ಉಡುಪಿ: ಮೈಕ್ರೋಸಾಫ್ಟ್ ಸಿಇಒ, ಮಣಿಪಾಲ ಎಂಐಟಿಯ ಪ್ರಾಕ್ತನ ವಿದ್ಯಾರ್ಥಿ ಸತ್ಯ ನಾದೆಳ್ಲ ಅವರನ್ನು ಬೆಂಗಳೂರಿನಲ್ಲಿ ಫೆ. 25ರಂದು ಮಣಿಪಾಲ್ ಎಜುಕೇಶನ್ ಆ್ಯಂಡ್ ಮೆಡಿಕಲ್ ಗ್ರೂಪ್ (ಎಂಇಎಂಜಿ) ಅಧ್ಯಕ್ಷ ಡಾ| ರಂಜನ್ ಆರ್. ಪೈ ನೇತೃತ್ವದ ತಂಡ ಭೇಟಿ ಮಾಡಿ ಮಾತುಕತೆ ನಡೆಸಿತು.
ನಿಯೋಗದಲ್ಲಿ ಮಣಿಪಾಲ ಮಾಹೆ ಕುಲಾಧಿಪತಿ ಡಾ| ರಾಮದಾಸ್ ಎಂ. ಪೈ, ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಎಂಐಟಿ ನಿರ್ದೇಶಕ ಡಾ| ಡಿ. ಶ್ರೀಕಾಂತ ರಾವ್, ಎಸ್‌ಒಐಎಸ್ ಪ್ರಾಧ್ಯಾಪಕ ಡಾ| ಹರೀಶ್ಚಂದ್ರ ಹೆಬ್ಟಾರ್, ಇನ್ಫೋಸಿಸ್ ಲಿ. ಭಾರತದ ನಿರ್ವಹಣ ಮುಖ್ಯಸ್ಥ, ಎಂಐಟಿ ಸಂದರ್ಶಕ ಪ್ರಾಧ್ಯಾಪಕ ಸಿ.ಎನ್. ರಘುಪತಿ ಇದ್ದರು.
ಮೈಕ್ರೋಸಾಫ್ಟ್ ಸಿಇಒ ಅವರನ್ನು ಮಾಹೆ ತಂಡ ಅಭಿನಂದಿಸಿ, “ಜಗತ್ತಿನ ಎಲ್ಲ ವ್ಯಕ್ತಿ ಮತ್ತು ಸಂಸ್ಥೆಗಳನ್ನು ಇನ್ನಷ್ಟು ಸಾಧಿಸಲು ಸಬಲಗೊಳಿಸುವುದು’ ಎಂಬ ಕಂಪೆನಿಯ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಯಶಸ್ವಿಯಾಗಿ ಎಂದು ಹಾರೈಸಿತು. ವಿ.ವಿ.ಯ ಪ್ರಾಕ್ತನ ವಿದ್ಯಾರ್ಥಿ ಎನ್ನುವುದು ಸಂಸ್ಥೆಗೆ ಹೆಮ್ಮೆಯಾಗಿದೆ ಎಂದು ನಿಯೋಗದವರು ತಿಳಿಸಿದರು.
ಆರೋಗ್ಯ ವಿಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಅಧ್ಯಯನದ ಮೂಲಕ ಹೊಸ ಶೋಧನೆ ಮತ್ತು ದೇಸೀಯ ಪರಿಹಾರಗಳ ಅನ್ವಯ ಕುರಿತು ಮಾಹೆ ಜತೆ ಮೈಕ್ರೋಸಾಫ್ಟ್ನ ಸಂಭವನೀಯ ಸಹಯೋಗದ ಕುರಿತು ಚರ್ಚಿಸಲಾಯಿತು. ಮೈಕ್ರೋಸಾಫ್ಟ್ ಇಂಡಿಯ ಅಧ್ಯಕ್ಷ ಅನಂತ್ ಮಹೇಶ್ವರಿ ಮತ್ತು ಕಂಟ್ರಿ ಮೆನೇಜರ್ ಆಶುತೋಷ್ ಗುಪ್ತ ಉಪಸ್ಥಿತರಿದ್ದರು.
ಸತ್ಯ ನಾದೆಳ್ಲ ಅವರು ಮಣಿಪಾಲ ಎಂಐಟಿಯ ಬಿಇ (ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್) ಪದವಿಯನ್ನು 1984-88ರಲ್ಲಿ ಓದುತ್ತಿರುವಾಗ ಮತ್ತು ಅನಂತರದಲ್ಲಿ ಮಣಿಪಾಲದಲ್ಲಿ ಆದ ಬದಲಾವಣೆ ಕುರಿತು ವಿವರಿಸುವ ಚಿತ್ರಹೊತ್ತಗೆ “ರೆಮಿನಿಸಸೆನ್ಸ್ ಆ್ಯಂಡ್ ರೀಕನೆಕ್ಟ್’ನ್ನು ನಾದೆಳ್ಲ ಅವರಿಗೆ ಕೊಡುಗೆಯಾಗಿ ನೀಡಲಾಯಿತು.
ಮಾಹೆಯ ಫ್ಯಾಕಲ್ಟಿ ಆಫ್ ಆರ್ಕಿಟೆಕ್ಚರ್‌ನಲ್ಲಿ 1989-94ರ ಸಾಲಿನಲ್ಲಿ ಕಲಿತ ಸತ್ಯ ಅವರ ಪತ್ನಿ ಅನುಪಮಾ ನಾದೆಳ್ಲÉ ಅವರಿಗೂ ಸ್ಮರಣೀಯ ಚಿತ್ರಗಳಿರುವ ಪುಸ್ತಕವನ್ನು ಕೊಡಲಾಯಿತು.
ಯುವ ಸಮೂಹಕ್ಕೆ
ಸಂದೇಶ ನೀಡಲು ಆಹ್ವಾನ
ಮಣಿಪಾಲದಲ್ಲಿ ತಾವು ಇದ್ದ ದಿನಗಳನ್ನು ಸ್ಮರಿಸಿಕೊಂಡ ಸತ್ಯ ನಾದೆಳ್ಲ ಅವರು, ಮಣಿಪಾಲದ ಶಿಲ್ಪಿ ಡಾ| ಟಿಎಂಎ ಪೈಯವರು ಹುಟ್ಟು ಹಾಕಿದ ಸಂಸ್ಥೆಗಳನ್ನು ಪ್ರಸಕ್ತ ನಾಯಕತ್ವವು ಜಾಗತಿಕ ಸಮುದಾಯದಲ್ಲಿ ಗುರುತಿಸುವಂತೆ ಮಾಡಿರುವುದನ್ನು ಬೆಟ್ಟು ಮಾಡಿದರು.
ಮಣಿಪಾಲಕ್ಕೆ ಆಗಮಿಸಿ ಸಾಧನೆಯ ಪಥದಲ್ಲಿ ಮುಂದುವರಿಯಲು ಯುವ ಸಮೂಹಕ್ಕೆ ಸಂದೇಶ ನೀಡಬೇಕು ಎಂದು ಮಾಹೆ ನಿಯೋಗವು ಮೈಕ್ರೋ ಸಾಫ್ಟ್ ಸಿಇಒ ಸತ್ಯ ನಾದೆಳ್ಲÉ ಅವರನ್ನು ಆಹ್ವಾನಿಸಿತು.