ಉಡುಪಿ: ಕೋವಿಡ್-19ನ ಸಂದಿಗ್ಧ ಸ್ಥಿತಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಸೇವೆ ಸಲ್ಲಿಸುವ ಅನೇಕ ಮಂದಿ ಸಮಾಜದಲ್ಲಿ ಕಾಣಸಿಗುತ್ತಾರೆ. ಕೋವಿಡ್ ಸೋಂಕಿತರಿಗೆ ವಿಳಂಬ ಮಾಡದೇ ಚಿಕಿತ್ಸೆ ಸಿಗಬೇಕು. ಸೋಂಕು ಹರಡುವಿಕೆ ಪ್ರಮಾಣ ತಗ್ಗಿಸಬೇಕೆಂಬ ಏಕೈಕ ಉದ್ದೇಶದಿಂದ ಸರಕಾರ, ಜಿಲ್ಲಾಡಳಿತದೊಂದಿಗೆ ಕೋವಿಡ್ ಪ್ರಯೋಗಾಲಯದ ಮೈಕ್ರೋಬಯೋಲಜಿಸ್ಟ್‌ಗಳು ಹಗಲು-ರಾತ್ರಿ ಲೆಕ್ಕಿಸದೆ ಸೂಕ್ತ ಸಮಯಕ್ಕೆ ವರದಿ ಕೊಟ್ಟಿರುವ ಪರಿಣಾಮ ಅದೆಷ್ಟೋ ಜೀವಗಳು ಉಳಿದಿವೆ.
ಸೂಕ್ಷ್ಮ ಕರ್ತವ್ಯ:
ಕೋವಿಡ್ ವರದಿ ವಿಳಂಬವಾದರೂ ಅಥವಾ ಅದಲು ಬದಲು ಆದರೂ ನಷ್ಟ ಸೋಂಕಿತನಿಗೆ. ಚಿಕಿತ್ಸೆ ವಿಳಂಬವಾಗಿ ಸಾವು- ನೋವು ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕೋವಿಡ್-19 ಆತಂಕ, ಸರಕಾರ ನಿಗದಿ ಪಡಿಸುವ ಗುರಿ, ಕುಟುಂಬ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕೆಲಸ ನಿರ್ವಹಿಸಬೇಕಾಗಿದೆ. ಕೆಲವೊಂದು ಲ್ಯಾಬ್‌ಗಳಲ್ಲಿ ಈಗಾಗಲೇ 2.5 ಲಕ್ಷಕ್ಕೂ ಮಿಕ್ಕಿ ಕೋವಿಡ್ ಪರೀಕ್ಷೆ ನಡೆದಿವೆ. ಉಡುಪಿ ಜಿಲ್ಲಾಸ್ಪತ್ರೆಯ ಕೋವಿಡ್ ಪ್ರಯೋಗಾಲಯದಲ್ಲಿ ಈ ತನಕ ಒಬ್ಬರೇ ಮೈಕ್ರೋಬಯೋಲಜಿಸ್ಟ್ 3 ಲಕ್ಷ ಟೆಸ್ಟ್ ನಡೆಸಿದ್ದಾರೆ.
ರಾತ್ರಿ-ಹಗಲು ಕರ್ತವ್ಯ:
ಕೋವಿಡ್-19 ಪರೀಕ್ಷೆಗೆ ಒಳಪಟ್ಟಿರುವ ವ್ಯಕ್ತಿಗಳಿಂದ ಸಂಗ್ರಹವಾಗಿರುವ ಗಂಟಲು ಸ್ರಾವವನ್ನು ಪರೀಕ್ಷೆಗೆ ಒಳಪಡಿಸಿ 24 ರಿಂದ 36 ಗಂಟೆಯೊಳಗೆ ವರದಿ ಒಪ್ಪಿಸಲಾಗುತ್ತಿದೆ. ವರದಿ ಒಪ್ಪಿಸುವುದು ವಿಳಂಬವಾದರೆ ಸೋಂಕು ಮತ್ತಷ್ಟು ಉಲ್ಬಣಗೊಂಡು ಮೃತರಾಗುವ ಸಾಧ್ಯತೆಯೂ ಹೆಚ್ಚಿದೆ. ಅಲ್ಲದೇ ಸೋಂಕು ಹರಡುವಿಕೆ ಪ್ರಮಾಣವೂ ಹೆಚ್ಚಿರುತ್ತದೆ. ಇದೆಲ್ಲ ತಪ್ಪಿಸಲು ಮೈಕ್ರೋಬಯೋಲಾಜಿಸ್ಟ್‌ಗಳು ಹಗಲು, ರಾತ್ರಿ ದುಡಿಯುತ್ತಿದ್ದಾರೆ. ಇವರ ಜತೆಗೆ ಲ್ಯಾಬ್‌ನ ತಾಂತ್ರಿಕ ಸಿಬಂದಿ, ಡೇಟಾ ಎಂಟ್ರಿ ಆಪರೇಟಿರ್‌ಗಳ ಸೇವೆಯೂ ಮಹತ್ತರವಾಗಿದೆ.
ಮೈಕ್ರೋಬಯೋಲಜಿಸ್ಟ್‌ಗಳ ಅಭಾವ :
ಮೈಕ್ರೋಬಯೋಲ ಜಿಸ್ಟ್‌ಗಳ ಅಭಾವ ಬಹಳಷ್ಟಿದೆ. ಎಂಬಿಬಿಎಸ್, ಎಂಡಿ ಮಾಡಿರುವ ಹೆಚ್ಚಿನ ಮೈಕ್ರೋ ಬಯೋಲಜಿಸ್ಟ್‌ಗಳು ಮೆಡಿಕಲ್ ಕಾಲೇಜುಗಳಲ್ಲಿ ಟೀಚಿಂಗ್‌ಗೆ ಸೇರಿಕೊಳ್ಳುತ್ತಾರೆ. ಅಲ್ಲಿ ಇಷ್ಟು ಒತ್ತಡವೂ ಇರುವುದಿಲ್ಲ. ಸೀಮಿತ ಅವಧಿಯ ಕೆಲಸ ಇರುತ್ತದೆ. ಅಲ್ಲದೇ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ಲ್ಯಾಬ್‌ಗಳಲ್ಲಿ ಕಾರ್ಯ ನಿರ್ವಹಿಸುವುದಕ್ಕೂ ಮೈಕ್ರೋಬಯೋಲಜಿಸ್ಟ್ ಮುಂದೆ ಬರುತ್ತಿಲ್ಲ.
ಉಡುಪಿ ಜಿಲ್ಲಾಸ್ಪತ್ರೆಯ ಕೋವಿಡ್ ಪ್ರಯೋಗಾಲಯದಲ್ಲಿ ಲ್ಯಾಬ್‌ನ ಮೈಕ್ರೋಬಯೋಲಜಿಸ್ಟ್ ಒಂದೇ ಒಂದು ರಜೆ ಮಾಡದೇ ನಿಜವಾದ ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆತಂಕದ ನಡುವೆ ಕೆಲಸ ಮಾಡುವ ಇವರ ಸೇವೆ ಬಗ್ಗೆ ನಮಗೆ ಹೆಮ್ಮೆ ಇದೆ.
–ಜಿ. ಜಗದೀಶ್, ಜಿಲ್ಲಾಧಿಕಾರಿ