Advertisement

ಮೆಟ್ರೋ ಸುರಂಗಕ್ಕಿಳಿದ ದೇಶೀಯ ಟಿಬಿಎಂ

11:44 AM Mar 13, 2021 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ದಲ್ಲಿ ಮೊದಲ ದೇಶೀಯ ನಿರ್ಮಿತ “ಟನೆಲ್‌ ಬೋರಿಂಗ್‌ ಮಷಿನ್‌’ (ಟಿಬಿಎಂ) ಸುರಂಗದಲ್ಲಿ ಇಳಿದಿದ್ದು, ಶುಕ್ರವಾರ ವೆಲ್ಲಾರ-ಲ್ಯಾಂಗ್‌ಫೋರ್ಡ್‌ ನಡುವೆ ಇದು ಕಾರ್ಯಾಚರಣೆ ಆರಂಭಿಸಿದೆ.

Advertisement

ಜರ್ಮನಿ ಮೂಲದ ಹೆರೆನ್‌ಕ್ನೆಚ್‌ ಕಂಪನಿ ನೆರೆಯ ತಮಿಳುನಾಡಿನ ಚೆನ್ನೈನಲ್ಲಿ ಕಾರ್ಖಾನೆ ನಿರ್ಮಿಸಿದ್ದು, ಅಲ್ಲಿ ಈ ಟಿಬಿಎಂ ತಯಾರಿಸಲಾಗಿದೆ. ಇದರ ವಿನ್ಯಾಸ, ಹೈಡ್ರಾಲಿಕ್‌ ಸಿಸ್ಟಂ ಸೇರಿದಂತೆ ಪ್ರಮುಖ ಅಂಶಗಳು ಜರ್ಮನಿಯಿಂದ ಪೂರೈಕೆಯಾಗಿದ್ದು, ಬಹುತೇಕ ಬಿಡಿಭಾಗಗಳನ್ನು ಸ್ಥಳೀಯವಾಗಿ ನಿರ್ಮಿಸಲಾಗಿದೆ. ಸುಮಾರು ಏಳೆಂಟು ತಿಂಗಳಲ್ಲಿ ಈ ದೈತ್ಯ ಯಂತ್ರ ಸಿದ್ಧಗೊಂಡಿದ್ದು, ಫೆಬ್ರವರಿ ಮೊದಲ ವಾರದಲ್ಲಿ ಇದರ ಭಾಗಗಳು ವೆಲ್ಲಾರ ಜಂಕ್ಷನ್‌ ಬಳಿ ಬಂದಿಳಿದಿದ್ದವು. ಸುಮಾರು ಒಂದೂವರೆ ತಿಂಗಳು ನಿರಂತರವಾಗಿ ಬಿಡಿ ಭಾಗಗಳ ಜೋಡಣೆ ಕಾರ್ಯ ನಡೆದಿದ್ದು. ಶುಕ್ರವಾರದಿಂದ ಸುರಂಗ ಕೊರೆಯುವ ಕಾರ್ಯಕ್ಕೆ ಅಣಿಗೊಳಿಸಲಾಯಿತು. 650 ಮೀ. ಉದ್ದದ ಮಾರ್ಗವನ್ನು ಈ ಯಂತ್ರವು ಐದಾರು ತಿಂಗಳಲ್ಲಿ ಕ್ರಮಿಸುವ ನಿರೀಕ್ಷೆ ಇದೆ. ನಿತ್ಯ ಸರಾಸರಿ 6 ಮೀ.ಕೊರೆಯುವ ಗುರಿಯನ್ನು ಹೊಂದಲಾಗಿದೆ. ಉದ್ದೇಶಿತ ಪ್ಯಾಕೇಜ್‌-1 (ಡೈರಿ ವೃತ್ತ- ವೆಲ್ಲಾರ) ಗುತ್ತಿಗೆಯನ್ನು ಅಫ್ಯಾನ್ಸ್‌ ಇನ್‌ಫ್ರಾಸ್ಟ್ರಕ್ಚರ್‌ ಲಿ., ಪಡೆದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ ಸಿಎಲ್‌)ದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದರು.

