Advertisement

ದಾಳಿ ನಡೆಸಿದ್ದರಿಂದ ಪೊಲೀಸರ ಕ್ರಮ; ಅಶ್ರುವಾಯು ಸಿಡಿಸಿದ್ದಕ್ಕೆ ಕೇಂದ್ರ ಸಮರ್ಥನೆ

12:27 PM Feb 03, 2021 | Team Udayavani |

ನವದೆಹಲಿ: ಪ್ರತಿಭಟನೆ ನಡೆಸುತ್ತಿದ್ದ ರೈತರು ಜ.26ರಂದು ನವದೆಹಲಿಯಲ್ಲಿ ಪೊಲೀಸರ ವಿರುದ್ಧ ಆಕ್ರಮಣಕಾರಿಯಾಗಿ ದಾಳಿ ನಡೆಸಿದರು. ಹೀಗಾಗಿ, ಅವರು ಕ್ರಮ ಕೈಗೊಳ್ಳಲೇ ಬೇಕಾಯಿತು ಎಂದು ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಜಿ.ಕಿಶನ್‌ ರೆಡ್ಡಿ 2020ರ ಸೆಪ್ಟೆಂಬರ್‌ನಿಂದ ಡಿಸೆಂಬರ್‌ ವರೆಗೆ 39 ಕೇಸುಗಳನ್ನು ದಾಖಲಿಸಲಾಗಿದೆ. ಪ್ರತಿಭಟನೆ ನಡೆಸುತ್ತಿರುವ ರೈತರು ಕೊರೊನಾ ಸೋಂಕು ಇದ್ದರೂ ಸಾಮಾಜಿಕ ಅಂತರ ಪಾಲನೆ ಮಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

Advertisement

ಇದನ್ನೂ ಓದಿ:ದಾಖಲೆ ಜಿಗಿತ; 50 ಸಾವಿರದ ಗಡಿ ದಾಟಿದ ಬಾಂಬೆ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ

ಗಣರಾಜ್ಯ ದಿನದಂದು ರೈತರು ಆಕ್ರಮಣಕಾರಿಯಾಗಿ ಪೊಲೀಸರು ಮತ್ತು ಇತರ ಭದ್ರತಾ ಸಿಬ್ಬಂದಿ ಮೇಲೆ ಎರಗಿದರು. ಹೀಗಾಗಿ, ಅವರ ನಿಯಂತ್ರಣಕ್ಕೆ ಲಾಠಿ ಪ್ರಹಾರ, ಅಶ್ರುವಾಯು ಸೆಲ್‌ ಸಿಡಿಸಬೇಕಾಯಿತು ಎಂದು ಹೇಳಿದ್ದಾರೆ. ಜತೆಗೆ ಅವರು ಸರ್ಕಾರಿ ಆಸ್ತಿಯ ಹಾಳು ಮಾಡಲು ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇದೇ ವೇಳೆ ಲೋಕಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲದ ನಡುನೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ರೈತ ಮುಖಂಡರ ಜತೆಗೆ ಮಾತುಕತೆ ನಡೆಸಲು ಸರ್ಕಾರ ಸಿದ್ಧವಿದೆ ಎಂದು ತಿಳಿಸಿದ್ದಾರೆ. ಮತ್ತೂಂದೆಡೆ, ಹರ್ಯಾ ಣದ ಏಳು ಜಿಲ್ಲೆಗಳಲ್ಲಿ ಫೆ.3ರ ವರೆಗೆ ಇಂಟರ್‌ನೆಟ್‌ ಸಂಪರ್ಕವನ್ನು ಬಂದ್‌ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ.

ಇಂದು ಸುಪ್ರೀಂನಲ್ಲಿ ವಿಚಾರಣೆ: ಜ.26ರಂದು ನವದೆಹಲಿಯಲ್ಲಿ ನಡೆದ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಬುಧವಾರ ನಡೆಯಲಿದೆ. ಘಟನೆ ಬಗ್ಗೆ ತನಿಖೆ ನಡೆಸಲು ಆಯೋಗ ರಚನೆ ಮಾಡಬೇಕು ಎಂಬ ಮನವಿಯನ್ನೂ ಮಾಡಿಕೊಳ್ಳಲಾಗಿದೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಪೀಠ ಅದರ ವಿಚಾರಣೆ ನಡೆಸಲಿದೆ.

ರೈತರು ಬರದಂತೆ ಕಬ್ಬಿಣದ ಮೊಳೆ: ದೆಹಲಿಯ ಮೂರು ಗಡಿ ಪ್ರದೇಶಗಳಿಂದ ಮಹಾನಗರಕ್ಕೆ ಬರದಂತೆ ಪೊಲೀಸರು ಬಹು ಹಂತದ ಭದ್ರತಾ ವ್ಯವಸ್ಥೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಅದರಲ್ಲಿ ವಿಶೇಷವಾಗಿ ರೈತರು ಮುಂದೊತ್ತಿ ಬಾರದಂತೆ ಕಬ್ಬಿಣದ ಮೊಳೆಗಳನ್ನು ರಸ್ತೆಗಳಲ್ಲಿ ಕಾಂಕ್ರೀಟ್‌ ಮೂಲಕ ಅಳವಡಿಸಿದ್ದಾರೆ. ಇದರ ಜತೆಗೆ ಬ್ಯಾರಿಕೇಡ್‌ಗಳು, ಮತ್ತು ಮುಳ್ಳಿನ ತಂತಿಗಳನ್ನು ಅಳವಡಿಸಿದ್ದಾರೆ. ಇದರ ಜತೆಗೆ ಹಲವಾರು ಸ್ಥಳಗಳಲ್ಲಿ ಆಳದ ತಗ್ಗುಗಳನ್ನು ತೋಡಲಾಗಿದೆ.

Advertisement

ಕಿರುಕುಳ ನಿಲ್ಲದೆ ಮಾತುಕತೆ ಇಲ್ಲ: ಕೇಂದ್ರ ಸರ್ಕಾರ ಮೂರು ಗಡಿ ಪ್ರದೇಶಗಳಲ್ಲಿ ಇಂಟರ್‌ನೆಟ್‌ ಸಂಪರ್ಕ ಕಡಿತ ಸೇರಿದಂತೆ ಹಲವಾರು ರೀತಿ ಕಿರುಕುಳ ನೀಡುತ್ತಿದೆ. ಅದು ನಿಲ್ಲುವವರೆಗೆ ಯಾವುದೇ ರೀತಿಯ ಮಾತುಕತೆ ನಡೆಸುವುದಿಲ್ಲ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ. ರಸ್ತೆಗಳನ್ನು ಅಗೆದು ಹಾಕಲಾಗಿದೆ, ಮುಳ್ಳು ತಂತಿ ಬೇಲಿ ಹರಡಲಾಗಿದೆ ಮತ್ತು ಕಾಂಕ್ರಿಟ್‌ ಮೂಲಕ ಕಬ್ಬಿಣದ ಮೊಳೆಗಳನ್ನು ಅಳವಡಿಸಿದೆ ಕೇಂದ್ರ ಸರ್ಕಾರ ಎಂದು ಮೋರ್ಚಾ ದೂರಿದೆ.

Advertisement

Udayavani is now on Telegram. Click here to join our channel and stay updated with the latest news.

Next