ಉಡುಪಿ/ಪಡುಬಿದ್ರಿ: ಭಾರತದಲ್ಲಿ ಪ್ರಥಮ ಬಾರಿಗೆ ನೀರಿನಿಂದ ಟೇಕ್ ಆಫ್ ಆಗಿ ನೀರಿನಲ್ಲೇ ಲ್ಯಾಂಡ್ ಆಗುವ ಅತ್ಯಂತ ಹಗುರದ ಮೈಕ್ರೋ ಸೀಪ್ಲೇನ್ ಅನ್ನು ಹೆಜಮಾಡಿಯಲ್ಲಿ 8 ಮಂದಿ ಎಂಜಿನಿಯರಿಂಗ್ ಪದವೀಧರರ ತಂಡವು ಸಂಶೋಧನೆ ನಡೆಸಿ ಹಾರಿಸಿ ಸಾಧನೆ ಮಾಡಿದೆ.
ಈ ಸೀಪ್ಲೆ„ನ್ ದೇಶ ರಕ್ಷಣೆ, ನೆರೆ ಸಂದರ್ಭ ಬಳಕೆ, ಪ್ರವಾಸೋದ್ಯಮ ಬಳಕೆಗೆ ಅನುಕೂಲವಾಗುವಂತಿದೆ. ಸ್ಥಳೀಯ ನೆರವನ್ನಷ್ಟೇ ಬಳಸಿಕೊಂಡು ಉತ್ಸಾಹಿಗಳ ತಂಡ ಈ ಸಾಧನೆ ಮಾಡಿದ್ದು, ಹೆಚ್ಚಿನ ಸಂಶೋಧನೆಯ ಅಗತ್ಯವನ್ನು ಮನಗಂಡಿದೆ.
ಈ ತಂಡದ ಮುಖ್ಯಸ್ಥರು ಪುಷ್ಪರಾಜ್ ಅಮೀನ್ ನರಿಕುದ್ರು. ಡ್ರೋನ್ ಪೈಲೆಟ್ ಆಗಿರುವ ಅಭಿಷೇಕ್ ಕೋಟ್ಯಾನ್, ಟ್ರೈನಿ ಪೈಲಟ್ ಆಗಿರುವ ವಿನಯ್ ಯು., ಸಂತ ಅಲೋಶಿಯಸ್ ಕಾಲೇಜು ವಿದ್ಯಾರ್ಥಿನಿ ಅಶ್ವಿನಿ ರಾವ್, ಏರೋನಾಟಿಕಲ್ ಎಂಜಿನಿಯರ್ ಆಗಿರುವ ಶಯನಿ ರಾವ್, ರೇಶ್ಮಾ ಜೆ. ಬಂಗೇರ ಹೆಜಮಾಡಿ, ವಸುರಾಜ್ ಅಮೀನ್ ನಡಿಕುದ್ರು, ಏರೋನಾಟಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿ ಆಗಿರುವ ಉತ್ಸವ್ ಯು. ಅವರನ್ನು ಸೇರಿಸಿಕೊಂಡು, ಹೊಸ ಅನ್ವೇಷಣೆ ಮಾಡಲಾಗಿದೆ.
