Advertisement

ಮಿಡಿದ ಮಹಾನಗರ

11:59 AM Jan 26, 2018 | |

ಕರ್ನಾಟಕ ಮತ್ತು ಗೋವಾ ನಡುವಿನ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸುವಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಲು ಆಗ್ರಹಿಸಿ ಕನ್ನಡ ಸಂಘಟನೆಗಳ ಒಕ್ಕೂಟ ಕರೆ ನಿಡಿದ್ದ “ರಾಜ್ಯ ಬಂದ್‌’ಗೆ ರಾಜಧಾನಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಾಂತಿಯುತ ಬಂದ್‌ ವೇಳೆ, ಬಿಎಂಟಿಸಿ ,ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸಲಿಲ್ಲ. ಆ್ಯಪ್‌ ಆಧಾರಿತ ಟ್ಯಾಕ್ಸಿ, ಆಟೋ ಸಂಚಾರ ವಿರಳವಾಗಿತ್ತು. ಚಿತ್ರ ಮಂದಿರಗಳು ಸಂಜೆವರೆಗೂ ತೆರೆಯಲಿಲ್ಲ. ಮೆಟ್ರೋ ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ, ಹೋಟೆಲ್‌, ಪೆಟ್ರೋಲ್‌ ಬಂಕ್‌, ಬ್ಯಾಂಕ್‌ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.

Advertisement

ಬೆಂಗಳೂರು: ಮಹದಾಯಿ ನದಿ ನೀರಿನ ಹಂಚಿಕೆ ವಿವಾದ ಇತ್ಯರ್ಥಕ್ಕೆ ಆಗ್ರಹಿಸಿ ಕನ್ನಡ ಒಕ್ಕೂಟ ನೀಡಿದ್ದ ಕರ್ನಾಟಕ ಬಂದ್‌ಗೆ ವಿವಿಧ ಸಂಘಟನೆಗಳು ಸಾಥ್‌ ನೀಡಿದ್ದರಿಂದ ಗುರುವಾರ ಸಂಜೆ ತನಕ ಬೆಂಗಳೂರು ಸ್ತಬ್ಧವಾಗಿತ್ತು. ಬೆಳಗ್ಗೆಯಿಂದಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಸೇವೆ ಇರಲಿಲ್ಲ. ಆಟೋ, ಟ್ಯಾಕ್ಸಿ ಮತ್ತು ಕ್ಯಾಬ್‌ಗಳ ಸಂಚಾರ ವಿರಳವಾಗಿತ್ತು.  

ಶಾಲಾ ಕಾಲೇಜುಗಳು ರಜೆ ಘೋಷಿಸಿದ್ದರಿಂದ ಶೈಕ್ಷಣಿಕ ಚಟುವಟಿಕೆ ನಡೆದಿಲ್ಲ. ಮಾಲ್‌ಗ‌ಳು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ಸೂಚಿಸುವ ಜತೆಗೆ, ಸಿರಕ್ಷತಾ ಕ್ರಮ ಕೈಗೊಂಡಿದ್ದು ಕಂಡುಬಂತು. ಚಿತ್ರ ಪ್ರದರ್ಶನ ಹಾಗೂ ಚಿತ್ರೀಕರಣ ಸಂಪೂರ್ಣ ಸ್ಥಗಿತಗೊಂಡಿತ್ತು.

ಅವೆನ್ಯೂ ರಸ್ತೆ, ಎಸ್‌ಪಿ ರೋಡ್‌, ಚಿಕ್ಕಪೇಟೆ, ಬಳೆಪೇಟೆ, ಮೆಜೆಸ್ಟಿಕ್‌, ಮೈಸೂರ್‌ ಬ್ಯಾಂಕ್‌ ವೃತ್ತ, ಶಿವಾಜಿನಗರ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ, ಕೆ.ಆರ್‌.ಮಾರುಕಟ್ಟೆ ಸೇರಿ ಬಹುತೇಕ ಕಡೆ ಅಂಗಡಿ, ಹೋಟೆಲ್‌, ರೆಸ್ಟೋರೆಂಟ್‌ಗಳು ಮುಚ್ಚಿದ್ದವು. ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳ ಸೇವೆ ಭಾಗಶಃ ಲಭ್ಯವಿತ್ತು. ಆಸ್ಪತ್ರೆಗಳಲ್ಲಿ ಸೇವೆ ಯಥಾಪ್ರಕಾರ ಮುಂದುವರಿದಿತ್ತು.

