ಪ್ಯಾರಿಸ್: ಕತಾರ್‌ಗೆ 2022ರ ಫುಟ್‌ಬಾಲ್ ವಿಶ್ವಕಪ್ ಆತಿಥ್ಯ ನೀಡಿರುವುದರ ಹಿಂದೆ ಭಾರೀ ಮೊತ್ತದ ಲಂಚ ಪಾವತಿ ಯಾಗಿರುವ ಅನುಮಾನ ಬಂದಿದ್ದು, ಇದಕ್ಕೆ ಸಂಬಂಧಿಸಿದಂತೆ ಯುರೋಪಿಯನ್ ಫುಟ್‌ಬಾಲ್ ಅಸೋ.ನ ಮಾಜಿ ಮುಖ್ಯಸ್ಥ ಮೈಕೆಲ್ ಪ್ಲಾಟಿನಿಯನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗಿದೆ.
ಪ್ಲಾಟಿನಿ 2002ರಿಂದ 2015ರ ತನಕ ಫಿಫಾದ ಕಾರ್ಯಕಾರಿ ಸಮಿತಿಯಲ್ಲಿದ್ದರು. ಎಂಟು ವರ್ಷದ ಅಧಿಕಾರಾವಧಿ ಇದ್ದರೂ ಅವ್ಯವಹಾರ ನಡೆಸಿದ ಆರೋಪದಲ್ಲಿ ಫಿಫಾ ಅವರನ್ನು 2015ರಲ್ಲಿ ಎಂಟು ವರ್ಷದ ಅವಧಿಗೆ ಫುಟ್‌ಬಾಲ್ ಚಟುವಟಿಕೆಗಳಿಂದ ನಿಷೇಧಿಸಿತ್ತು. ಬಳಿಕ ನ್ಯಾಯಾಲಯ ಈ ನಿಷೇಧವನ್ನು ನಾಲ್ಕು ವರ್ಷಕ್ಕಿಳಿಸಿದ್ದು, ನಿಷೇಧದ ಅವಧಿ ಕಳೆದ ಮಾರ್ಚ್‌ಗೆ ಮುಕ್ತಾಯವಾಗಿದೆ.
ಕತಾರ್‌ಗೆ 2022ರ ಫುಟ್‌ಬಾಲ್ ವಿಶ್ವಕಪ್ ಕೂಟದ ಆತಿಥ್ಯ ವಹಿಸಿರುವುದರ ಹಿಂದೆ ಭಾರೀ ಮೊತ್ತದ ಲಂಚ ಕೈಬದಲಾಗಿದೆ. ಇದೊಂದು ಭ್ರಷ್ಟಾಚಾರದ ಪ್ರಕರಣವೆಂದು ಪರಿಗಣಿಸಿ ತನಿಖೆ ನಡೆಯುತ್ತಿದೆ.
ಕತಾರ್‌ನಲ್ಲಿ ಫುಟ್‌ಬಾಲ್ ವೀಕ್ಷಣೆಗೆ ಸಾಕಷ್ಟು ಸಂಖ್ಯೆಯ ವೀಕ್ಷಕರು ಸಿಗುವುದು ಅನುಮಾನವಿದೆ. ಅಲ್ಲದೆ ಅಲ್ಲಿ ತೀವ್ರ ಸೆಕೆಯಿರುತ್ತದೆ. ಫುಟ್‌ಬಾಲ್‌ನಲ್ಲೂ ಕತಾರ್ ಅತ್ಯುತ್ತಮ ತಂಡವೇನೂ ಅಲ್ಲ. ಹೀಗಿರುವಾಗ ಆ ದೇಶಕ್ಕೆ ಫುಟ್‌ಬಾಲ್ ವಿಶ್ವಕಪ್ ಆತಿಥ್ಯ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆ ಎದ್ದಿದೆ.
ಕತಾರ್ ವಿಶ್ವಕಪ್ ಆತಿಥ್ಯ ವಹಿಸುವ ಘೋಷಣೆಯಾಗುವ ಒಂಭತ್ತು ದಿನ ಮೊದಲು ಫ್ರಾನ್ಸ್ ನ ಅಂದಿನ ಅಧ್ಯಕ್ಷ ನಿಕೊಲಸ್ ಸರ್ಕೊ ಜಿ ಏರ್ಪಡಿಸಿದ್ದ ಔತಣ ಕೂಟ ವೊಂದರಲ್ಲಿ ಏನೋ ಮಸಲತ್ತು ನಡೆದಿರುವ ಅನುಮಾನವಿದೆ. ಈ ಔತಣ ಕೂಟದಲ್ಲಿ ಆಗ ಕತಾರ್‌ನ ಪ್ರಧಾನಿಯಾಗಿದ್ದ ಶೇಖ್ ತಮೀಮ್ ಬೆನ್ ಹಮದ್ ಅಲ್ ತನಿ ಮತ್ತು ಪ್ಲಾಟಿನಿ ಭಾಗವಹಿಸಿದ್ದರು.