ಬೆಂಗಳೂರು: ಬಿಬಿಎಂಪಿ ಹಾಗೂ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಬುಧವಾರ ನಗರದಲ್ಲಿ ಸಕ್ರಿಯವಾಗಿರುವ 86 ಮಂದಿ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ನಡೆಸಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಮಾರ್ಗದರ್ಶನದಲ್ಲಿ ಸಿಸಿಬಿಯ ಐವರು ಎಸಿಪಿ, 19 ಮಂದಿ ಇನ್ ಸ್ಪೆಕ್ಟರ್‌ಗಳು ಹಾಗೂ 160 ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡಗಳು ಬುಧವಾರ ಮುಂಜಾನೆ 2 ಸುಮಾರಿಗೆ ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸುಮಾರು 86ಕ್ಕೂ ಅಧಿಕ ರೌಡಿ ಶೀಟರ್‌ಗಳ ಮೇಲೆ ಮನೆಗಳ ಮೇಲೆ ದಾಳಿ ನಡೆಸಿ ಪೂರ್ವಪರ ಮಾಹಿತಿ ಸಂಗ್ರಹಿಸಿದೆ.
ಇದೇ ವೇಳೆ ಕುಖ್ಯಾತ ರೌಡಿ ಸ್ಟಾರ್ ನವೀನ್ ಸಿಸಿಬಿ ಪೊಲೀಸರ ದಾಳಿ ವೇಳೆ ಪೊಲೀಸರನ್ನು ಕಂಡು ಓಡಿ ಹೋಗಿದ್ದಾನೆ. ಈ ವೇಳೆ ಈತನ ಮೊಬೈಲ್ ಹಾಗೂ ಚಾಕನ್ನು ಜಪ್ತಿ ಮಾಡಲಾಗಿದೆ ಎಂದು ಸಿಸಿಬಿ ತಿಳಿಸಿದೆ.
ನಸುಕಿನಲ್ಲಿ ದಿಢೀರ್ ದಾಳಿ ಏಕೆ?
ಈ ಎಲ್ಲ ರೌಡಿಶೀಟರ್‌ಗಳು ಕೊಲೆ, ಕೊಲೆಗೆ ಯತ್ನ, ದರೋಡೆ, ಸುಲಿಗೆ, ಅಪಹರಣ ಸೇರಿದಂತೆ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಅವರ ಮೇಲೆ ನಿಗಾವಹಿಸುವ ಹಾಗೂ ರೌಡಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಈ ಮನೆಗಳ ಮೇಲೆ ದಾಳಿ ನಡೆಸಿ ವಿಚಾರಣೆ ಮಾಡಲಾಗಿದೆ. ಹಾಗೆಯೇ ರೌಡಿಶೀಟರ್‌ಗಳ ಪ್ರಸ್ತುತ ಕೆಲಸ ಕಾರ್ಯಗಳು, ಮೊಬೈಲ್ ನಂಬರ್, ಎಷ್ಟು ಮನೆಗಳು, ಕಚೇರಿಗಳು ಇವೆ. ಯಾರೊಂದಿಗಾದರೂ ಸಂಪರ್ಕ ಇಟ್ಟುಕೊಂಡಿದ್ದಾರಾ? ಪುಡಿ ರೌಡಿಗಳಿಗೆ ಸಹಾಯ ಮಾಡುತ್ತಿದ್ದಾರಾ? ಸೇರಿ ಹಲವಾರು ಮಾಹಿತಿ ಪಡೆದುಕೊಂಡು ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.