ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮೆಟ್ರೋದಲ್ಲಿ ಕೆಲವು ವ್ಯಕ್ತಿಗಳ ಅನುಮಾನಾಸ್ಪದ ವರ್ತನೆಯಿಂದ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದಕ್ಕೆ ಮೆಟ್ರೋ ಭದ್ರತೆಗೆ ನೇಮಿಸಲಾಗಿರುವ ಸಿಬ್ಬಂದಿಗೆ ಸೂಕ್ತ ತರಬೇತಿ ಇಲ್ಲದಿರೂವುದೂ ಕಾರಣವಾಗಿತ್ತು.
ಈಗ ನಮ್ಮ ಮೆಟ್ರೋಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್‌ಐಎಸ್‌ಎಫ್) ವಿವಿಧ ದರ್ಜೆಯ, 1350 ಮಂದಿಯುಳ್ಳ ಪೂರ್ಣ ಪ್ರಮಾಣದ ಬೆಟಾಲಿಯನ್ ನೇಮಕ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.
ಬೆಟಾಲಿನ್ ಸಿಬ್ಬಂದಿಯ ವೇತನ ಮತ್ತು ಭತ್ಯೆಯನ್ನು ಮೆಟ್ರೋ ಸಂಸ್ಥೆಯೇ ಭರಿಸಲಿದೆ. ಈಗ ಮೆಟ್ರೋ ಘಟಕಗಳಲ್ಲಿ ಭದ್ರತಾ ಸಿಬ್ಬಂದಿ ಕೊರತೆ ಇದೆ. ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಮತ್ತು ಐಆರ್‌ಬಿ ಘಟಕಗಳಿಗೆ ಹೆಚ್ಚುವರಿಯಾಗಿ ಅಧಿಕಾರಿ, ಸಿಬ್ಬಂದಿಯನ್ನು ಬಂದೋಬಸ್ತ್, ವಿವಿಐಪಿ ಸೆಕ್ಯೂರಿಟಿ, ಗನ್‌ಮ್ಯಾನ್ ಮತ್ತು ವಿಶೇಷ ಘಟಕಗಳ ಭದ್ರತೆಗೂ ನಿಯೋಜಿಸಲಾಗಿತ್ತು. ಇದರಿಂದ ಮೆಟ್ರೋ ಘಟಕಗಳಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿತ್ತು.
ಹೀಗಾಗಿ, ಮೆಟ್ರೋಗೆ ಸುಸಜ್ಜಿತ ಬೆಟಾಲಿಯನ್ ನೇಮಕ ಮಾಡುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್. ರಾಜು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿರುವ ಸರ್ಕಾರ, ಪೂರ್ಣ ಪ್ರಮಾಣದ ಕೆಎಸ್‌ಐಎಸ್‌ಎಫ್ ನೇಮಕಕ್ಕೆ ಒಪ್ಪಿಗೆ ಸೂಚಿಸಿದೆ.
ಯಾರಿಗೆ ಸಿಕ್ಕಿಲ್ಲ?: ರಾಜ್ಯದ ವಿದ್ಯುತ್ ಉತ್ಪಾದನಾ ಕೇಂದ್ರಗಳು, ಕರ್ನಾಟಕ ಪೊಲೀಸ್ ಅಕಾಡೆಮಿ, ಆಡಳಿತ ತರಬೇತಿ ಸಂಸ್ಥೆ ಹಾಗೂ ಧಾರವಾಡ ಹೈಕೋರ್ಟ್ ಪೀಠ, ಮೈಸೂರು ಅರಮನೆ, ಖಾಸಗಿ ಸಂಸ್ಥೆಗಳಾದ ಮಂಗಳೂರಿನ ಇನ್ಫೋಸಿಸ್, ಬೆಂಗಳೂರಿನ ಟಫ್ì ಕ್ಲಬ್, ಆರ್‌ಬಿಐ ಮಾರ್ಗ ಸೂಚಿಯಂತೆ ರಾಜ್ಯದಲ್ಲಿನ ವಿವಿಧ ಬ್ಯಾಂಕ್‌ಗಳಿಗೆ ತಲಾ ಒಂದು ಭದ್ರತಾ ಪಡೆ ಬೇಕಾಗಿದ್ದು, ಕೆಎಸ್‌ಐಎಸ್‌ಎಫ್ನ 4, 5 ಮತ್ತು 6ನೇ ಬೆಟಾಲಿಯನ್ ಹೊಸದಾಗಿ ಸೃಜಿಸಲು ಮನವಿ ಮಾಡಲಾಗಿತ್ತು. ಈ ಪೈಕಿ ಮೆಟ್ರೋಗೆ ಮಾತ್ರ ಅನುಮತಿ ಸಿಕ್ಕಿದೆ.
ವಿವಿಧ ದರ್ಜೆ ಸಿಬ್ಬಂದಿ
-ಕಮಾಂಡೆಂಟ್ 01
-ಡೆಪ್ಯೂಟಿ ಕಮಾಂಡೆಂಟ್ 02
-ಅಸಿಸ್ಟೆಂಟ್ ಕಮಾಂಡೆಂಟ್ 05
-ಪಿ.ಐ 10
-ಪಿ.ಎಸ್.ಐ 93
-ಎ.ಎಸ್.ಐ 51
-ಎಚ್.ಸಿ 65
-ಪಿಸಿ 1018
-ಅನುಯಾಯಿಗಳು 105
-ಒಟ್ಟು 1350