ದಾವಣಗೆರೆ: ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಆ.14ರ ರಾತ್ರಿ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಬಡವರ ನಡುರಾತ್ರಿ ಸ್ವಾತಂತ್ರ್ಯೋತ್ಸವದ ಭಿತ್ತಿಪತ್ರವನ್ನು ಸೋಮವಾರ ಜಯದೇವ ವೃತ್ತದಲ್ಲಿ ಬಿಡುಗಡೆ ಮಾಡಲಾಯಿತು.
ರಾಜ್ಯ ಸರ್ಕಾರ ಈಗಲಾದರೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಸಮಸ್ಯೆಗಳನ್ನ ಸಮರೋಪಾದಿಯಲ್ಲಿ ಬಗೆಹರಿಸುವ ಮೂಲಕ ನಿವೇಶನ ಸೌಲಭ್ಯ ಒದಗಿಸಬೇಕು. ಭೂ ಮಂಜೂರಾತಿ, ಅರಣ್ಯ ಹಕ್ಕು ಸಮಿತಿ ರಚಿಸಿ, ಕಾಲಮಿತಿಯೊಳಗೆ ಭೂಮಿ ವಿತರಣೆ ಒಳಗೊಂಡಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಆ.14ರ ರಾತ್ರಿ ಬೆಂಗಳೂರಿನಲ್ಲಿ ಬಡವರ ನಡುರಾತ್ರಿ ಸ್ವಾತಂತ್ರ್ಯೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಂಚಾಲಕ ಮೌಲಾನಾಯ್ಕ ತಿಳಿಸಿದರು.
ಆ.14ರ ರಾತ್ರಿ 9 ರಿಂದ 15ರ ಮುಂಜಾವಿನವರೆಗೆ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ನಡೆಯಲಿವೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಭೀಮ್ ಆರ್ಮಿ ಸಂಸ್ಥಾಪಕ ಚಂದ್ರಶೇಖರ ಆಝಾದ್ ರಾವಣ, ಮಾರುತಿ ಮಾನ್ಪಡೆ, ಆರ್. ಮಾನಸಯ್ಯ, ಎ.ಟಿ. ರಾಮಸ್ವಾಮಿ ಇತರರು ವಿಚಾರ ಮಂಡನೆ ಮಾಡುವರು ಎಂದು ತಿಳಿಸಿದರು.
ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್‌ದಾಸ್, ಎ.ಕೆ. ಸುಬ್ಬಯ್ಯ, ದೇವನೂರು ಮಹಾದೇವ, ಡಾ| ವಿಜಯಾ, ಪ್ರೊ. ರವಿವರ್ಮ ಕುಮಾರ್, ಎಸ್.ಆರ್. ಹಿರೇಮs್, ಚಂದ್ರಶೇಖರ ಪಾಟೀಲ್(ಚಂಪಾ), ಡಾ| ಸಿದ್ದನಗೌಡ ಪಾಟೀಲ್ ಇತರರು ನಮ್ಮೊಂದಿಗೆ ಇರುವರು ಎಂದರು.
ಆ.14 ನಡುರಾತ್ರಿ 12.5ಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಧ್ವಜಾರೋಹಣ ನೆರವೇರಿಸಿ, ನಿಜ ಸ್ವಾತಂತ್ರ್ಯದ ಕರೆ ನೀಡುವರು. 15ರ ಬೆಳಗ್ಗೆ 9ಕ್ಕೆ ಫ್ರೀಡಂ ಪಾರ್ಕ್‌ನಿಂ ಪೆರೇಡ್ ಮೈದಾನದವರೆಗೆ ಹಕ್ಕಿಗಾಗಿ ನಮ್ಮ ಹೆಜ್ಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಮಾನವ ಹಕ್ಕುಗಳ ವೇದಿಕೆ ಜಿಲ್ಲಾ ಕಾರ್ಯದರ್ಶಿ ಎಲ್.ಎಚ್. ಅರುಣ್‌ಕುಮಾರ್, ನ್ಯಾಯವಾದಿ ಅನೀಸ್ ಪಾಷಾ, ಸೈಯದ್ ಇಸ್ಮಾಯಿಲ್ ದೊಡ್ಡಮನಿ, ಎಸ್.ಕೆ. ಆದಿಲ್ಖಾನ್, ಎಚ್. ಉಷಾ, ನೇರ್ಲಿಗೆ ರಾಜೇಶ್, ಅಣ್ಣಪ್ಪ, ಎನ್. ವಿಜಯ್‌ಕುಮಾರ್ ಇತರರು ಇದ್ದರು.