Advertisement

10 ಬ್ಯಾಚ್‌ಗಳಲ್ಲಿ ವಲಸಿಗರ ಸ್ಥಳಾಂತರಿಸಿದ ತಾಲೂಕು ಆಡಳಿತ

08:27 AM Jun 06, 2020 | mahesh |

ಬೆಳ್ತಂಗಡಿ: ಕೋವಿಡ್‌-19 ವೈರಸ್‌ ಹರಡುತ್ತಿರುವ ಹಿನ್ನೆಲೆ ತಾಲೂಕಿನ ವಿವಿಧೆಡೆಯಿದ್ದ ರಾಜ್ಯ, ಹೊರರಾಜ್ಯದ ವಲಸೆ ಕಾರ್ಮಿಕರನ್ನು ಸರಕಾರದ ಆದೇಶದಂತೆ ಎ. 25ರಿಂದ ಈ ವರೆಗೆ 10 ಬ್ಯಾಚ್‌ಗಳಂತೆ ತಮ್ಮ ತಮ್ಮ ಊರುಗಳಿಗೆ ಮರಳಿಸಲು ತಾಲೂಕು ಆಡಳಿತ ಸುವ್ಯವಸ್ಥೆ ಕಲ್ಪಿಸಿದೆ.

Advertisement

ಬಿಹಾರಕ್ಕೆ ತೆರಳಲು ಸಿದ್ಧರಾಗಿದ್ದ 63 ಮಂದಿಯನ್ನು ಗುರುವಾರ ಎರಡು ಬಸ್‌ಗಳ ಮೂಲಕ ಮಂಗಳೂರಿಗೆ ಕಳುಹಿಸಿಕೊಡಲಾಯಿತು. ಅಲ್ಲಿಂದ ಕೆ.ಎಂ.ಸಿ.ಯಲ್ಲಿ ವೈದ್ಯಕೀಯ ಚಿಕಿತ್ಸೆ ನಡೆಸಿ ಶುಕ್ರವಾರ ಸಂಜೆ ರೈಲು ಮೂಲಕ ಪ್ರಯಾಣಿಸಲಿದ್ದಾರೆ ಎಂದು ತಹಶೀಲ್ದಾರ್‌ ಗಣಪತಿ ಶಾಸ್ತ್ರಿ ತಿಳಿಸಿದರು.

ಎ. 25ರಂದು ಮೊದಲ ಬ್ಯಾಚ್‌
ಆರಂಭದಲ್ಲಿ ಸರಕಾರ ಸೂಚಿಸಿದಂತೆ ಉಜಿರೆ ರತ್ನವರ್ಮ ಕ್ರೀಡಾಂಗಣದಿಂದ ಮೊದಲ ಬಾರಿಗೆ ಹೊರಜಿಲ್ಲೆಗಳಾದ ಬಾಗಲಕೊಟೆ-22, ಯಾದಗಿರಿ, ಹಾಸನ, ಬಿಜಾಪುರ-23, ಧಾರವಾಡ, ಹಾವೇರಿ, ಬೆಳಗಾವಿ-24, ದಾವಣಗೆರೆ-20, ಕೊಪ್ಪಳ-21 ಮಂದಿ ಸಹಿತ ಒಟ್ಟು 110 ಮಂದಿಯನ್ನು 5 ಬಸ್‌ಗಳಲ್ಲಿ ಕಳುಹಿಸಿ ಕೊಡಲಾಗಿತ್ತು. ಶಾಸಕ ಹರೀಶ್‌ ಪೂಂಜ ಎಲ್ಲರಿಗೂ ಊಟದ ವ್ಯವಸ್ಥೆ ಕಲ್ಪಿಸಿದ್ದರು.

ಮೇ 6ರಂದು ದ್ವಿತೀಯ ಬ್ಯಾಚ್‌
ಮೇ 6ರಂದು ಒಟ್ಟು 18 ಬಸ್‌ಗಳ ಮೂಲಕ 454 ಮಂದಿಯನ್ನು ಉಜಿರೆ ರತ್ನವರ್ಮ ಕ್ರೀಡಾಂಗಣದಿಂದ ಕಳುಹಿಸಿಕೊಡಲಾಗಿದೆ. ಕಲುºರ್ಗಿ, ಬೀದರ್‌, ವಿಜಯಪುರ-57, ಗದಗ- 85, ಕೊಪ್ಪಳ-28, ಬೆಳಗಾವಿ-78, ಬಾಗಲಕೋಟೆ-15, ಹಾವೇರಿ, ಧಾರವಾಡ-54, ಚಿತ್ರದುರ್ಗ, ಬಳ್ಳಾರಿ, ರಾಯಚೂರು-23, ಶಿವಮೊಗ್ಗ, ದಾವಣಗೆರೆ-23, ಚಿಕ್ಕಮಗಳೂರು, ಹಾಸನ-47, ಉಡುಪಿ, ಉತ್ತರಕನ್ನಡ 44 ಮಂದಿ ಇದ್ದರು.