ಕನ್ನಡ ಒಕ್ಕೂಟದ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು, ಶಿವರಾಮೇಗೌಡ ಸೇರಿದಂತೆ ಪ್ರಮುಖರು ಬೆಳಗ್ಗೆ 6 ಗಂಟೆಯಿಂದಲೇ ಮೆಜೆಸ್ಟಿಕ್‌ ಸುತ್ತಮುತ್ತಲು ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಇಷ್ಟಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಅಧಿಕಾರಿಗಳು ಸಂಚಾರ ಸ್ಥಗಿತಕ್ಕೆ ಆದೇಶಿಸಿದರು.

Advertisement

ಮೈಕೋ ಕನ್ನಡ ಬಳಗ, ಕರವೇ (ಶಿವರಾಮೇಗೌಡ ಬಣ), (ಪ್ರವೀಣ್‌ ಕುಮಾರ್‌ ಬಣ), ರಾಜ್ಯ ಸರ್ಕಾರಿ ನೌಕರರ ಸಂಘ, ಕೆಎಸ್‌ಆರ್‌ಟಿಸಿ ನೌಕರರ ಸಂಘ, ಡಾ.ರಾಜ್‌ಕುಮಾರ್‌ ಅಭಿಮಾನಿಗಳ ಸಂಘ, ಕರ್ನಾಟಕ ಚಲನಚಿತ್ರ ಕಾರ್ಮಿಕ ಕಲಾವಿದರು, ತಂತ್ರಜ್ಞರ ಒಕ್ಕೂಟ, ಸದ್ಭಾವನ ಕನ್ನಡ ಬಳಗ, ಹಸಿರು ಸೇನೆ ಮತ್ತು ರೈತ ಸಂಘಟನೆ, ಕರ್ನಾಟಕ ರಕ್ಷಣಾ ಪಡೆ, ಸೇರಿದಂತೆ ನೂರಾರು ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ 11.30ರ ಸುಮಾರಿಗೆ ಟೌನ್‌ ಹಾಲ್‌ ಮುಂಭಾಗ ಸೇರಿ, ಗೋವಾ ಸರ್ಕಾರ ಹಾಗೂ ಅಲ್ಲಿನ ನೀರಾವರಿ ಸಚಿವರ ವಿರುದ್ಧ ಘೋಷಣೆ ಕೂಗಿದರು.

ಪ್ರತಿಕೃತಿ ದಹನ: ಕನ್ನಡಪರ ಹೋರಾಟಗಾರರೊಬ್ಬರು ಮೇಕೆಯೊಂದರ ಜತೆ ಬಂದು ವಿನೂತನವಾಗಿ ಪ್ರತಿಭಟಿಸಿದರು. ಹೋರಾಟಗಾರರಲ್ಲಿ ಕೆಲವರು ಶರ್ಟ್‌ ತೆಗೆದು ಟೌನ್‌ಹಾಲ್‌ ಎದುರು ರಸ್ತೆ ಮೇಲೆ ಉರುಳು ಸೇವೆ ಮಾಡಿದರು. ಮಹದಾಯಿ ನೀರಿಗೆ ಆಗ್ರಹಿಸಿ, ಗೋವಾದ ನೀರಾವರಿ ಸಚಿವ ಪಾಲೇಕರ್‌ ಅವರ ಪ್ರತಿಕೃತಿ ದಹಿಸಿದರು.

