Advertisement

ಮೆಟ್ರೋ ಪ್ರಯಾಣವು ಘನತೆಯ ವಿಚಾರವಾಗಲಿ

07:50 AM Dec 26, 2017 | Team Udayavani |

ನೋಯ್ಡಾ: ಮೆಟ್ರೋದಂತಹ ಪರಿಸರ ಸ್ನೇಹಿ ಸಂಚಾರ ವ್ಯವಸ್ಥೆಗಳನ್ನು ಹೆಚ್ಚೆಚ್ಚು ಉತ್ತೇಜಿಸುವುದರ ಮೂಲಕ, ತೈಲಾಧಾರಿತ ಸಾರಿಗೆ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದು ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಸೋಮವಾರ ದೆಹಲಿ ಮೆಟ್ರೋದ ಕೆನ್ನೇರಳೆ ಮಾರ್ಗವನ್ನು ಸೇವೆಗೆ ಸಮರ್ಪಿಸಿದ ಬಳಿಕ ಅವರು ಈ ಮಾತುಗಳನ್ನಾಡಿದ್ದಾರೆ. 

Advertisement

ಮೆಟ್ರೋದಲ್ಲಿ ಪ್ರಯಾಣಿಸುವುದನ್ನು “ಘನತೆಯ ವಿಚಾರ’ ಎಂದು ಪರಿಗಣಿಸಬೇಕು. 2022ರ ವೇಳೆಗೆ ಅಂದರೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುವಾಗ ಪೆಟ್ರೋಲಿಯಂ ಉತ್ಪನ್ನಗಳ ಆಮದು ಪ್ರಮಾಣವನ್ನು ಗಣನೀಯವಾಗಿ ಕಡಿತಗೊಳಿಸುವುದು ನಮ್ಮ ಉದ್ದೇಶವಾಗಿದೆ. ಮೆಟ್ರೋದಂಥ ಸಾರಿಗೆ ವ್ಯವಸ್ಥೆಯು ಈ ಗುರಿಯನ್ನು ತಲುಪಲು ನೆರವಾಗುತ್ತದೆ. ಜನಸಾಮಾನ್ಯರಿಗೂ ಹಣ ಉಳಿತಾಯವಾಗುತ್ತದೆ, ಪರಿಸರಕ್ಕೂ ಇದರಿಂದ ಅನುಕೂಲ ಎಂದೂ ಪ್ರಧಾನಿ ಹೇಳಿದ್ದಾರೆ.

12 ಕಿ.ಮೀ. ಉದ್ದದ ಮಾರ್ಗ: ಪ್ರಧಾನಿ ಉದ್ಘಾಟಿಸಿದ ಮೆಟ್ರೋ ಲೈನ್‌, ದೆಹಲಿಯ ಕಾಲ್ಕಾಜಿ ಮಂದಿರ್‌ನಿಂದ ನೋಯ್ಡಾದ ಬಟಾನಿಕಲ್‌ ಗಾರ್ಡನ್‌ ನಿಲ್ದಾಣದ ನಡುವಿನ 12 ಕಿ.ಮೀ. ಉದ್ದದ ಮಾರ್ಗವಾಗಿದ್ದು, ಒಟ್ಟು 9 ನಿಲ್ದಾಣಗಳನ್ನು ಒಳಗೊಂಡಿದೆ. ಇವುಗಳಲ್ಲಿ ಏಳು ನಿಲ್ದಾಣಗಳು ದೆಹಲಿ ಆಡಳಿತದ ವ್ಯಾಪ್ತಿಗೆ ಬರುತ್ತದೆ. ಅಲ್ಲದೆ, ಯೋಜನಾ ವೆಚ್ಚದಲ್ಲಿ ಶೇಕಡಾವಾರು ವೆಚ್ಚವನ್ನು ದೆಹಲಿ ಸರ್ಕಾರವೇ ಭರಿಸಿದೆ. ಆದರೆ, ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್‌ ಅವರನ್ನು ಉದ್ಘಾಟನಾ ಸಮಾರಂಭದಿಂದ ದೂರ ಇಡಲಾಗಿತ್ತು. ಅವರಿಗೆ ಆಹ್ವಾನ ನೀಡದೇ ಇರುವುದು ಸಹಜವಾಗಿ ಮೋದಿ ಹಾಗೂ ಬಿಜೆಪಿ ವಿರೋಧಿಗಳನ್ನು ಕೆರಳಿಸಿದೆ.