ಹೊರ ಜಿಲ್ಲೆಗಳ ಪ್ರಯಾಣ
ಬಿಹಾರದವರನ್ನು ಪುತ್ತೂರು ರೈಲು ನಿಲ್ದಾಣಕ್ಕೆ ತೆರಳಲು ಗ್ರಾಮಕರಣಿಕರ ಸಹಾಯದಿಂದ ಮೇ 12ರಂದು ಮೊದಲಬಾರಿಗೆ 5 ಬಸ್‌ಗಳಲ್ಲಿ 180 ಮಂದಿಯನ್ನು ನಿಗದಿತ ಸ್ಥಳಗಳಿಂದ ಬಸ್‌ಗಳಲ್ಲಿ ಕಳುಹಿಸಿಕೊಡಲಾಗಿತ್ತು. ಮೇ 14ರಂದು ರಾಜಸ್ಥಾನಕ್ಕೆ ತೆರಳಲು ಮಂಗಳೂರು ರೈಲು ನಿಲ್ದಾಣಕ್ಕೆ 1 ಬಸ್‌ ಮುಖೇನ 21 ಮಂದಿ, ಮೇ 16ರಂದು ಉತ್ತರ ಪ್ರದೇಶಕ್ಕೆ ತೆರಳುವ 312 ಮಂದಿಯನ್ನು 9 ಬಸ್‌ಗಳಲ್ಲಿ ಕಳುಹಿಸಲಾಯಿತು. ಮೇ 19ರಂದು ಮಧ್ಯಪ್ರದೇಶಕ್ಕೆ ತೆರಳಲು 47 ಮಂದಿಗೆ 2 ಬಸ್‌ ವ್ಯವಸ್ಥೆ, ಮೇ 25ರಂದು ಒಡಿಶಾ ತೆರಳುವ 19 ಮಂದಿಗೆ 1 ಬಸ್‌, ಜೂನ್‌ 1ರಂದು ಉತ್ತರಪ್ರದೇಶಕ್ಕೆ 5 ಮಂದಿ, ವೆಸ್ಟ್‌ಬೆಂಗಾಲ್‌ಗೆ 23 ಮಂದಿ, ಉತ್ತರಾಖಂಡ್‌ನ‌ ಓರ್ವನನ್ನು ಕಂಕನಾಡಿ ರೈಲು ನಿಲ್ದಾಣಕ್ಕೆ ಕಳುಹಿಸಿಕೊಡಲಾಗಿತ್ತು. ಇದರಂತೆ ಜೂ. 2ರಂದು ವೆಸ್ಟ್‌ಬೆಂಗಾಲ್‌ಗೆ 3 ಬಸ್‌ ಮೂಲಕ 97 ಮಂದಿ ತೆರಳುವ ಮೂಲಕ ಒಟ್ಟು 654 ಮಂದಿ ಹೊರ ರಾಜ್ಯಕ್ಕೆ ಪ್ರಯಾಣ ಬೆಳೆಸಿದ್ದಾರೆ.

Advertisement

ಕಾರ್ಮಿಕ ಹಿತ ರಕ್ಷಣೆ
ತಾಲೂಕಿನಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಲಸೆ ಕಾರ್ಮಿಕರು, ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರಿದ್ದಾರೆ. ಅವರಲ್ಲಿ 1,218 ಮಂದಿ ತಮ್ಮ ತಮ್ಮ ಊರಿಗೆ ತೆರಳಿದ್ದಾರೆ. ಸರಕಾರದ ಆದೇಶದಂತೆ ಶಾಸಕ ಹರೀಶ್‌ ಪೂಂಜ ನೇತೃತ್ವದಲ್ಲಿ ಕಾರ್ಮಿಕ ಹಿತದೃಷ್ಟಿಯಿಂದ ಮಾಸ್ಕ್, ಸ್ಯಾನಿಟೈಸರ್‌, ಆಹಾರ ಸಾಮಗ್ರಿ ನೀಡಿ, ಅವರ ವಿವರ ಪಡೆದು ಅವರು ತೆರಳುವ ಸ್ಥಳಗಳಿಗೆ ಮಾಹಿತಿ ನೀಡಲಾಗಿದೆ.
– ಗಣಪತಿ ಶಾಸ್ತ್ರಿ, ತಹಶೀಲ್ದಾರ್‌, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next