ಪ್ರತಿಭಟನಾ ರ್ಯಾಲಿ: ಮಧ್ಯಾಹ್ನ 12.30ರ ಸುಮಾರಿಗೆ ಕನ್ನಡ ಒಕ್ಕೂಟದ ಮುಖಂಡರು, ಕರಾವೇ, ರಾಜ್ಯ ಸರ್ಕಾರಿ ನೌಕರರ ಸಂಘ, ರೈತಸೇನಾ ಸಮನ್ವಯ ಸಮಿತಿ ಕಾರ್ಯಕರ್ತರು ಟೌನ್‌ಹಾಲ್‌ನಿಂದ ಕಾರ್ಪೊರೇಷನ್‌, ಮೈಸೂರ್‌ ಬ್ಯಾಂಕ್‌ ವೃತ್ತ, ಜನತಾ ಬಜಾರ್‌ ಮಾರ್ಗವಾಗಿ ಫ್ರೀಡಂ ಪಾರ್ಕ್‌ ತನಕ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು,

ಶಿವರಾಮೇಗೌಡ ಸೇರಿದಂತೆ ಹಲವು ಪ್ರಮುಖರು ತೆರೆದ ವಾಹನದಲ್ಲಿ ಕುಳಿತು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದರು. ಬಹುತೇಕ ಕಾರ್ಯಕರ್ತರು ಬೈಕ್‌ಗೆ ಕನ್ನಡ ಬಾವುಟ ಕಟ್ಟಿಕೊಂಡು  ಮಹದಾಯಿ ನೀರು ಕರ್ನಾಟಕಕ್ಕೆ ಬರಲೇಬೇಕು, ಅನ್ಯಾಯ, ಅನ್ಯಾಯ, ಪ್ರಧಾನಿ ಮೋದಿಯವರು ಮಧ್ಯಸ್ಥಿಕೆ ವಹಿಸಿ ಸಮಸ್ಯೆಗೆ ಪರಿಹಾರ ನೀಡಬೇಕು ಎಂಬ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದರು.

ಸಂಜೆ ನಂತರ ಬಂದ್‌ಗೆ ತೆರೆ: ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಬಂದ್‌ ಮುಕ್ತಾಯವಾಗಿತ್ತು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮೆಟ್ರೋ, ಟ್ಯಾಕ್ಸಿ, ಕ್ಯಾಬ್‌, ಆಟೋ ಸಂಚಾರ ಪುನರ್‌ ಆರಂಭವಾಗಿತ್ತು. ಮಂತ್ರಿಮಾಲ್‌, ಒರಿಯನ್‌ ಮಾಲ್‌, ಫಿನಿಕ್ಸ್‌ ಮಾಲ್‌, ಗರುಡ ಮಾಲ್‌, ಲೈಫ್ಸೈಲ್‌, ಬೆಂಗಳೂರು ಒನ್‌, ಬಿಗ್‌ ಬಜಾರ್‌ ಹೀಗೆ ನಗರದ ಎಲ್ಲಾ ಮಾಲ್‌ಗ‌ಳು, ಅಂಗಡಿ, ಹೋಟೆಲ್‌, ರೆಸ್ಟೋರೆಂಟ್‌ ಸಂಜೆಯ ನಂತರ ಸೇವೆ ಆರಂಭಿಸಿವೆ. ಸಿನಿಮಾ ಮಂದಿರಗಳಲ್ಲಿ ಬೆಳಗ್ಗೆಯಿಂದ ಸಂಜೆಯ ತನಕ ಯಾವುದೇ ಚಿತ್ರ ಪ್ರದರ್ಶನ ಮಾಡಿರಲಿಲ್ಲ. ಸಂಜೆ ನಂತರ ಚಿತ್ರ ಪ್ರದರ್ಶನ ಮಾಡಿದ್ದಾರೆ. ಜನ ಜೀವನ ಸಹಜ ಸ್ಥಿತಿಗೆ ಬಂದಿತ್ತು. 

ಪರದಾಡಿದ ರೋಗಿ: ಬೆನ್ನು ನೋವಿನ ಚಿಕಿತ್ಸೆಗಾಗಿ ಬೆಳಗಾವಿಯಿಂದ ಬೆಂಗಳೂರಿಗೆ ಪತಿ ಶಿವಾನಂದ ಅವರೊಂದಿಗೆ ಬಂದಿದ್ದ ಸುವರ್ಣ ಅವರು ಬೆಳಗ್ಗೆ ಮೆಜೆಸ್ಟಿಕ್‌ನಲ್ಲಿ ಸಿಲುಕಿ ಪರದಾಡಿದರು. ಬಸ್‌ ವ್ಯವಸ್ಥೆ ಇಲ್ಲದೇ ಇದ್ದುದರಿಂದ ನಗರದ ಹೊರವಲಯದ ಆಸ್ಪತ್ರೆಗೆ ಹೋಗಲಾಗಲಿಲ್ಲ. ತುಂಬ ಹೊತ್ತಿನ ನಂತರ ಸರ್ಕಾರಿ ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋದರು.

