಮಗುಚಿಬಿದ್ದ ಪರಿಣಾಮ ಮೂರು ಜನ ಮಹಿಳಾ ವಲಸೆ ಕಾರ್ಮಿಕರು ಮೃತಪಟ್ಟು, 12 ಜನ ಗಂಭೀರ ಗಾಯಗೊಂಡ ಘಟನೆ ಝಾನ್ಸಿ-ಮಿರ್ಜಾಪುರ್ ಹೆದ್ದಾರಿಯಲ್ಲಿ ನಡೆದಿದೆ ಎಂದು ಮಾಧ‍್ಯಮದ ವರದಿ ತಿಳಿಸಿದೆ.
ಕಳೆದ ರಾತ್ರಿ 17 ಜನ ವಲಸೆ ಕಾರ್ಮಿಕರ ತಂಡ ದೆಹಲಿಯಿಂದ ಉತ್ತರಪ್ರದೇಶದಲ್ಲಿರುವ ತಮ್ಮ ಗ್ರಾಮಗಳಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಬಂದ ಟ್ರಕ್ ಒಂದನ್ನು ನಿಲ್ಲಿಸಿ ಡ್ರೈವರ್ ಬಳಿ ತಮ್ಮ ಗ್ರಾಮಗಳಿಗೆ ಬಿಡುವಂತೆ ಕೋರಿಕೊಂಡಿದ್ದಾರೆ. ಇದಕ್ಕೆ ಒಪ್ಪಿದ ಆತ 17 ಜನರನ್ನೂ ಕೂಡ ಹತ್ತಿಸಿಕೊಂಡಿದ್ದಾನೆ.
ಆದರೆ ಅರ್ಧ ದಾರಿ ಸಮೀಪಿಸುವಷ್ಟರಲ್ಲೇ ಟ್ರಕ್ ಟೈರ್ ಸ್ಪೋಟ ಗೊಂಡು ಮಗುಚಿಬಿದ್ದಿದೆ. ಪರಿಣಾಮವಾಗಿ 3 ಜನರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟು 13 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಾಕ್ ಡೌನ್ ಕಾರಣದಿಂದ ದೇಶದ ಹಲವೆಡೆ ವಲಸೆ ಕಾರ್ಮಿಕರು ತೀವ್ರತರಹವಾದ ತೊಂದರೆ ಅನುಭವಿಸುತ್ತಿದ್ದು ತಮ್ಮ ಊರುಗಳಿಗೆ ಕಾಲ್ನಡಿಗೆ ಯ ಮೂಲಕವೇ ತೆರಳುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಸುಮಾರು 50ಕ್ಕಿಂತ ಹೆಚ್ಚು ಜನರು ವಲಸೆ ಕಾರ್ಮಿಕರು, ಅಪಘಾತಕ್ಕೀಡಾಗಿ ದುರಂತ ಸಾವನ್ನಪ್ಪಿದ್ದಾರೆ. ಶನಿವಾರವಷ್ಟೆ ಟ್ರಕ್ ಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ 26 ಜನರು ಮೃತರಾಗಿದ್ದರು.
ವಲಸೆ ಕಾರ್ಮಿಕರ ದುಸ್ಥಿತಿ ಕಂಡು ಸುಪ್ರೀಂ ಕೋರ್ಟ್ ಕೂಡ ಕೆಲ ದಿನಗಳ ಹಿಂದೆ ಕಳವಳ ವ್ಯಕ್ತಪಡಿಸಿತ್ತು. ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಕೂಡ ಅಂತರ್ ರಾಜ್ಯ ಗಡಿಯನ್ನೇ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದು, ಕಾಲ್ನಡಿಗೆಯಲ್ಲಿ ತೆರಳುವವರಿಗೆ ಆಶ್ರಯ, ಅಹಾರದ ವ್ಯವಸ್ಥೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.