Advertisement

ಮೇ 3ರವರೆಗೆ ಎಂಜಿ ರಸ್ತೆ ಮಾರುಕಟ್ಟೆ ಬಂದ್‌

05:54 PM Apr 24, 2020 | Suhan S |

ಮೈಸೂರು:  ಕೋವಿಡ್ 19 ಸೋಂಕು ಹರಡುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ನಗರದ ಎಂ.ಜಿ. ರಸ್ತೆಯಲ್ಲಿರುವ ಮಾರುಕಟ್ಟೆಯನ್ನು ಲಾಕ್‌ಡೌನ್‌ ಮುಗಿಯುವವರೆಗೆ ಬಂದ್‌ ಮಾಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ಹೇಳಿದರು.

Advertisement

ಜಿಲ್ಲಾ ಪಂಚಾಯಿತಿಯ ಡಿ.ದೇವರಾಜ ಅರಸ್‌ ಸಭಾಂಗಣದಲ್ಲಿ ಕೋವಿಡ್‌-19 ಸಂಬಂಧಪಟ್ಟಂತೆ ನಗರಪಾಲಿಕೆ ಕೈಗೊಂಡಿರುವ ಕ್ರಮಗಳ ಬಗ್ಗೆ ಕರೆದಿದ್ದ ಸಭೆಯಲ್ಲಿ ಮಾತನಾಡಿದರು.

ಪರ್ಯಾಯ ವ್ಯವಸ್ಥೆ ಮಾಡಿ: ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ನಿತ್ಯ ನೂರಾರು ಮಂದಿ ಎಂ.ಜಿ. ರಸ್ತೆಯಲ್ಲಿ ಸೇರುತ್ತಿದ್ದಾರೆ. ಇದರಿಂದ ಕೋವಿಡ್‌-19 ಸೋಂಕು ಹರಡುವ ಆತಂಕವಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ಎಂದು ತಿಳಿಸಿದರು. ಇದಕ್ಕೆ ಶಾಸಕ ಎಲ್.ನಾಗೇಂದ್ರ ಅವರು ಧ್ವನಿಗೂಡಿಸಿದರು. ಎಂ.ಜಿ. ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರವೇ ಇಲ್ಲವಾಗಿದೆ. ಹೆಚ್ಚು ಜನ ಇಲ್ಲಿ ಸೇರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಂದ್‌ ಮಾಡಿ: ಎಲ್ಲವನ್ನೂ ಕೇಳಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾರುಕಟ್ಟೆ ಬಂದ್‌ ಮಾಡುವಂತೆ ಸೂಚಿಸಿದರು. ದಸರಾ ವಸ್ತು ಪ್ರದರ್ಶನ ಪ್ರದೇಶಕ್ಕೆ ಮಾರುಕಟ್ಟೆಯನ್ನು ಸ್ಥಳಾಂತರಿಸುವಂತೆ ತಿಳಿಸಿದರು. ಇದೇ ವೇಳೆ ದೇವರಾಜ ಮಾರುಕಟ್ಟೆಯ ಪಕ್ಕದಲ್ಲಿರುವ ಬಾಳೆಮಂಡಿಯಲ್ಲೂ ಕಿರಿದಾದ ಜಾಗದಲ್ಲೇ ಸಾಕಷ್ಟು ಜನ ಸೇರುತ್ತಿದ್ದಾರೆ. ಹಾಗಾಗಿ ಬನ್ನಿಮಂಟಪಕ್ಕೆ ಸ್ಥಳಾಂತರಿಸುವಂತೆ ಶಾಸಕ ರಾಮದಾಸ್‌ ತಿಳಿಸಿದರು. ಇದಕ್ಕೆ ಡೀಸಿ ಹಾಗೂ ಪಾಲಿಕೆ ಆಯುಕ್ತರು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪನೆ ಆಗಿರುವ ಸೋಡಿಯಂ ಹೈಪೋ ಕ್ಲೋರೈಡ್‌ ಟನಲ್‌ ತೆರವುಗೊಳಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಹಾಲಿನ ಪೂರೈಕೆಗೆ ಕ್ರಮ: ಇದೇ ವೇಳೆ ಶಾಸಕರಾದ ಜಿ.ಟಿ.ದೇವೇಗೌಡ, ಎಸ್‌.ಎ.ರಾಮದಾಸ್‌, ಎಲ್ .ನಾಗೇಂದ್ರ ತಮ್ಮ ತಮ್ಮ ಕ್ಷೇತ್ರಕ್ಕೆ ಹಾಲಿನ ಸರಬರಾಜು ಸರಿಯಾಗಿ ಪೂರೈಕೆ ಆಗುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ, ನಿತ್ಯ 30 ಸಾವಿರ ಹಾಲನ್ನು ವಿತರಿಸಲಾಗುತ್ತಿದೆ. ಕೆಲವು ಕಡೆ ಸಮಸ್ಯೆ ಆಗಿರಬಹುದು. ದಿನ ಬಿಟ್ಟು ದಿನ ಹಾಲು ಸರಬರಾಜು ಮಾಡುವ ಮೂಲಕ ಎಲ್ಲಾ ಬಡಾವಣೆಗಳಿಗೂ ತಲುಪುವಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ರಿಂಗ್‌ ರಸ್ತೆ ಬಳಿ ಅಶುಚಿತ್ವ ತಾಂಡವವಾಡುತ್ತಿದೆ. ಕೆಲವರು ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಇಟ್ಟಿಗೆ ಚೂರು, ಮರಳು, ಕಸವನ್ನು ಎಸೆದು ಹೋಗುತ್ತಿದ್ದಾರೆ. ಇದೇ ರಸ್ತೆಯಲ್ಲಿ ವಿದೇಶಿ ಪ್ರವಾಸಿಗರು, ಗಣ್ಯರು ಓಡಾಡುತ್ತಿರುತ್ತಾರೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದರು. ಉಸ್ತುವಾರಿ ಸಚಿವ ಸೋಮಶೇಖರ್‌ ಮಾತನಾಡಿ, ಕಟ್ಟಡ ಸಾಮಗ್ರಿ ಎಸೆಯುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಿ. ವಾಹನ ವಶಪಡಿಸಿಕೊಂಡು ಮಾಲೀಕರನ್ನು ಜೈಲಿಗೆ ಕಳುಹಿಸಿ ಎಂದು ಸೂಚಿಸಿದರು.  ಸಭೆಯಲ್ಲಿ ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next