ಬೀದಿಗೆ ಬಿದ್ದ ಅಂಗಡಿ ಸರಕು: ಅವೆನ್ಯೂ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ಅಂಗಡಿಗಳು ತೆರೆದಿದ್ದವು. ಕನ್ನಡಪರ ಸಂಘಟನೆ ಕಾರ್ಯಕರ್ತರು ಅಂಗಡಿಯ ಸರಕುಗಳನ್ನು ಬೀದಿಗೆ ಎಸೆಯುವ ಮೂಲಕ ಬಲವಂತವಾಗಿ ಬಂದ್‌ ಮಾಡಿಸಿದ್ದಾರೆ. ಇದೆ ಸಂದರ್ಭದಲ್ಲಿ ಅಂಗಡಿಯ ಗಾಜಿಗೆ ಕಲ್ಲು ಹೊಡೆದು ಪುಡಿ ಮಾಡಿದ್ದಾರೆ. ಕಲ್ಲು ಎಸೆದವರನ್ನು ಪೊಲೀಸರುವ ವಶಕ್ಕೆ ಪಡೆದಿದ್ದಾರೆ.

ಮೆಟ್ರೋ ಇದ್ದರೂ ಜನ ಇಲ್ಲ!: “ನಮ್ಮ ಮೆಟ್ರೋ’ ಸೇವೆ ಎಂದಿನಂತಿದ್ದರೂ ಪ್ರಯಾಣಿಕರ ಸಂಖ್ಯೆ ಮಾತ್ರ ಕಡಿಮೆ ಇತ್ತು. ಬೆಳಗಿನಜಾವ 5ರಿಂದ ಮಧ್ಯಾಹ್ನ 1ರವರೆಗೂ ಸಾಮಾನ್ಯ ದಿನಗಳಲ್ಲಿ ಒಂದೂವರೆ ಲಕ್ಷ ಜನ ಸಂಚರಿಸುತ್ತಾರೆ. ಆದರೆ, ಗುರುವಾರ ಇದೇ ಅವಧಿಯಲ್ಲಿ ಕೇವಲ 69,394 ಜನ ಓಡಾಡಿದ್ದಾರೆ. ಬಂದ್‌ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ನಿಲ್ದಾಣಗಳ ಒಂದು ಪ್ರವೇಶ ದ್ವಾರ ಮಾತ್ರ ತೆರೆಯಲಾಗಿತ್ತು.

ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದುದರಿಂದ 10 ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಿದವು. ಕೆಲ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬಂದ್‌ನ ಲಾಭ ಪಡೆದರು. ಪ್ರಮುಖ ನಿಲ್ದಾಣಗಳಲ್ಲಿ ಬೆಳಗಿನಜಾವ ಬಂದಿಳಿಯುವ ಪ್ರಯಾಣಿಕರಿಂದ ಮನಬಂದಂತೆ ಸುಲಿಗೆ ಮಾಡುತ್ತಿರುವುದು ಕಂಡುಬಂತು.

ಕೆ.ಆರ್‌. ಮಾರುಕಟ್ಟೆಯಿಂದ ಕೆಂಗೇರಿಗೆ 200 ರೂ., ಟೋಲ್‌ಗೇಟ್‌ಗೆ 70 ರೂ., ದಾಸರಹಳ್ಳಿಗೆ 250 ರೂ. ಹೇಳುತ್ತಿದ್ದರು. ಇನ್ನು ಕೆಲ ಪ್ರಯಾಣಿಕರು ಬಸ್‌ಗಾಗಿಯೇ ಮಧ್ಯಾಹ್ನದವರೆಗೂ ನಿಲ್ದಾಣಗಳಲ್ಲಿ ಕಾದು ಸುಸ್ತಾದರು. ಮಧ್ಯಾಹ್ನ 3ರ ನಂತರ ಒಂದೊಂದಾಗಿ ಬಸ್‌ಗಳು ರಸ್ತೆಗಿಳಿದರೂ, ಇಡೀ ದಿನದ ಕಾರ್ಯಾಚರಣೆಯಲ್ಲಿ ಶೇ. 40ರಷ್ಟು ಮಾತ್ರ ಬಸ್‌ ಸೇವೆ ಇತ್ತು. 

