Advertisement

ತಪ್ಪಿದ ಇಂಡಿಗೋ ವಿಮಾನಗಳ ಢಿಕ್ಕಿ: 300ಕ್ಕೂ ಅಧಿಕ ಪ್ರಯಾಣಿಕರು ಪಾರು

04:11 PM Jul 12, 2018 | udayavani editorial |

ಬೆಂಗಳೂರು : ಇಂಡಿಗೋ ಏರ್‌ ಲೈನ್ಸ್‌ ಗೆ ಸೇರಿದ ಎರಡು ವಿಮಾನಗಳು ಕಳೆದ ಜು.10ರಂದು ಇಲ್ಲಿನ ವಾಯು ಪ್ರದೇಶದಲ್ಲಿ  ಹಾರಾಟ ನಿರತವಾಗಿದ್ದಾಗ ಕೇವಲ 200 ಗಳಿಗಿಂತ  ಕಡಿಮೆ ಪರಸ್ಪರ ಅಂತರಕ್ಕೆ ಬಂದ ಕೂಡಲೇ ವಿಮಾನದೊಳಗಿನ ಅವಘಡ ಮುನ್ನೆಚ್ಚರಿಕೆ ವ್ಯವಸ್ಥೆಗಳು ಕ್ರಿಯಾಶೀಲವಾಗಿ ಪೈಲಟ್‌ಗಳನ್ನು ಜಾಗೃತಗೊಳಿಸಿದ ಪರಿಣಾಮವಾಗಿ ಗಗನದಲ್ಲಿ ಎರಡು ವಿಮಾನಗಳು ಢಿಕ್ಕಿ ಹೊಡೆಯುವ ಭಾರೀ ಸಂಭವನೀಯ ದುರಂತ ತಪ್ಪಿತೆಂದು ವರದಿಯಾಗಿದೆ. 

Advertisement

ಒಂದು ಇಂಡಿಗೋ ವಿಮಾನ (ಹಾರಾಟ ಸಂಖ್ಯೆ 6E779) ಕೊಯಮುತ್ತೂರಿನಿಂದ ಹೈದರಾಬಾದಿಗೆ ಹಾರುತ್ತಿತ್ತು. ಅದೇ ವೇಳೆ ಇನ್ನೊಂದು ಇಂಡಿಗೋ ವಿಮಾನ (ಹಾರಾಟ ಸಂಖ್ಯೆ 6E6505) ಬೆಂಗಳೂರಿನಿಂದ ಕೊಚ್ಚಿಗೆ ಹಾರುತ್ತಿತ್ತು. ಒಂದು ಸಂದರ್ಭದಲ್ಲಿ  ಈ ಎರಡು ವಿಮಾನಗಳು ಲಂಬವಾಗಿ ಕೇವಲ 200 ಅಡಿಗಳಷ್ಟು ಪರಸ್ಪರ ಸನಿಹಕ್ಕೆ ಬಂದವು. ಹೈದರಾಬಾದಿಗೆ ಹೋಗುತ್ತಿದ್ದ ವಿಮಾನದಲ್ಲಿ 162 ಪ್ರಯಾಣಿಕರು ಇದ್ದರು.  ಕೊಚ್ಚಿಗೆ ಹೋಗುತ್ತಿದ್ದ ವಿಮಾನದಲ್ಲಿ 166 ಪ್ರಯಾಣಿಕರಿದ್ದರು. ಒಂದೊಮ್ಮೆ ಎರಡು ವಿಮಾನಗಳು ಪರಸ್ಪರ ಢಿಕ್ಕಿ ಹೊಡೆದಿದ್ದರೆ ಅಪಾರ ಜೀವ ಹಾನಿ ಸಂಭವಿಸುತ್ತಿತ್ತು ಎಂದು ವರದಿಗಳು ತಿಳಿಸಿವೆ. 

ಒಡನೆಯೇ ಸಂಭವನೀಯ ದುರಂತವನ್ನು ಪರಿಗ್ರಹಿಸಿದ “ದಿ ಟ್ರಾಫಿಕ್‌ ಕೊಲೀಶನ್‌ ಅವಾಯ್‌ಡೆನ್ಸ್‌ ಸಿಸ್ಟಮ್‌ (ಟಿಸಿಎಎಸ್‌) ಕ್ರಿಯಾಶೀಲವಾಯಿತು. ಜತೆಗೆ ಎರಡೂ ವಿಮಾನಗಳಲ್ಲಿ “ರೆಸೊಲ್ಯೂಶನ್‌ ಅಡ್‌ವೈಸರಿ ಸಿಸ್ಟಮ್‌’ ಕೂಡ ಕ್ರಿಯಾಶೀಲವಾಗಿ ಮುನ್ನೆಚ್ಚರಿಕೆಯನ್ನು ನೀಡಿತು ಎಂದು ವರದಿಗಳು ತಿಳಿಸಿವೆ. 

ಇದೀಗ ವಿಮಾನಾಪಘಾತಗಳ ತನಿಖಾ ಮಂಡಳಿ (ಎಎಐಬಿ) ಈ ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಿದೆ. ನಾಗರಿಕ ವಾಯುಯಾನದ ಮಹಾ ನಿರ್ದೇಶಕರು ವಾಯುಯಾನ ನಿಯಂತ್ರಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next