ಉಡುಪಿ: ಎಂಜಿಎಂ ಕಾಲೇಜು ನ್ಯಾಕ್ ಎ+ ಗ್ರೇಡ್ ಪಡೆ ದಿರುವ ಹಿನ್ನೆಲೆಯಲ್ಲಿ ಬುಧವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಿದ ಹರ್ಷಾ ಚರಣೆಯಲ್ಲಿ ಈ ಪ್ರಕ್ರಿಯೆ ಯಲ್ಲಿ ಸಹಕರಿಸಿದವರನ್ನು ಅಭಿನಂದಿಸಲಾಯಿತು.
ಉಡುಪಿ ಜಿಲ್ಲಾ ಭೌಗೋಳಿಕ ಪ್ರದೇಶದಲ್ಲಿ ಆರಂಭಗೊಂಡ ಪ್ರಥಮ ಕಾಲೇಜಾದ ಎಂಜಿಎಂ ಕಾಲೇಜಿಗೆ ಹಲವು ವರ್ಷಗಳ ಸತತ ಪ್ರಯತ್ನಗಳಿಂದ ನ್ಯಾಕ್ ಎ+ ಶ್ರೇಣಿ ಮಾನ್ಯತೆ ದೊರಕಿದೆ. ಇದಕ್ಕಾಗಿ ಪ್ರಯತ್ನಿಸಿದ ಇಡೀ ತಂಡ ಅಭಿನಂದನೀಯ. ಮುಂದೆ ಎ++ ಗ್ರೇಡ್ ದೊರಕುವಂತಾಗಲು ಈಗಿಂದೀಗಲೇ ಪ್ರಯತ್ನಿಸಬೇಕು ಎಂದು ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಕರೆ ನೀಡಿದರು.
ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಸಿಗಲೂ ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರು ಉತ್ಸುಕರಾಗಿದ್ದು ಆ ಕುರಿತೂ ಪ್ರಯತ್ನಗಳು ನಡೆಯಲಿವೆ. ಈ ಎಲ್ಲ ಸಾಧನೆಗಳಿಗೆ ಪೂರಕವಾದ ಮೂಲ ಸೌಲಭ್ಯ, ಮಾನವ ಸಂಪನ್ಮೂಲ ಲಭ್ಯ ಇದೆ ಎಂದು ಡಾ| ಬಲ್ಲಾಳ್ ಹೇಳಿದರು.
ಮಾಹೆ ವಿ.ವಿ. ಸಹಕುಲಪತಿ ಡಾ| ನಾರಾಯಣ ಸಭಾಹಿತ್ ಮಾತನಾಡಿ, ಕಾಲೇಜಿಗೆ ಈ ಸ್ಥಾನ ಪ್ರಾಪ್ತಿಯಾಗಿರುವುದು ತಂಡ ಪ್ರಯತ್ನದ ಫಲವಾಗಿದೆ. ಯಶಸ್ಸಿನ ಹಿಂದೆ ಪ್ರಯತ್ನದ ಬಲವಿರುತ್ತದೆ. ಮುಂದಿನ ದಿನಗಳಲ್ಲಿ ಎ++ ಗ್ರೇಡ್ ಸಿಗುವಂತಾಗಬೇಕು ಎಂದು ಶುಭ ಕೋರಿದರು.
ಅಧ್ಯಕ್ಷತೆಯನ್ನು ಎಂಜಿಎಂ ಕಾಲೇಜು ಟ್ರಸ್ಟ್ ಅಧ್ಯಕ್ಷ ಟಿ. ಸತೀಶ್ ಯು. ಪೈ ವಹಿಸಿದ್ದರು. ಟ್ರಸ್ಟ್ ವಿಶ್ವಸ್ತ ಟಿ. ಅಶೋಕ್ ಪೈ ಉಪಸ್ಥಿತರಿದ್ದರು. ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಪ್ರಸ್ತಾವನೆಗೈದರು. ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಡಾ| ವಿಶ್ವನಾಥ ಪೈ ಸ್ವಾಗತಿಸಿ, ಐಕ್ಯೂಎಸಿ ಸಮನ್ವಯಕಾರ ಪ್ರೊ| ಅರುಣ ಕುಮಾರ್ ವಂದಿಸಿದರು. ಉಪನ್ಯಾಸಕ ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯಾಕ್ ಮಾನ್ಯತೆ ದೊರಕಲು ಸಹಕರಿಸಿದ ಹಿಂದಿನ ಪ್ರಾಂಶುಪಾಲರಾದ ಪ್ರೊ| ಕುಸುಮಾ ಕಾಮತ್, ಡಾ| ದೇವಿದಾಸ್ ನಾಯ್ಕ, ಮಾಹೆ ವಿ.ವಿ. ಅಧಿಕಾರಿಗಳಾದ ಕ್ರಿಸ್ಟೋ ಫರ್ ಸುಧಾಕರ್, ಸಂದೀಪ್ ಶೆಣೈ, ನಿವೃತ್ತ ಪ್ರಾಧ್ಯಾಪಕ ಡಾ| ಸುರೇಶ ರಮಣ ಮಯ್ಯ, ಏಳು ಮಾನದಂಡಗಳ ವಿಭಾಗ ಸಂಚಾಲಕರನ್ನು, ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು.ವಿನೀತ್ ರಾವ್, ಪ್ರಾಂಶುಪಾಲರು, ಐಕ್ಯೂಎಸಿ ಸಂಚಾಲಕರು, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಧನುಷ್ ಅವರನ್ನು ಅಭಿನಂದಿಸಲಾಯಿತು.