ಮಾರುಕಟ್ಟೆಗೂ ತಟ್ಟಿದ ಬಿಸಿ: ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿಳಿಯುವ ಮತ್ತು ಹೊರಗಡೆ ಹೋಗುವ ನೂರಾರು ಟನ್‌ ತರಕಾರಿ ವ್ಯಾಪಾರ ಸ್ಥಗಿತಗೊಂಡಿತ್ತು. ಕೆ.ಆರ್‌.ಮಾರುಕಟ್ಟೆ, ಯಶವಂತಪುರ, ಬನಶಂಕರಿ ಮಾರುಕಟ್ಟೆಗಳಲ್ಲಿ ಮಾರಾಟಗಾರರು, ಖರೀದಿದಾರರೂ ಇರಲಿಲ್ಲ. ಬೆಳಗ್ಗೆ 11ರವರೆಗೂ ಅಲ್ಲಲ್ಲಿ ತಳ್ಳು ಗಾಡಿಗಳು ಮಾತ್ರ ಕಾಣಿಸಿದವು.

ಕೆ.ಆರ್‌. ಮಾರುಕಟ್ಟೆಯೊಂದರಲ್ಲೇ ನಿತ್ಯ 40ರಿಂದ 50 ಲೋಡ್‌ ತರಕಾರಿ ಬರುತ್ತದೆ. ಈ ಪೈಕಿ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಂಗಳೂರು, ಶಿವಮೊಗ್ಗ, ಹಾಸನ ಸೇರಿದಂತೆ ವಿವಿಧಡೆ 30 ಲೋಡ್‌ ತರಕಾರಿಗೆ ಹೋಗುತ್ತದೆ. ಆದರೆ, ಬಂದ್‌ ಹಿನ್ನೆಲೆಯಲ್ಲಿ ಬಹುತೇಕ ವಹಿವಾಟಿಗೆ ಬ್ರೇಕ್‌ ಬಿದ್ದಿತು. ಬೆಳಗಿನ ತರಕಾರಿ ರಾತ್ರಿ ಸಾಗಿಸಲಾಯಿತು ಎಂದು ಕೆ.ಆರ್‌. ಮಾರುಕಟ್ಟೆಯ ತರಕಾರಿ ಮತ್ತು ಹಣ್ಣುಗಳ ಸಗಟು ವ್ಯಾಪಾರಿಗಳ ಸಂಘದ ಅಧ್ಯಕ್ಷ ಆರ್‌.ವಿ. ಗೋಪಿ ಮಾಹಿತಿ ನೀಡಿದರು.

ಕೋರ್ಟ್‌ ಕಲಾಪ ಅಭಾದಿತ: ಬಂದ್‌ಗೆ ಬೆಂಗಳೂರು ವಕೀಲರ ಸಂಘ ಕೇವಲ ಬಾಹ್ಯ ಬೆಂಬಲ ನೀಡಿದ್ದರಿಂದ ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಬಂದ್‌ ಬೆಂಬಲಿಸಿ ಬೆಳಗ್ಗೆ 10.30ರಿಂದ 11ರವರೆಗೆ  ವಕೀಲರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಉಳಿದಂತೆ ಹೈಕೋರ್ಟ್‌, ಸಿಟಿ ಸಿವಿಲ್‌ಕೋರ್ಟ್‌, ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಮೇಯೋಹಾಲ್‌, ನ್ಯಾಯ ದೇಗುಲ ಸೇರಿ ಎಲ್ಲ ಕಡೆ ಇಡೀ ದಿನದ ಕಲಾಪಗಳು ಸುಗಮವಾಗಿ ನಡೆದವು. 