ಯೋಗಿ ಗುಣಗಾನ ಮಾಡಿದ ಪ್ರಧಾನಿ: ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಗುಣಗಾನ ಮಾಡಿದ ಪ್ರಧಾನಿ, ನೊಯ್ಡಾಕ್ಕೆ ಭೇಟಿ ನೀಡಿದ ಆ ರಾಜ್ಯದ ಯಾವುದೇ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆಂಬ ಮೂಢ ನಂಬಿ ಕೆ ಯನ್ನು ಯೋಗಿ ಸುಳ್ಳು ಮಾಡಲು ಹೊರಟಿದ್ದಾರೆ. ಅವರು ಕಾವಿ ಧರಿಸಿರಬಹುದು ಆದರೆ, ಅವರು ಮೂಢ ನಂಬಿಕೆ ಗಳ ದಾಸರಲ್ಲ ಎಂದು ಹೊಗಳಿದರು. ತಾವು ಗುಜರಾತ್‌ ಸಿಎಂ ಆಗಿದ್ದಾಗಲೂ ರಾಜಕಾರಣಿಗಳು ಹೋಗಲು ಹೆದರುತ್ತಿದ್ದ ಐದು ಪ್ರಾಂತ್ಯಗಳಿಗೆ ಹೋಗಿ ಸುಮಾರು 20 ವರ್ಷ ಅಲ್ಲಿ ಸಿಎಂ ಆಗಿದ್ದನ್ನು ಅವರು ಸ್ಮರಿಸಿಕೊಂಡರು. 

ದೆಹಲಿ ಸಿಎಂಗಿಲ್ಲ ಆಹ್ವಾನ: ಹಲವರ ಆಕ್ಷೇಪ
ಮೆಟ್ರೋ ಲೈನ್‌ ಉದ್ಘಾಟನಾ ಸಮಾರಂಭಕ್ಕೆ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಆಹ್ವಾನಿಸದೇ ಇದ್ದಿದ್ದು ವಿವಾದ ಎಬ್ಬಿಸಿದೆ. ಕಾರ್ಯಕ್ರಮಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ಗೆ ಆಹ್ವಾನ ನೀಡಲಾಗಿತ್ತು. ಆದರೆ, ಸಿಎಂ ಕೇಜ್ರಿವಾಲ್‌ಗೆ ಆಹ್ವಾನ ನೀಡಿರಲಿಲ್ಲ. ಇದನ್ನು ಟ್ವಿಟರ್‌ ನಲ್ಲಿ ಟೀಕಿಸಿರುವ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, “ಕೇಂದ್ರ ಸರ್ಕಾರವು ದೆಹಲಿ ಮೆಟ್ರೋದ ಟಿಕೆಟ್‌ ದರಗಳನ್ನು ಏರಿಸಿದೆ. ಕೇಜ್ರಿವಾಲ್‌ ಉದ್ಘಾಟನಾ ಸಮಾರಂಭಕ್ಕೆ ಹೋಗಿದ್ದರೆ, ಟಿಕೆಟ್‌ ದರ ಕಡಿಮೆ ಮಾಡುವಂತೆ ಪ್ರಧಾನಿಯವರನ್ನು ಬಹಿರಂಗವಾಗಿ ಕೇಳಿಬಿಡುತ್ತಿದ್ದರು. ಈ ಮುಜುಗರವನ್ನು ತಪ್ಪಿಸಿಕೊಳ್ಳಲೆಂದೇ ಕೇಜ್ರಿವಾಲ್‌ ಅವರನ್ನು ಸಮಾರಂಭಕ್ಕೆ ಆಹ್ವಾನಿಸಿಲ್ಲ’ ಎಂದಿದ್ದಾರೆ. ಜತೆಗೆ, ಸಿಎಂಗೆ ಆಹ್ವಾನ ನೀಡದೇ ಇರುವ ಮೂಲಕ ಪ್ರಧಾನಿಯವರು ದೆಹಲಿ ಗರಿಗೆ ಅವಮಾನ ಮಾಡಿದ್ದಾರೆ ಎಂದೂ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next