ನವದೆಹಲಿ: ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಅಸೈನ್‌ಮೆಂಟ್ಸ್‌ಗಳನ್ನು ಪೂರ್ಣಗೊಳಿಸಲು ಚಾಟ್‌ಜಿಪಿಟಿ ದುರಪಯೋಗವಾಗುತ್ತಿದೆ ಎಂಬ ಕಳವಳದ ನಡುವೆಯೇ ಅದನ್ನು ಸಕಾರಾತ್ಮಕವಾಗಿ ಬಳಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಮೈಕ್ರೋಸಾಫ್ಟ್ ಮಾಲೀಕತ್ವದ ಕೃತಕ ಬುದ್ಧಿಮತ್ತೆ (ಎಐ)ಯಿಂದ ಕಾರ್ಯನಿರ್ವಹಿಸುವ ಚಾಟ್‌ಜಿಪಿಟಿ ಅನ್ನು ಬಳಸಿ ಶೈಕ್ಷಣಿಕ ಸಾಧನವೊಂದನ್ನು ಸರ್ಕಾರ ಅಭಿವೃದ್ಧಿಪಡಿಸುತ್ತಿದೆ. ಇಂಗ್ಲಿಷ್ ಹೊರತುಪಡಿಸಿ ಯಾವುದೇ ಭಾರತೀಯ ಭಾಷೆಯಲ್ಲಿ ತಮ್ಮ ಪಠ್ಯಕ್ರಮಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯಲು ಶಾಲಾ ವಿದ್ಯಾರ್ಥಿಗಳು ಇದನ್ನು ಶೀಘ್ರದಲ್ಲೇ ಬಳಸಬಹುದಾಗಿದೆ. ಮಕ್ಕಳು ತಮ್ಮ ಹೋಮ್‌ವರ್ಕ್ ಮಾಡಲು ಇದು ಸಹಕಾರಿಯಾಗಿದೆ.
ಈ ಶೈಕ್ಷಣಿಕ ಸಾಧನದ ಕುರಿತು ವಿಡಿಯೋ ಪ್ರಾತ್ಯಕ್ಷಿಕೆಯಲ್ಲಿ ವಿದ್ಯಾರ್ಥಿ ವಾಟ್ಸ್‌ಆ್ಯಪ್ ಚಾಟ್‌ನಲ್ಲಿ ಗಣಿತದ ಪ್ರಶ್ನೆಯನ್ನು ಧ್ವನಿ ಸಂದೇಶದ ಮೂಲಕ ಪೋಸ್ಟ್ ಮಾಡುತ್ತಾನೆ. ಮೊದಲಿಗೆ ಧ್ವನಿ ಸಂದೇಶವು ದೇವನಾಗರಿ ಲಿಪಿಯಲ್ಲಿ ಟೆಕ್ಸ್ಟ್ ಆಗಿ ರೂಪಾಂತರವಾಗುತ್ತದೆ ಹಾಗೂ ಚಾಟ್‌ನಲ್ಲಿ ಪ್ರಶ್ನೆಯ ಉತ್ತರವೂ ಬರುತ್ತದೆ. ಇದೆಲ್ಲವೂ ಕೆಲವೇ ಸೆಕೆಂಡ್‌ಗಳಲ್ಲಿ ಆಗುತ್ತದೆ.
ಇನ್ನೊಂದು ಘಟನೆಯಲ್ಲಿ, ವಿದ್ಯಾರ್ಥಿಯೊಬ್ಬ ತನ್ನ ಪಠ್ಯದಿಂದ ಗಣಿತದ ಪ್ರಶ್ನೆಯನ್ನು ಸ್ಕ್ರೀನ್‌ಶಾಟ್ ತೆಗೆದು, ವಾಟ್ಸ್‌ಆ್ಯಪ್ ಚಾಟ್‌ಬೊಟ್‌ಗೆ ಕಳುಹಿಸುತ್ತಾನೆ. ಕ್ಷಣಾರ್ಥದಲ್ಲಿ ಪ್ರಶ್ನೆಗೆ ಉತ್ತರ ಲಭ್ಯವಾಗುತ್ತದೆ.
ಈ ಶೈಕ್ಷಣಿಕ ಸಾಧನದ ಮೊದಲ ಆವೃತ್ತಿಯನ್ನು ಅಭಿವೃದ್ಧಿಪಡಿಸಲು ಅನೇಕ ಟೆಕ್ ಫ್ಲಾಟ್‌ಫಾರ್ಮ್ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸರ್ಕಾರದ ಬಾಶಿನಿ ಫ್ಲಾಟ್‌ಫಾರ್ಮ್ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಒಂದು ಭಾಷೆಯಿಂದ ಮತ್ತೂಂದು ಭಾಷೆಗೆ ತರ್ಜುಮೆ ಮಾಡುತ್ತದೆ. ಅದೇ ರೀತಿ ಶಾಲೆಯ ಪಠ್ಯವನ್ನು ಡಿಜಿಟೈಸ್ ಮಾಡುವ ದೀಕ್ಷಾ ಫ್ಲಾಟ್‌ಫಾರ್ಮ್, ವಾಟ್ಸ್‌ಆ್ಯಪ್ ಹಾಗೂ ಶೈಕ್ಷಣಿಕ ಫ್ಲಾಟ್‌ಫಾರ್ಮ್ ಡೌಟ್‌ನಟ್ ಅನ್ನು ಇದರ ಅಭಿವೃದ್ಧಿಗೆ ಬಳಸಲಾಗಿದೆ.