ಸಿಟಿ ಸಿವಿಲ್‌ ಕೋರ್ಟ್‌ ಆವರಣದಲ್ಲಿ ಇಂದು ಗಂಟೆ ಕಾಲ ನಡೆದ ಪ್ರತಿಭಟನೆಯಲ್ಲಿ 200ಕ್ಕೂ ಹೆಚ್ಚು ವಕೀಲರು ಪಾಲ್ಗೊಂಡು, ಮಹದಾಯಿ ಹೋರಾಟ ಬೆಂಬಲಿಸಿ ಘೋಷಣೆ ಕೂಗಿದರು. ಉತ್ತರಕರ್ನಾಟಕ ಭಾಗದ ಜನರ ಜೀವನಾಡಿಯಾದ ಮಹದಾಯಿ ಯೋಜನೆ ಜಾರಿಗೆ  ಕೇಂದ್ರಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದರು.

ಕಚೇರಿಗೆ ಬಾರದ ಪಾಲಿಕೆ ಸಿಬ್ಬಂದಿ: ಮಹದಾಯಿ ನೀರಿಗಾಗಿ ಒತ್ತಾಯಿಸಿ ಗುರುವಾರ ವಿವಿಧ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ ಬಿಸಿ ಬಿಬಿಎಂಪಿಗೂ ತಟ್ಟಿತ್ತು. ಬಂದ್‌ ಹಿನ್ನೆಲೆಯಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪಾಲಿಕೆಯ ಶೇ.80ರಷ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಕೆಲಸಕ್ಕೆ ಗೈರಾಗಿದ್ದರು. ಮೊದಲೇ ಬಂದ್‌ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಸಾರ್ವಜನಿಕರು ಬಿಬಿಎಂಪಿ ಕಚೇರಿಗಳಿಗೆ ಭೇಟಿ ನೀಡದ ಹಿನ್ನೆಲೆಯಲ್ಲಿ ಪಾಲಿಕೆಯ ಕೇಂದ್ರ ಕಚೇರಿ, ಜಲಮಂಡಳಿ ಕಚೇರಿಗಳು ಬಣಗುಡುತ್ತಿದ್ದವು.

ರೈಲು ತಡೆ ..: ಬಂದ್‌ ಅಂಗವಾಗಿ ಕರವೇ ಕಾರ್ಯಕರ್ತರು ಗುರುವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ರೈಲು ತಡೆಗೆ ಮುಂದಾದರು. ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಬೆಳಿಗ್ಗೆ 7ಕ್ಕೆ ರೈಲು ನಿಲ್ದಾಣ ಮುತ್ತಿಗೆಗೆ ಯತ್ನಿಸಿದರು. ಆದರೆ, ಪ್ರವೇಶ ದ್ವಾರದಲ್ಲೇ ಅಧ್ಯಕ್ಷರು ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.  

