ನವದೆಹಲಿ: ಕೆನಡಾ ಮೂಲದ ಪಾತಕಿ ಲಖ್ಬೀರ್ ಸಿಂಗ್ ಲಾಂಡಾನನ್ನು ಗೃಹ ಸಚಿವಾಲಯ (MHA) ಅಧಿಕೃತವಾಗಿ ಭಯೋತ್ಪಾದಕ ಎಂದು ಘೋಷಿಸಿದೆ.
ಇದನ್ನೂ ಓದಿ:Ayodhya: ಅಯೋಧ್ಯಾ ಧಾಮ್ ರೈಲು ನಿಲ್ದಾಣ ಉದ್ಘಾಟಿಸಿದ ಪ್ರಧಾನಿ ಮೋದಿ
ಕೆನಡಾ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರಿದಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಕೆನಡಾದಲ್ಲಿ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡ ಇದೆ ಎಂಬುದಾಗಿ ಕೆನಡಾ ಪ್ರಧಾನಿ ಜಸ್ಟೀನ್ ಟ್ರ್ಯೂಡೊ ಆರೋಪಿಸಿದ್ದ ನಂತರ ಉಭಯ ದೇಶಗಳ ನಡುವೆ ವಿವಾದದ ಕಿಡಿ ಹೊತ್ತಿಕೊಂಡಿತ್ತು.
ಗೃಹ ಸಚಿವಾಲಯದ ಅಧಿಕೃತ ಹೇಳಿಕೆ ಪ್ರಕಾರ, ನಿರಂಜನ್ ಸಿಂಗ್ ಮತ್ತು ಪರ್ಮೀಂದರ್ ಕೌರ್ ಪುತ್ರನಾಗಿರುವ ಲಖ್ಬೀರ್ (34ವರ್ಷ) ಸಿಂಗ್ ಲಾಂಡಾ, ಪಾಕಿಸ್ತಾನದ ಗಡಿ ಹಂಚಿಕೊಂಡಿರುವ ಪಂಜಾಬ್ ನ ತರನ್, ತರಣ್ ಜಿಲ್ಲೆಯಲ್ಲಿ ನೆಲೆಸಿರುವ VPO ಹರಿಕೆಯಲ್ಲಿ ವಾಸ್ತವ್ಯವಾಗಿದ್ದಾರೆಂದು ತಿಳಿಸಿದೆ.
ಕಾನೂನು ಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆ 1967, ಸಬ್ ಸೆಕ್ಷನ್ (1) ಮತ್ತು ಸಬ್ ಸೆಕ್ಷನ್ (2) ಮತ್ತು ಸೆಕ್ಷನ್ (35)ರ ಪ್ರಕಾರ, ಕೇಂದ್ರ ಸರ್ಕಾರ ಲಾಂಡಾನನ್ನು ಭಯೋತ್ಪಾದಕ ಎಂದು ಘೋಷಿಸಿರುವುದಾಗಿ ಪ್ರಕಟನೆಯಲ್ಲಿ ವಿವರಿಸಿದೆ.
ಲಾಂಡಾ ಪ್ರಸ್ತುತ ಕೆನಡಾದ ಆಲ್ಬರ್ಟಾದ ರಾಜಧಾನಿ ಎಡ್ಮಂಟನ್ ನಲ್ಲಿ ನೆಲೆಸಿದ್ದು, ಈತ ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ನ ಸದಸ್ಯನಾಗಿದ್ದಾನೆ. ಬಬ್ಬರ್ ಖಾಲ್ಸಾ ಇಂಟರ್ ನ್ಯಾಷನಲ್ ಸಂಘಟನೆಯನ್ನು ಈಗಾಗಲೇ ಭಯೋತ್ಪಾದಕ ಸಂಘಟನೆಯ ಪಟ್ಟಿಗೆ ಸೇರಿಸಲಾಗಿದೆ. ಈ ಸಂಘಟನೆಯ ಸದಸ್ಯನಾಗಿರುವ ಲಾಂಡಾ ಕೂಡಾ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾಗಿರುವುದಾಗಿ ಗೃಹಸಚಿವಾಲಯ ಪ್ರಕಟನೆಯಲ್ಲಿ ತಿಳಿಸಿದೆ.