ಡೈರಿವೃತ್ತದಿಂದ ನಾಗವಾರವರೆಗಿನ 13.85 ಕಿ.ಮೀ. ಉದ್ದದ ಸುರಂಗ ಮಾರ್ಗದಲ್ಲಿ ಒಟ್ಟಾರೆ ಒಂಬತ್ತು ಟಿಬಿಎಂಗಳು ಭೂಮಿಯ ಆಳದಲ್ಲಿ ಇಳಿಯಲಿವೆ. ಈ ಪೈಕಿ ಈಗಾಗಲೇ ನಾಲ್ಕು ಯಂತ್ರಗಳು ಕಾರ್ಯಾಚರಣೆ ಆರಂಭಿಸಿದ್ದು, ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ. ಈಗ ಅವುಗಳ ಸಾಲಿಗೆ ಶುಕ್ರವಾರ ಮತ್ತೂಂದು ಯಂತ್ರ ಸೇರ್ಪಡೆಗೊಂಡಿದೆ.

ಡೈರಿವೃತ್ತ-ವೆಲ್ಲಾರ ನಡುವಿನ 3.655 ಕಿ.ಮೀ. ಉದ್ದದ ಮಾರ್ಗದಲ್ಲಿ ಮೂರು ಟಿಬಿಎಂಗಳನ್ನುಬಳಸಲು ಉದ್ದೇಶಿಸಲಾಗಿದೆ. ಈ ಪೈಕಿ ಉಳಿದೆರಡು ನಂತರದಲ್ಲಿ ಸೇರ್ಪಡೆ ಆಗಲಿವೆ. ಈಗಿರುವ ಯಂತ್ರಕ್ಕೆ ಇನ್ನೂ ನಾಮಕರಣ ಮಾಡಿಲ್ಲ. ಇನ್ನು ಟ್ಯಾನರಿರಸ್ತೆ-ನಾಗವಾರ ನಡುವೆ ಟಿಬಿಎಂ ತುಂಗಾ ಮತ್ತು ಭದ್ರ ಚೆನ್ನೈನಲ್ಲೇ ತಯಾರಾಗುತ್ತಿದ್ದು ತಿಂಗಳಲ್ಲಿಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶದಿಂದ ಬಂದ ಟಿಬಿಎಂಗಳಿಗೂ ಇಲ್ಲಿಯೇ ತಯಾರಾದ ಯಂತ್ರಕ್ಕೂ ಯಾವುದೇ ವ್ಯತ್ಯಾಸ ಇಲ್ಲ. ಅಷ್ಟೇ ಸಾಮರ್ಥ್ಯವನ್ನು ಇದು ಹೊಂದಿದೆ. ಇದು ಸಂಪೂರ್ಣ ದೇಶೀಯ ಆಗಿರಲಿಕ್ಕಿಲ್ಲ; ಆದರೆ, ದೇಶದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಬಹುದು. ಇದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ದೈತ್ಯಯಂತ್ರದಲ್ಲಿ ಸಾವಿರಾರು ಬಿಡಿಭಾಗಗಳಿವೆ. ಆ ಪೈಕಿ ಕೆಲವು ದೇಶೀಯ ಉದ್ದಿಮೆಗಳಿಂದ ಪೂರೈಕೆ ಆಗಲಿವೆ. ಈಗಿಲ್ಲದಿದ್ದರೂ ಭವಿಷ್ಯದಲ್ಲಿ ಇದು ಸಾಧ್ಯವಿದೆ. ಇನ್ನು ಕಾರ್ಯಾಚರಣೆ ವೇಳೆ ಯಾವುದೇ ಭಾಗಗಳು ಹಾಳಾದರೆ, ಚೆನ್ನೈನಲ್ಲೇ ಘಟಕ ಇರುವುದರಿಂದ ಕಡಿಮೆ ಸಮಯ ಮತ್ತು ಖರ್ಚಿನಲ್ಲಿ ಲಭ್ಯವಾಗಲಿವೆ. ಇದರಿಂದ ಸಾಗಾಣಿಕೆ ವೆಚ್ಚವೂ ಉಳಿತಾಯ ಆಗಲಿದೆ ಎಂದು ಎಂಜಿನಿಯರೊಬ್ಬರು ಹೇಳಿದರು.

