ನ್ಯೂಯಾರ್ಕ್: ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಟಿಕ್ ಟಾಕ್ ನೊಂದಿಗೆ ಕಂಪೆನಿಯ ವ್ಯವಹಾರವೂ ವಿಷದ ಪಾತ್ರೆಯಿದ್ದಂತೆ ಎಂದು ಬಣ್ಣಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣವನ್ನು ನಿರ್ವಹಿಸುವುದು ಸರಳವಲ್ಲ. ಇಲ್ಲಿ ಹಲವಾರು ಸಮಸ್ಯೆಗಳಿವೆ. ಸ್ಪರ್ಧೆಗಳಿವೆ. ಅದಾಗ್ಯೂ ಟಿಕ್ ಟಾಕ್ ಅನ್ನು ನಿಷೇಧಿಸುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಬಹಳ ವಿಲಕ್ಷಣವಾಗಿದೆ ಎಂದಿದ್ದಾರೆ.
ಆ ಒಪ್ಪಂದದಲ್ಲಿ ಏನಾಗಲಿದೆ ಎಂದು ಯಾರಿಗೆ ತಿಳಿದಿಲ್ಲ. ಆದರೂ ಇದು ವಿಷಪೂರಿತವಾಗಿದೆ ಎಂಬುದು ಸ್ಪಷ್ಟ. ಸಾಮಾಜಿಕ ಮಾಧ್ಯಮದಲ್ಲಿ ಉನ್ನತ ಸ್ಥಾನಕ್ಕೇರುವುದು ಸುಲಭದ ಮಾತಲ್ಲ ಎಂದರು.
ಮೈಕ್ರೋಸಾಫ್ಟ್ ಸಂಸ್ಥೆ ಸಾಮಾಜಿಕ ಜಾಲತಾಣವನ್ನು ಪ್ರವೇಶಿಸುವ ಕುರಿತಾಗಿ ಮಾತನಾಡಿದ ಅವರು, ಯಾವುದೇ ಆಟವಾಗಲಿ ಅದಕ್ಕೊಂದು ಪ್ರತಿಸ್ಪರ್ಧಿಯಿರಬೇಕು. ಇಲ್ಲದಿದ್ದರೇ ಆಟದಲ್ಲಿ ರೋಚಕತೆಯಿರುವುದಿಲ್ಲ. ಆದರೇ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಸ್ಪರ್ಧಿಗಳನ್ನು ನಿರ್ನಾಮ ಮಾಡುತ್ತಿರುವುದು ವಿಲಕ್ಷಣವಾಗಿದೆ ಎಂದಿದ್ದಾರೆ.
ಅಮೆರಿಕಾ ಆಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚಿಗೆ ಚೀನಾದ ಸಾಮಾಜಿಕ ಜಾಲತಾಣ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ಕಾರ್ಯಕಾರಿ ಆದೇಶ ಹೊರಡಿಸಿದ್ದರು. ಮಾತ್ರವಲ್ಲದೆ ಈ ಆದೇಶಕ್ಕೆ ಸಹಿ ಹಾಕಿದ್ದು, 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ ಎಂದಿದ್ದಾರೆ. ಈ ನಿರ್ಧಾರವನ್ನು ಬಿಲ್ ಗೇಟ್ಸ್ ಟೀಕಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೈಕ್ರೋಸಾಫ್ಟ್ ಯಾವುದೇ ಪ್ರಾಬಲ್ಯವನ್ನು ಹೊಂದಿಲ್ಲ, ಈ ಕಾರಣಕ್ಕಾಗಿಯೇ ಬೈಟ್‌ಡ್ಯಾನ್ಸ್ ಒಡೆತನದ ಟಿಕ್ ಟಾಕ್ ಖರೀದಿಸಲು ಮೈಕ್ರೋಸಾಫ್ಟ್ ಉತ್ಸುಕತೆ ತೋರಿತ್ತು.