Advertisement

ವಾರದಲ್ಲಿ ನಾಲ್ಕೇ ದಿನ ಕೆಲಸ ಉತ್ಪಾದಕತೆ 40% ಹೆಚ್ಚಳ !

09:58 AM Nov 05, 2019 | Team Udayavani |

ಸಾಫ್ಟ್ ವೇರ್ ಮತ್ತು ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸಮಾಡುವವರಿಗೆ ವಾರದಲ್ಲಿ ಐದೇ ದಿನ ಕೆಲಸದ ಅವಧಿಯಾಗಿರುತ್ತದೆ. ಆದರೆ ಇದರ ಬದಲಿಗೆ ವಾರದಲ್ಲಿ ನಾಲ್ಕೇ ದಿನ ಕೆಲಸದ ಅವಧಿ ನಿಗದಿಪಡಿಸಿದರೆ ಏನಾಗುತ್ತದೆ? ಇಂತದ್ದೊಂದು ಪ್ರಯೋಗವನ್ನು ಮಾಡಿ ಜಪಾನ್ ಮೈಕ್ರೋಸಾಫ್ಟ್ ಕಂಪೆನಿ ಯಶಸ್ವಿಯಾಗಿದೆ. ಜಪಾನ್ ದೇಶದಲ್ಲಿ ಸುದೀರ್ಘ ಕೆಲಸದ ಅವಧಿ ಜನಪ್ರಿಯವಾಗಿದೆ.

Advertisement

ಜಪಾನ್ ನಲ್ಲಿರುವ ಮೈಕ್ರೋಸಾಫ್ಟ್ ಕಂಪೆನಿ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ವಾರಕ್ಕೆ ನಾಲ್ಕೇ ದಿನಗಳ ಕೆಲಸದ ಅವಧಿಯನ್ನು ತನ್ನ ಉದ್ಯೋಗಿಗಳಿಗೆ ನಿಗದಿಪಡಿಸಿತು. ಮತ್ತು ಆಗಸ್ಟ್ ತಿಂಗಳಾಂತ್ಯದಲ್ಲಿ ಉತ್ಪಾದಕತೆಯ ಪ್ರಮಾಣವನ್ನು ಅವಲೋಕಿಸಿದಾಗ ಹೆಚ್.ಆರ್. ವಿಭಾಗಕ್ಕೆ ಆಶ್ಚರ್ಯ ಕಾದಿತ್ತು.

2018ರ ಆಗಸ್ಟ್ ತಿಂಗಳಿಗೆ ಹೋಲಿಸಿದಲ್ಲಿ ವಾರದಲ್ಲಿ ನಾಲ್ಕೇ ದಿನ ಕೆಲಸದ ಅವಧಿ ನಿಗದಿ ಮಾಡಿದ್ದ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಉದ್ಯೋಗಿಗಳ ಉತ್ಪಾದಕತೆಯ ಮಟ್ಟದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಕಂಡುಬಂದಿತ್ತು. ಇದು ಎಷ್ಟರಮಟ್ಟಿಗೆ ಅಂದರೆ ಸುಮಾರು 40 ಪ್ರತಿಶತ ಹೆಚ್ಚಳ ಇಲ್ಲಿ ದಾಖಲಾಗಿತ್ತು.

‘ವರ್ಕ್ ಲೈಫ್ ಚಾಯ್ಸ್ ಚಾಲೆಂಜ್’ ಅಡಿಯಲ್ಲಿ ಜಗತ್ತಿನ ಸಾಫ್ಟ್ ವೇರ್ ದೈತ್ಯ ಕಂಪೆನಿ ಈ ಒಂದು ಪ್ರಯೋಗವನ್ನು ತನ್ನ ಉದ್ಯೋಗಿಗಳಿಗೆ ಕೆಲಸದ ಅವಧಿಯಲ್ಲಿ ಮಾಡಿ ಉತ್ತಮ ಫಲಿತಾಂಶವನ್ನು ಪಡೆದುಕೊಂಡಿದೆ.

ಜಪಾನ್ ಮೈಕ್ರೋಸಾಫ್ಟ್ ಕಂಪೆನಿ ತನ್ನಲ್ಲಿ ಕೆಲಸ ಮಾಡುತ್ತಿರುವ 2,300 ಉದ್ಯೋಗಿಗಳಿಗೆ ಆಗಸ್ಟ್ ತಿಂಗಳಿನಲ್ಲಿ ಶುಕ್ರವಾರವೂ ಸೇರಿದಂತೆ ಮೂರು ದಿನ ವೀಕೆಂಡ್ ರಜೆ ನೀಡಿತ್ತು. ಈ ಸಂದರ್ಭದಲ್ಲಿ ಪ್ರತೀ ಉದ್ಯೋಗಿಯ ಮಾರಾಟ ಪ್ರಮಾಣ 2018ರ ಆಗಸ್ಟ್ ತಿಂಗಳಿಗಿಂತ 39.9 ಪ್ರತಿಶತ ಹೆಚ್ಚಳವನ್ನು ಕಂಡಿತ್ತು.

Advertisement

ಇದರೊಂದಿಗೆ ಮೀಟಿಂಗ್ ಅವಧಿಯನ್ನು ಮತ್ತು ಇ-ಮೆಲ್ ಗಳಿಗೆ ಪ್ರತಿಕ್ರಿಯಿಸುವ ಅವಧಿಯನ್ನೂ ಸಹ ಕಡಿತಗೊಳಿಸುವ ಸಲಹೆ ಸಹ ಪ್ರಸ್ತಾವನೆಗೊಂಡಿತ್ತು. ಪ್ರತೀ ಮೀಟಿಂಗ್ ಅವಧಿ 30 ನಿಮಿಷಕ್ಕಿಂತ ಹೆಚ್ಚಿರಬಾರದು ಎಂಬ ಸಲಹೆಯನ್ನು ಅನುಷ್ಠಾನಗೊಳಿಸಿದಾಗ 23.1 ಪ್ರತಿಶತ ಕಡಿಮೆ ವಿದ್ಯುತ್ ಬಳಕೆ ಮತ್ತು 58.7 ಪ್ರತಿಶತ ಕಡಿಮೆ ಪ್ರಿಂಟಿಂಗ್ ಪೇಪರ್ ಬಳಕೆಯ ಫಲಿತಾಂಶ ಲಭಿಸಿದೆ.

ಸ್ವಂತಿಕೆಯ ಅಭಿವೃದ್ಧಿ ಮತ್ತು ಕುಟುಂಬ ಸೌಖ್ಯ ಯೋಜನೆಗಳಡಿಯಲ್ಲಿ ಕಂಪೆನಿಯು ಈ ಪ್ರಯೋಗವನ್ನು ಪ್ರಾರಂಭಿಸಿ ಇದೀಗ ಯಶಸ್ಸನ್ನು ಕಂಡಿದೆ ಮತ್ತು ತನ್ನ ಉದ್ಯೋಗಿಗಳಿಂದ ಧನಾತ್ಮಕ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಒಟ್ಟು ಉದ್ಯೋಗಿಗಳಲ್ಲಿ ಸುಮಾರು 92.1 ಪ್ರತಿಶತ ಉದ್ಯೋಗಿಗಳು ಈ ನಾಲ್ಕು ದಿನದ ಕೆಲಸದ ಅವಧಿಯನ್ನು ಇಷ್ಟಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next