ನೆರವಿಗೆ ಯಾಚನೆ :
ಹೆಚ್ಚಿನ ಸಂಶೋಧನೆ, ಸುಧಾರಿತ ಸೀಪ್ಲೇನ್ ತಯಾರಿಗೆ ಆರ್ಥಿಕ ಸಂಕಷ್ಟವಿದ್ದು ಸಂಘ-ಸಂಸ್ಥೆಗಳು, ಸರಕಾರದ ನೆರವಿನ ಅಗತ್ಯವಿದೆ ಎಂದು ತಂಡದ ಮುಖ್ಯಸ್ಥ ಪುಷ್ಪರಾಜ್ ಅಮೀನ್ ನರಿಕುದ್ರು ಅವರು ಶುಕ್ರವಾರ ನಡೆದ ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಅಭಿಷೇಕ್ ಎಂ. ಕೋಟ್ಯಾನ್ ಉಳ್ಳಾಲ ಮಾತನಾಡಿ, ಇನ್ನಷ್ಟು ಸಂಶೋಧನೆಗೆ ಯಂತ್ರೋಪಕರಣಗಳು, ಸೇಫ್ಟಿ ಕಿಟ್ ಇನ್ನಿತರ ಸೌಕರ್ಯವನ್ನು ವ್ಯವಸ್ಥೆಗೊಳಿಸಬೇಕಿದೆ. ಇದನ್ನು ಸರಕಾರ ಮಾಡಿದೆ, ಇನ್ನಷ್ಟು ಸಾಧಿಸುವ ಉತ್ಸಾಹವಿದೆ ಎಂದರು. ಸರಕಾರ ವ್ಯವಸ್ಥೆಗೊಳಿಸಿದರೆ ಮತ್ತಷ್ಟು ಸಾಧಿಸುವ ಹುಮ್ಮಸ್ಸಿದೆ ಎಂದರು.
ಉತ್ಸವ್ ಉಮೇಶ್ ಮಂಗಳೂರು, ಶಯಾನಿ ರಾವ್ ಶೃಂಗೇರಿ, ಅಶ್ವಿನಿ ರಾವ್ ಶೃಂಗೇರಿ, ವಿನಯ್ ಯು. ಶಿವಮೊಗ್ಗ, ವಸುರಾಜ್ ಅಮೀನ್ ನರಿಕುದ್ರು, ರೇಷ್ಮಾ ಜೆ. ಬಂಗೇರ ಹೆಜಮಾಡಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
7 ಲಕ್ಷ ರೂ. ವೆಚ್ಚ :
ಸೀಪ್ಲೇನ್ ತಯಾರಿಸಲು ಸರಿಯಾದ ಸ್ಥಳಾವಕಾಶ, ವರ್ಕ್‌ಶಾಪ್ ಇಲ್ಲದೆ, 3 ವರ್ಷಗಳಿಂದ ಹೆಜಮಾಡಿಯಲ್ಲಿ ಇದರ ತಯಾರಿ ನಡೆದಿದೆ. ಈವರೆಗೆ ಮನೆಯವರು ಮತ್ತು ನೆರೆಹೊರೆಯವರಿಂದ ಸಾಲ ಮಾಡಿ 7 ಲ.ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಬೇಕಾದ ಅವಶ್ಯ ಕೆಲವು ಸಾಮಗ್ರಿಗಳನ್ನು ಮಾತ್ರ ವಿದೇಶದಿಂದ ತರಿಸಿಕೊಳ್ಳಲಾಗಿದೆ. ಸುಮಾರು 180 ಕೆಜಿ ತೂಕವಿರುವ ಈ ಸೀಪ್ಲೇನ್ 5 ಮೀ. ಉದ್ದವಿದ್ದು, ಇದರ ರೆಕ್ಕೆ 5 ಅಡಿ ಉದ್ದವಿದೆ. ಇದಕ್ಕೆ ಇಂಧನವಾಗಿ ಪೆಟ್ರೋಲ್ ಬಳಸಲಾಗುತ್ತದೆ. ತಂಡ ಈವರೆಗೆ ಪೇಟೆಂಟ್‌ಗೆ ಮಾಡಿಲ್ಲ. 200 ಕೆ.ಜಿ. ಮೇಲ್ಪಟ್ಟ ಸೀಪ್ಲೇನ್, ಸ್ಪೀಡ್‌ಬೋಟ್ ಮತ್ತು ಎಲೆಕ್ಟ್ರಿಕ್ ಮಾದರಿಯ ತಯಾರಿಕೆಗೆ ಉತ್ಸಾಹ ಹೊಂದಿದ್ದು ಆಗ ಪೇಟೆಂಟ್, ಲೈಸೆನ್ಸ್‌ಗಳಿಗೆ ಪ್ರಯತ್ನಿಸುವುದಾಗಿ ತಂಡ ಹೇಳಿಕೊಂಡಿದೆ.