ಉಡುಪಿ: ಮಹಾತ್ಮಾ ಗಾಂಧಿ ಮೆಮೋರಿಯಲ್ (ಎಂಜಿಎಂ) ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಡಿ. 23ರಂದು ಕಾಲೇಜಿನ ಆವರಣದಲ್ಲಿ “ಅಮೃತ ಸಂಗಮ’ ಕಾರ್ಯಕ್ರಮ ಜರಗಲಿದೆ.
ಅಂದು ಬೆಳಗ್ಗೆ 9.30ಕ್ಕೆ ಮಾಧವ ರಕ್ಷಾ ಆಡಳಿತ ಸೌಧ ಆವರಣದಲ್ಲಿರುವ ಡಾ| ಟಿಎಂಎ ಪೈ ಅವರ ಪುತ್ಥಳಿಗೆ ಗೌರವಾರ್ಪಣೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. 9.45ಕ್ಕೆ ಹಳೇ ವಿದ್ಯಾರ್ಥಿಗಳ ಕಾಲೇಜಿನ ಬದುಕನ್ನು ನೆನಪಿಸುವ ಫೋಟೋ ಗ್ಯಾಲರಿ ಪ್ರದರ್ಶನ ಉದ್ಘಾಟನೆಯು ಗೀತಾಂಜಲಿ ಸಭಾಭವನದಲ್ಲಿ ನಡೆಯಲಿದೆ.
ಅನಂತರ ಎಂಜಿಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗೂ ಕಾಲೇಜಿನ ಪ್ರಥಮ ಬ್ಯಾಚ್‌ನ ವಿದ್ಯಾರ್ಥಿಗಳು ಅಮೃತ ಸಂಗಮವನ್ನು ಮುದ್ದಣ ಮಂಟಪದಲ್ಲಿ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 10.15ರ ಅನಂತರ ಹಳೇ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟಗಳು, ಪ್ರತಿಭಾ ವೈಭವಗಳ ಅನಾವರಣ ನಡೆಯಲಿದೆ.
ಅಮೃತ ಸಂಗಮದ ಸಭಾ ಕಾರ್ಯಕ್ರಮವು ಮಧ್ಯಾಹ್ನ 2.30ರಿಂದ ಮುದ್ದಣ ಮಂಟಪದಲ್ಲಿ ಎಂಜಿಎಂ ಕಾಲೇಜು ವಿಶ್ವಸ್ತ ಮಂಡಳಿಯ ಅಧ್ಯಕ್ಷ ಟಿ. ಸತೀಶ್ ಯು. ಪೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷ ಡಾ| ಎಚ್.ಎಸ್.ಬಲ್ಲಾಳ್ ಶುಭಾಶಂಸನೆಗೈಯಲಿದ್ದಾರೆ.
ಜಮ್ಮು-ಕಾಶ್ಮೀರ ಸರಕಾರದ ಮುಖ್ಯ ಕಾರ್ಯದರ್ಶಿ ಹಿರಿಯಡಕ ರಾಜೇಶ್ ಪ್ರಸಾದ್, ಕಾಲೇಜಿನ ನಿವೃತ್ತ ಪ್ರಾಂಶುಪಾಲ ಹಾಗೂ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷ ಪ್ರೊ| ಶ್ರೀಶ ಆಚಾರ್ಯ, ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಸಂಜಯ ಹೆಗ್ಡೆ, ಮಾಹೆ ಸಿಒಒ ಡಾ| ಆನಂದ ವೇಣುಗೋಪಾಲ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
1949ರಿಂದ 1970ರ ಅವಧಿಯಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ನಿವೃತ್ತ ಪ್ರಾಧ್ಯಾಪಕರು, ನಿವೃತ್ತ ಶಿಕ್ಷಕಕೇತರ ಸಿಬಂದಿಗೆ ಸಮ್ಮಾನ ನಡೆಯಲಿದೆ. ಇದಾದ ಅನಂತರ ಹಳೇ ವಿದ್ಯಾರ್ಥಿಗಳಿಂದ ಪುನಃ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ ಎಂದು ಸಂಘದ ಪ್ರಕಟನೆ ತಿಳಿಸಿದೆ.