ಲಕ್ಷ್ಮೇಶ್ವರ: ಪಟ್ಟಣದ ಎಂಜಿಎಂ ಫೌಂಡೇಶನ್‌ನಿಂದ ದೊಡ್ಡೂರ ರಸ್ತೆಯಲ್ಲಿ ನಿರ್ಮಿಸಿರುವ ಎಂಜಿಎಂ ಯುನಿವರ್ಸಲ್ ಸ್ಕೂಲ್‌ನ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ 10 ರಂದು ಬೆಳಿಗ್ಗೆ 10.15ಕ್ಕೆ ಬಾಳೆಹೊನ್ನೂರಿನ ಶ್ರೀಮದ್ ರಂಭಾಪುರಿ ಜಗದ್ಗುರು ಡಾ|ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನ್ನಿಧ್ಯದಲ್ಲಿ ನೆರವೇರಲಿದೆ ಎಂದು ಫೌಂಡೇಶನ್ ಅಧ್ಯಕ್ಷ ವಿಶ್ವನಾಥ ಮಹಾಂತಶೆಟ್ಟರ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆ ಮಲ್ಲೇಶಪ್ಪ ಮಹಾಂತಶೆಟ್ಟರ ಮತ್ತು ಅಜ್ಜಣ್ಣ ಮಹಾಂತಶೆಟ್ಟರ ಅವರ ಸಲಹೆ-ಮಾರ್ಗದರ್ಶನದಂತೆ ವ್ಯಾಪಾರದ ಜತೆಗೆ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳು, ಜನೋಪಯೋಗಿ ಸೇವಾ ಕಾರ್ಯಗಳನ್ನು ಫೌಂಡೇಶನ್ ಮಾಡುತ್ತಿದ್ದೇವೆ. ಪಟ್ಟಣ ಸೇರಿ ತಾಲೂಕಿನ ಬಡ ಮಕ್ಕಳ ಶಿಕ್ಷಣಕ್ಕಾಗಿ 2014ರಲ್ಲಿ ಎಲ್‌ಕೆಜಿಯಿಂದ ಆರಂಭಗೊಂಡ ಶಾಲೆಯಲ್ಲಿ ಇದೀಗ 6ನೇ ತರಗತಿವರೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದೀಗ ದೊಡ್ಡೂರ ರಸ್ತೆಯಲ್ಲಿನ 35 ಎಕರೆ ಜಮೀನಿನಲ್ಲಿ ಸಕಲ ಸೌಲಭ್ಯ ಹೊಂದಿದ ಶಾಲೆ ನಿರ್ಮಿಸಲಾಗಿದೆ. ಬರುವ ದಿನಗಳಲ್ಲಿ ಇಲ್ಲಿ ವಸತಿಯುತ ಉನ್ನತ ಶಿಕ್ಷಣ, ನ್ಯಾಚುರೋಪತಿ ಶಿಕ್ಷಣ, ವೃದ್ಧಾಶ್ರಮ ನಡೆಸುವ ಉದ್ದೇಶ ಹೊಂದಲಾಗಿದೆ. ಪಟ್ಟಣ ಸೇರಿ ತಾಲೂಕಿನಲ್ಲಿ ನಡೆಯುವ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಫೌಂಡೇಶನ ಕಾರ್ಯದರ್ಶಿ ಬಸವೇಶ ಮಹಾಂತಶೆಟ್ಟರ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ಪರಿಸರ ದಿನಾಚರಣೆ ದಿನ 2500 ಸಸಿಗಳನ್ನು ನೆಟ್ಟು ನಿರಂತರ ಪೋಷಿಸುವ ಕಾರ್ಯ ಮಾಡಲಾಗುತ್ತಿದೆ. ಕಳೆದ 2 ವರ್ಷ ಕೋವಿಡ್ ಸಂದರ್ಭದಲ್ಲಿ ತಾಲೂಕಿನಾದ್ಯಂತ ಕೊರೊನಾ ಜಾಗೃತಿ ಗೋಡೆ ಬರಹ, ವಾಲ್ ಪೋಸ್ಟರ್ ಸೇವೆ ಮತ್ತು ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯ, ಬೇಸಿಗೆ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರಿನ ಅರವಟಿಗೆ ಸೇವೆ, ಸಂದರ್ಭಕ್ಕನುಸಾರವಾಗಿ ನಿಸ್ವಾರ್ಥದಿಂದ ಸಾಮಾಜಿಕ ಕಾರ್ಯ ಮಾಡಲಾಗುತ್ತಿದೆ. ಬರುವ ದಿನಗಳಲ್ಲಿ ಈ ಸೇವಾ ಕಾರ್ಯ ಇನ್ನಷ್ಟು ಹೆಚ್ಚು ಮಾಡುವ ಉದ್ದೇಶ ಫೌಂಡೇಶನದ್ದಾಗಿದೆ ಎಂದು ತಿಳಿಸಿದರು. ಶಾಲಾ ಉದ್ಘಾಟನೆ ಸಮಾರಂಭದಲ್ಲಿ ಮುಕ್ತಿಮಂದಿರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿರುವರು.
ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಲಾ ಕಟ್ಟಡ ಉದ್ಘಾಟಿಸುವರು. ಕೃಷಿ ಸಚಿವ ಬಿ.ಸಿ.ಪಾಟೀಲ ವಿದ್ಯಾರ್ಥಿ ನಿಲಯ ಕಟ್ಟಡ ಶಂಕುಸ್ಥಾಪನೆ ನೆರವೇರಿಸುವರು. ಸಚಿವ ಸಿ.ಸಿ.ಪಾಟೀಲ ಕ್ರೀಡಾ ಸಮುತ್ಛಯದ ಶಿಲಾನ್ಯಾಸ ನೆರವೇರಿಸುವರು. ಎಂಜಿಎಂ ಫೌಂಡೇಶನ್ ಗೌರವಾಧ್ಯಕ್ಷರಾದ ಮರಿತಮ್ಮಪ್ಪ(ಅಜ್ಜಣ್ಣನವರು)ಗದಿಗೆಪ್ಪ ಮಹಾಂತಶೆಟ್ಟರ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಸಂಸದ ಶಿವಕುಮಾರ ಉದಾಸಿ, ಶಾಸಕರಾದ ರಾಮಣ್ಣ ಲಮಾಣಿ, ಎಸ್.ವಿ. ಸಂಕನೂರ, ಪರಣ್ಣ ಮುನವಳ್ಳಿ, ಕಳಕಪ್ಪ ಬಂಡಿ, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಕೆಎಲ್‌ಇ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಉದ್ಯಮಿ ಸಿ.ಜಿ. ಪಾಟೀಲ, ಧಾರವಾಡ ಜಿಪಂ ಸಿಇಒ ಡಾ.ಸುರೇಶ ಇಟ್ನಾಳ, ಗ್ರಾಪಂ ಅಧ್ಯಕ್ಷೆ ನೀಲಮ್ಮ ಇಟಗಿ ಸೇರಿ ಮಾಜಿ ಶಾಸಕರು, ಲಕ್ಷೆ ¾àಶ್ವರ ಪುರಸಭೆ ಮತ್ತು ದೊಡೂxರ ಗ್ರಾಪಂ ಆಡಳಿತ ಮಂಡಳಿ, ಉದ್ಯಮಿಗಳು, ಗಣ್ಯರು, ವ್ಯಾಪಾರಸ್ಥರು, ಶಿಕ್ಷಣ ಪ್ರೇಮಿಗಳು, ಅಧಿಕಾರಿಗಳು ಆಗಮಿಸುವರು ಎಂದು ತಿಳಿಸಿದರು.