ಅಕಪೊಲ್ಕೊ (ಮೆಕ್ಸಿಕೊ): ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರ ದಿಟ್ಟ ಸವಾಲನ್ನು ಮೆಟ್ಟಿನಿಂತ ವಿಶ್ವದ ನಂ.2 ಆಟಗಾರ ನೊವಾಕ್ ಜೊಕೋವಿಕ್ “ಮೆಕ್ಸಿಕೊ ಓಪನ್’ ಟೆನಿಸ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮತ್ತೂಬ್ಬ ಸ್ಟಾರ್ ಆಟಗಾರ ರಫೆಲ್ ನಡಾಲ್, ಮರಿನ್ ಸಿಲಿಕ್, ಹಾಲಿ ಚಾಂಪಿಯನ್ ಡೊಮಿನಿಕ್ ಥೀಮ್ ಕೂಡ ಇದೇ ಹಂತಕ್ಕೇರಿದ್ದಾರೆ.
ಬುಧವಾರ ರಾತ್ರಿಯ ಸೆಣಸಾಟದಲ್ಲಿ ಜೊಕೋವಿಕ್ 4-6, 6-4, 6-4 ಅಂತರದಿಂದ ಆರ್ಜೆಂಟೀನಾದ ಡೆಲ್ ಪೊಟ್ರೊ ಅವರಿಗೆ ಸೋಲುಣಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿ ಯನ್ ಓಪನ್ ಪಂದ್ಯಾವಳಿಯ ದ್ವಿತೀಯ ಸುತ್ತಿನಲ್ಲೇ ಪರಾಭವ ಅನುಭವಿಸಿದ ಬಳಿಕ ಈ ಸರ್ಬಿಯನ್ ಟೆನಿಸಿಗ ಪಾಲ್ಗೊಂಡ ಮೊದಲ ಟೆನಿಸ್ ಕೂಟ ಇದಾಗಿದೆ. ಜೊಕೋವಿಕ್ ಅವರಿನ್ನು ಆಸ್ಟ್ರೇಲಿಯದ ನಿಕ್ ಕಿರ್ಗಿಯೋಸ್ ಸವಾಲನ್ನು ಎದುರಿಸಲಿದ್ದಾರೆ.
2 ಬಾರಿಯ ಚಾಂಪಿಯನ್, ದ್ವಿತೀಯ ಶ್ರೇಯಾಂಕದ ರಫೆಲ್ ನಡಾಲ್ ಇಟಲಿಯ ಪಾವ್ಲೊ ಲೊರೆಂಝಿ ಅವರನ್ನು 6-1, 6-1 ಅಂತರದಿಂದ ಸುಲಭದಲ್ಲಿ ಸೋಲಿಸಿದರು. ನಡಾಲ್ ಅವರಿಗೂ ಇದು ಆಸ್ಟ್ರೇಲಿಯನ್ ಓಪನ್ ಬಳಿಕ ಮೊದಲ ಪಂದ್ಯಾವಳಿಯಾಗಿದೆ. ವರ್ಷಾರಂಭದ ಗ್ರಾನ್‌ಸ್ಲಾಮ್ ಫೈನಲ್‌ನಲ್ಲಿ ಅವರು ಫೆಡರರ್‌ಗೆ ಶರಣಾಗಿದ್ದರು.
ಹಾಲಿ ಚಾಂಪಿಯನ್ ಆಸ್ಟ್ರಿಯಾದ ಡೊಮಿನಿಕ್ ಥೀಮ್ 7-6, (9-7), 6-3 ಅಂತರದಿಂದ ಫ್ರಾನ್ಸ್‌ನ
ಗಿಲ್ಲೆಸ್ ಸಿಮೋನ್ ಅವರನ್ನು ಮಣಿಸಿದರು.