ಮಹಾನಗರ: ನಗರದ ಯಾವೆಲ್ಲಾ ಪ್ರದೇಶಗಳಲ್ಲಿ ರೋಡ್ ಹಂಪ್ಸ್‌ಗಳು ಅವೈಜ್ಞಾನಿಕವಾಗಿದೆ ಎಂಬುವುದನ್ನು ಗುರುತಿಸಿ ಐಆರ್‌ಸಿ (ಇಂಡಿಯನ್ ರೋಡ್ ಕಾಂಗ್ರೆಸ್) ನಿಯಮದಂತೆ ರಸ್ತೆ ಉಬ್ಬುಗಳನ್ನು ಮರು ನಿರ್ಮಿಸುವ ಕಾಮಗಾರಿಯನ್ನು ಇದೀಗ ಮಹಾನಗರ ಪಾಲಿಕೆ ಆರಂಭಿಸಿದೆ.
ಮೊದಲ ಹಂತದ ಕಾಮಗಾರಿ ಈಗಾಗಲೇ ವಾರ್ಡ್ ನಂಬರ್ 23ರ ಹರಿಪದವು ವಾರ್ಡ್‌ನಲ್ಲಿ ಆರಂಭಗೊಂಡಿದ್ದು, ಇದಾದ ಬಳಿಕ ನಗರದ ಇನ್ನಿತರ ವಾರ್ಡ್‌ಗಳಿಗೆ ವಿಸ್ತರಣೆ ಮಾಡಲು ಮಹಾನಗರ ಪಾಲಿಕೆ ತೀರ್ಮಾನ ಮಾಡಿದೆ. ನಗರದ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದೆ ಎಂದು “ಸುದಿನ’ವು ಈ ಹಿಂದೆ ವಿಶೇಷ ವರದಿ ಪ್ರಕಟಿಸಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸುತ್ತೇವೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಈ ಹಿಂದೆ ತಿಳಿಸಿದ್ದರು. ಅದರಂತೆ ಇದೀಗ ಕಾಮಗಾರಿ ಸದ್ಯ ಆರಂಭವಾಗಿದೆ.
ನಗರದಲ್ಲಿ ಈಗಾಗಲೇ ಅಳವಡಿಸಿದ ಹೆಚ್ಚಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಈ ಹಿಂದೆಯೇ ಪಾಲಿಕೆಗೆ ಈ ಹಿಂದೆ ದೂರು ನೀಡಿದ್ದರು. ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಪ್ರಕಾರ ರಸ್ತೆ ಉಬ್ಬುಗಳ ಗರಿಷ್ಠ ಎತ್ತರ 12ರಿಂದ 14 ಸೆಂ.ಮೀ. ಇರಬೇಕು ಎಂಬ ನಿಯಮವಿದೆ. ಅದೇ ರೀತಿ ಅಗಲ 3.5 ಮೀಟರ್, 17 ಮೀ. ಸುತ್ತಳತೆ ಹೊಂದಿರಬೇಕು. ವಾಹನಗಳು 25 ಕಿ.ಮೀ. ವೇಗದಲ್ಲಿ ಸರಾಗವಾಗಿ ಸಂಚರಿಸುವಂತಿರಬೇಕು. ಅಲ್ಲದೆ, ಎರಡು ರಸ್ತೆಗಳು ಸಂಧಿಸುವ ಜಾಗದಲ್ಲಿ 5 ಮೀಟರ್‌ಗೂ ಹೆಚ್ಚು ದೂರದಲ್ಲಿ ಹಂಪ್‌ಗ್ಳು ಇರ ಬಾರದು ಎಂದಿದೆ. ಆದರೆ ನಗರದ ಅನೇಕ ಪ್ರದೇಶಗಳಲ್ಲಿನ ರಸ್ತೆ ಉಬ್ಬುಗಳು ನಿಯಮದಂತೆ ಇಲ್ಲ. ಅವುಗಳನ್ನು ತೆಗೆದು ಇದೀಗ ಮರು ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಮುಂದಾಗಿದೆ.
ಐಆರ್‌ಸಿ ನಿಯಮದಂತೆ ಹಂಪ್ಸ್ ಅಳವಡಿಕೆ
ನಗರದ ರಸ್ತೆಗಳಲ್ಲಿ ಐಆರ್‌ಸಿ ನಿಯಮದಂತೆ ರೋಡ್ ಹಂಪ್ಸ್‌ಗಳನ್ನು ಅಳವಡಿಸಲಾಗುವುದು. ಈಗಾಗಲೇ ಹರಿಪದವು ವಾರ್ಡ್‌ನಿಂದ ಕಾಮಗಾರಿ ಆರಂಭಿಸಿದ್ದೇವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಾರ್ಡ್‌ಗಳಲ್ಲಿ ವಿಸ್ತರಣೆಯಾಗಲಿದೆ.
-ಗುರುರಾಜ್ ಮರಳಿಹಳ್ಳಿ, ಪಾಲಿಕೆ ಕಾರ್ಯಪಾಲಕ ಅಭಿಯಂತರ