ಈ ಮಧ್ಯೆಯೂ ಮಹಿಳಾ ಘಟಕ ಸೇರಿದಂತೆ ವೇದಿಕೆ ಕಾರ್ಯಕರ್ತರು ಪ್ಲಾಟ್‌ಫಾರಂ ಸಂಖ್ಯೆ 1, 2, 5 ಮತ್ತು 6ರಲ್ಲಿ 11ಕ್ಕೂ ಹೆಚ್ಚು ರೈಲುಗಳ ನಿರ್ಗಮನಕ್ಕೆ ತಡೆಯೊಡ್ಡಲು ಪ್ರಯತ್ನಿಸಿದರು. ಜನ ಶತಾಬ್ದಿ, ಸಂಗಮಿತ್ರ, ಚೆನ್ನೈ ಎಕ್ಸ್‌ಪ್ರೆಸ್‌ ಒಳಗೊಂಡಂತೆ ಹಲವು ರೈಲುಗಳ ತಡೆಗೆ ಮುಂದಾದರು. ಆದರೆ, ಯಾವುದೇ ರೈಲುಗಳ ಕಾರ್ಯಾಚರಣೆಯಲ್ಲಿ ವ್ಯತ್ಯಯ ಆಗಿಲ್ಲ ಎಂದು ನೈರುತ್ಯ ರೈಲ್ವೆ ಬೆಂಗಳೂರು ವಿಭಾಗೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಆಸ್ಪತ್ರೆ ಸೇವೆಯಲ್ಲಿ ವ್ಯತ್ಯಯ ಇಲ್ಲ: ಬಂದ್‌ನಿಂದಾಗಿ ನಗರದ ರೋಗಿಗಳಿಗೆ ಆರೋಗ್ಯ ಸೇವೆಯಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಕೆ.ಸಿ.ಜನರಲ್‌ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ, ಮಣಿಪಾಲ್‌ ಆಸ್ಪತ್ರೆ, ನಿಫೂ ಯುರಾಜಲಿ, ಬೌರಿಂಗ್‌ ಮತ್ತು ಲೇಡಿ ಕರ್ಜನ್‌, ಕೆಂಪೇಗೌಡ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ (ಕಿಮ್ಸ್‌), ಮಲ್ಯ, ಮಹಾವೀರ್‌ ಜೈನ್‌, ಫೋರ್ಟಿಸ್‌, ನಾರಾಯಣ ಹೃದಯಾಲಯ  ಸೇರಿ ಎಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಪೂರ್ಣಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗಿ ರೋಗಿಗಳಿಗೆ ಸೇವೆ ನೀಡಿದ್ದಾರೆ.

ಬೊಕ್ಕಸಕ್ಕೆ 170 ಕೋಟಿ ರೂ. ನಷ್ಟ: “ಬಂದ್‌’ನಿಂದಾಗಿ ರಾಜ್ಯದಲ್ಲಿ 800ರಿಂದ 1000 ಕೋಟಿ ರೂ. ಮೌಲ್ಯದ ವಾಣಿಜ್ಯ ವಹಿವಾಟಿಗೆ ತೊಂದರೆಯಾಗಿದ್ದು, ಸರ್ಕಾರದ ಬೊಕ್ಕಸಕ್ಕೆ 160ರಿಂದ 170 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಸಾಮಾನ್ಯವಾಗಿ ಸರ್ಕಾರಕ್ಕೆ ವಾಣಿಜ್ಯೋದ್ಯಮದಿಂದ ವಾರ್ಷಿಕ 55 ಸಾವಿರ ಕೋಟಿ ರೂ. ತೆರಿಗೆ ರೂಪದಲ್ಲಿ ಸಂಗ್ರಹವಾಗುತ್ತದೆ. ಇದನ್ನು ದಿನಕ್ಕೆ ಲೆಕ್ಕಹಾಕಿದರೆ, ನಿತ್ಯ 800-1,000 ಕೋಟಿ ರೂ. ವಾಣಿಜ್ಯ ವಹಿವಾಟು ನಡೆಯುತ್ತದೆ. ತೆರಿಗೆ 160ರಿಂದ 170 ಕೋಟಿ ರೂ. ಆಗುತ್ತದೆ. ಬಂದ್‌ ಹಿನ್ನೆಲೆಯಲ್ಲಿ ಇವೆರಡಕ್ಕೂ ಹೊಡೆತ ಬಿದ್ದಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ (ಎಫ್ಕೆಸಿಸಿಐ) ಅಧ್ಯಕ್ಷ ಕೆ. ರವಿ ತಿಳಿಸಿದ್ದಾರೆ.

ಪ್ರದರ್ಶನಕ್ಕೂ ತಟ್ಟಿದ ಬಿಸಿ: ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಖಾದಿ ಉತ್ಸವಕ್ಕೂ ಬಂದ್‌ ಬಿಸಿ ತಟ್ಟಿತು. ನಿತ್ಯ ಪ್ರದರ್ಶನಕ್ಕೆ ಸರಿಸುಮಾರು 2,500 ಸಾವಿರ ಜನ ಭೇಟಿ ನೀಡುತ್ತಾರೆ. ಆದರೆ, ಗುರುವಾರ ಕೇವಲ 800ರಿಂದ 900 ಜನ ಭೇಟಿ ನೀಡಿದ್ದಾರೆ. ಉತ್ಸವದಲ್ಲಿ ಪ್ರತಿದಿನ ಸರಾಸರಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ. ಬಂದ್‌ನಿಂದ ಶೇ. 50ರಷ್ಟು ಕಡಿಮೆಯಾಗಿದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯವಿಭವಸ್ವಾಮಿ ತಿಳಿಸಿದ್ದಾರೆ. 

ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫ‌ಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡುವವರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಗುರುವಾರ ಇಡೀ ದಿನ ಸುಮಾರು 26 ಸಾವಿರ ಜನ ಪ್ರದರ್ಶನ ವೀಕ್ಷಿಸಿದ್ದಾರೆ ಮೆಟ್ರೋ ಸಂಪರ್ಕದಿಂದ ಜನ ಆಗಮಿಸಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ತೋಟಗಳು ಮತ್ತು ಉದ್ಯಾನಗಳು) ಡಾ.ಎಂ. ಜಗದೀಶ್‌ ತಿಳಿಸಿದ್ದಾರೆ.

ರೋಗಿಗಳಿಗೆ ಆಸರೆ: ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಬಂದಿಳಿಯುವ ರೋಗಿಗಳನ್ನು ಇಬ್ಬರು ಟೆಕ್ಕಿಗಳು ಸ್ವಂತ ಕಾರುಗಳಲ್ಲಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದರು. ಗಿರೀಶ್‌ ಮತ್ತು ಸಭಾಪತಿ ಎಂಬುವರು ಮೆಜೆಸ್ಟಿಕ್‌ಗೆ ಬಂದಿಳಿಯುವ ಬಡ ರೋಗಿಗಳ ಸೇವೆಗಾಗಿ ಗುರುವಾರ ತಮ್ಮ ಕಾರುಗಳನ್ನು ಮೀಸಲಿಟ್ಟಿದ್ದರು.

ಬಂದ್‌ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ಗೆ ಬರುವ ರೋಗಿಗಳಿಗೆ ಆಸ್ಪತ್ರೆಗೆ ತೆರಳಲು ಬಸ್‌ ವ್ಯವಸ್ಥೆ ಇರಲಿಲ್ಲ. ಹೀಗಾಗಿ ನಿಲ್ದಾಣದಲ್ಲಿ ಈ ಇಬ್ಬರೂ ಕಾರುಗಳನ್ನು ನಿಲುಗಡೆ ಮಾಡಿದ್ದರು. ಬರುವ ರೋಗಿಗಳಿಗೆ ಸಾಥ್‌ ನೀಡಿದರು. ಅದೇ ರೀತಿ, ಬೀದಿಬದಿಯ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪ್ರಯಾಣಿಕರಿಗೆ ರೊಟ್ಟಿ, ಚಟ್ನಿ, ಮೊಸರು, ನೀರಿನ ಬಾಟಲಿ ವಿತರಿಸುವ ಮೂಲಕ ಮಾನವೀಯತೆ ಮೆರೆದರು. ಸಂಘದ ಉಪಾಧ್ಯಕ್ಷ ಗಂಗಾಧರ ಮತ್ತು ಜಂಟಿ ಕಾರ್ಯದರ್ಶಿ ಜಗನ್ನಾಥ್‌ ಎಂಬುವರು ಈ ಸೇವೆಯ ಮೂಲಕ ಗಮನಸೆಳೆದರು. 

ಕವಾಯತ್‌ಗೂ ತೊಡಕು: ಗಣರಾಜ್ಯೋತ್ಸವದ ಅಂಗವಾಗಿ ನಡೆಸುವ ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಪೂರ್ವ ಅಭ್ಯಾಸಕ್ಕೂ ಬಂದ್‌ ಬಿಸಿ ತಟ್ಟಿತು. ಮಾಣೆಕ್‌ ಷಾ ಪರೇಡ್‌ ಮೈದಾನದಲ್ಲಿ ಶುಕ್ರವಾರದ ಗಣರಾಜ್ಯೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಹಿಂದಿನ ದಿನ ಸಾಮಾನ್ಯವಾಗಿ ಅದರ ಪೂರ್ವ ಅಭ್ಯಾಸ ನಡೆಯಬೇಕಿತ್ತು. ಆದರೆ, ಬಂದ್‌ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next