ಬೆಂಗಳೂರು: ಸರಕಾರಿ ಶಾಲಾ ಮಕ್ಕಳ ಜತೆ ಇನ್ನು ಮುಂದೆ ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಸಿಗಲಿದೆ. ಈ ಬಗ್ಗೆ ಸರಕಾರ ಗಂಭೀರ ಚಿಂತನೆ ನಡೆಸಿದ್ದು, ಇದಕ್ಕಾಗಿ ಹಣಕಾಸು ಹೊಂದಿಸಿಕೊಂಡು ಪ್ರಸಕ್ತ ಸಾಲಿನಿಂದಲೇ ಜಾರಿಗೆ ತರಲು ಉದ್ದೇಶಿಸಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಂದೇ ಕ್ಯಾಂಪಸ್‌ನೊಳಗೆ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ಗಳು ಸಾಕಷ್ಟಿವೆ. ಇವುಗಳಲ್ಲಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಯೂಟ ಸೌಲಭ್ಯ ಸಿಗುತ್ತಿದೆ. ಆದರೆ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಜನೆ ಲಭಿಸು ತ್ತಿಲ್ಲ. ಹೀಗಾಗಿ ಪಿಯುಸಿ ವಿದ್ಯಾರ್ಥಿ ಗಳನ್ನು ಗಮನ ದಲ್ಲಿಟ್ಟು ಕೊಂಡು ಪಿಯುಸಿ ವಿದ್ಯಾರ್ಥಿ ಗಳಿಗೂ ಬಿಸಿಯೂಟ ಯೋಜನೆ ವಿಸ್ತರಿಸುವಂತೆ ಸಾಕಷ್ಟು ಸಂಘಟನೆಗಳು ಸಾರ್ವಜನಿಕ ಶಿಕ್ಷಣ ಇಲಾಖೆ, ಪಿಯು ಇಲಾಖೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿವೆ.
ಈ ಎಲ್ಲ ಅಂಶಗಳನ್ನು ಪರಿಶೀಲಿಸಿರುವ ರಾಜ್ಯ ಸರಕಾರ ಪ್ರಸಕ್ತ ಸಾಲಿನಿಂದ ಸರಕಾರಿ ಮತ್ತು ಸರಕಾರಿ ಅನುದಾನಿತ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ ಮಾಡಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.
ರಾಜ್ಯದಲ್ಲಿ 1,204 ಸರಕಾರಿ, 674 ಸರಕಾರಿ ಅನುದಾನಿತ ಮತ್ತು 2,500ಕ್ಕೂ ಅಧಿಕ ಖಾಸಗಿ ಪದವಿಪೂರ್ವ ಕಾಲೇಜು ಗಳಿವೆ. ಸುಮಾರು 12.5 ಲಕ್ಷ ವಿದ್ಯಾರ್ಥಿ ಗಳು ವ್ಯಾಸಂಗ ಮಾಡು ತ್ತಿದ್ದಾರೆ. ಸುಮಾರು 8ರಿಂದ 9 ಲಕ್ಷ ವಿದ್ಯಾರ್ಥಿಗಳು ಸರಕಾರಿ ಮತ್ತು ಸರಕಾರಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರಿ ಕಾಲೇಜು ಮಕ್ಕಳ ಅನುಕೂಲಕ್ಕಾಗಿ ಮಧ್ಯಾಹ್ನ ಬಿಸಿಯೂಟ ಯೋಜನೆ ಪಿಯುಸಿ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗಲಿದೆ. ಇದಕ್ಕಾಗಿ ಸರಕಾರಕ್ಕೆ ವಾರ್ಷಿಕ 180 ಕೋ. ರೂ. ಹೊರೆಯಾಗಬಹುದು ಎಂದು ಪಿಯುಸಿ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸರಕಾರಿ ಪದವಿಪೂರ್ವ ಕಾಲೇಜು ಗಳಲ್ಲಿ ಮಧ್ಯಾಹ್ನ ಬಿಸಿ ಯೂಟ ಯೋಜನೆ ಜಾರಿ ಮಾಡುವಂತೆ ಹಲವಾರು ಸಂಘಟನೆ ಗಳು ಮನವಿ ಮಾಡಿವೆ. ಯೋಜನೆ ಜಾರಿಗೆ ಬೇಕಿರುವ ಅನುದಾನ ಮತ್ತು ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಸರಕಾರ ಸೂಕ್ತ ಚರ್ಚೆ ನಡೆಸಲಿದೆ.
– ಎಸ್. ಸುರೇಶ್ ಕುಮಾರ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ
ಲೋಕೇಶ್ ರಾಮ್