Advertisement

ಶಿವಾಜಿನಗರ ಮತ್ತು ಕಂಟೋನ್ಮೆಂಟ್‌ನಲ್ಲಿ ಮೊದಲು ಟಿಬಿಎಂ ಹಾಗೂ ಅದರ ಭಾಗಗಳನ್ನು ಸಂಗ್ರಹಿಸಿಟ್ಟು ವೆಲ್ಲಾರದಲ್ಲಿ ನಂತರದಲ್ಲಿ ಜೋಡಣೆ ಮಾಡಲಾಯಿತು. ಆದರೆ, ಕಿಷ್ಕಿಂದೆಯಂತಿರುವ ವೆಲ್ಲಾರ ಜಂಕ್ಷನ್‌ನಲ್ಲಿಇದಕ್ಕೆ ಸ್ಥಳಾವಕಾಶ ಇರಲಿಲ್ಲ. ಆದ್ದರಿಂದ ನಿಲ್ದಾಣದ ಬಳಿಶಾಫ್ಟ್ (ಬಾವಿಯಂತೆ ಬೃಹದಾಕಾರದ ತಗ್ಗು) ನಿರ್ಮಿಸಿ, ಬಿಡಿಭಾಗಗಳು ಬಂದಂತೆ ನೇರವಾಗಿ ಜೋಡಣೆ ಕೆಲಸಆರಂಭಿಸಿದರು. ಇದಕ್ಕಾಗಿ ಗ್ಯಾಂಟ್ರಿ ನಿರ್ಮಿಸಿ, ಅದರನೆರವಿನಿಂದ ದೈತ್ಯಾಕಾರದ ಭಾಗಗಳನ್ನು ಕೆಳಗಡೆ ಇಳಿಸಲಾಯಿತು. ಈ ಪ್ರಕ್ರಿಯೆಯಿಂದ ಸಮಯವೂ ಉಳಿತಾಯ ಆಯಿತು.

ಮಾರ್ಗ                     ಉದ್ದ  (ಕಿ.ಮೀ.ಗಳಲ್ಲಿ)

ಡೈರಿವೃತ್ತ- ವೆಲ್ಲಾರ                   3.65

ವೆಲ್ಲಾರ- ಶಿವಾಜಿನಗರ               2.75

ಶಿವಾಜಿನಗರ- ಟ್ಯಾನರಿ ರಸ್ತೆ       2.88

ಟ್ಯಾನರಿ ರಸ್ತೆ- ನಾಗವಾರ           4.591

 

ಚಿಕ್ಕಪೇಟೆ ಪರ್ಯಾಯ ಮಾರ್ಗ! :

ಡೈರಿ-ವೆಲ್ಲಾರ ಮಾರ್ಗವು “ನಮ್ಮ ಮೆಟ್ರೋ’ ಮೊದಲ ಹಂತದಲ್ಲಿದ್ದ ದುರ್ಗಮವಾದ ಚಿಕ್ಕಪೇಟೆ ಮಾರ್ಗವಾಗಿದೆ. ಹೇಗೆಂದರೆ, ಮೊದಲ ಹಂತದಹಸಿರು ಮಾರ್ಗದ ಸುರಂಗವು ಉತ್ತರ-ದಕ್ಷಿಣದ ಸಂಪಿಗೆರಸ್ತೆ-ನ್ಯಾಷನಲ್‌ ಕಾಲೇಜು ನಡುವೆ ಹಾದುಹೋಗುತ್ತದೆ. ಇದೇ ರೀತಿ, ಡೈರಿವೃತ್ತ-ನಾಗವಾರ ಕೂಡ ಉತ್ತರ-ದಕ್ಷಿಣದಲ್ಲಿದೆ. ಈ ಹಿನ್ನೆಲೆಯಲ್ಲಿ ತಜ್ಞರು ಉದ್ದೇಶಿತ ಡೈರಿವೃತ್ತ-ವೆಲ್ಲಾರ ನಡುವಿನ ಮಣ್ಣು ಹೆಚ್ಚು-ಕಡಿಮೆ ಚಿಕ್ಕಪೇಟೆ ಮಾರ್ಗದಲ್ಲಿರುವಂತೆ ಮಣ್ಣು ಮತ್ತು ಕಲ್ಲುಮಿಶ್ರಿತ ಇದೆ ಎಂದುಅಂದಾಜಿಸಿದ್ದಾರೆ. ಆದ್ದರಿಂದ ಇಲ್ಲಿ ಮೂರು ಯಂತ್ರವನ್ನು ಕಾರ್ಯಾಚರಣೆಗಿಳಿಸಲಾಗುತ್ತಿದೆ.

 

– ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next