ಬೆಂಗಳೂರು: ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದ್ದು ಆ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಶನಿವಾರ ಮತ್ತು ಭಾನುವಾರ ಮೆಟ್ರೋ ರೈಲು ಸಂಚಾರವನ್ನು ಸಂಪೂರ್ಣವಾಗಿ ರದ್ದುಪಡಿಸಿದೆ. ಜತೆಗೆ ಮೇ 4ರ ವರೆಗೆ ಮೆಟ್ರೋ ರೈಲು ಕಾರ್ಯಾಚರಣೆ ವೇಳಾಪಟ್ಟಿಯನ್ನು ಕೂಡ ಪರಿಷ್ಕರಿಸಿದೆ.
ಸೋಮವಾರದಿಂದ ಶುಕ್ರವಾರದವರೆಗೆ ವಾರದ ಎಲ್ಲಾ ದಿನಗಳಲ್ಲಿ ಮೆಟ್ರೋ ರೈಲು ಸೇವೆಗಳು ಎಂದಿನಂತೆ ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗಲಿವೆ. ಅದಾಗ್ಯೂ ಟರ್ಮಿನಲ್ ನಿಲ್ದಾಣಗಳಾದ ನಾಗಸಂದ್ರ, ರೇಷ್ಮೆ ಸಂಸ್ಥೆ, ಮೈಸೂರು ರಸ್ತೆ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳಿಂದ ಕೊನೆಯ ರೈಲು ರಾತ್ರಿ 7.30ಕ್ಕೆ ಹೊರಡಲಿದೆ.
ಕೊನೆಯ ವಾಣಿಜ್ಯ ಸೇವೆಯು ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ ಇತರೆ ನಾಲ್ಕು ಮಾರ್ಗಗಳಿಗೆ ಸಂಪರ್ಕವಿರುತ್ತದೆ.
ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಶನಿವಾರ ಮತ್ತು ಭಾನುವಾರದ ರೈಲು ಸೇವೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದೆ ಎಂದು ಮೆಟ್ರೋ ನಿಗಮದ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ಹೆಚ್ಚಳ..ಆದರೂ ವೆಂಟಿಲೇಟರ್ ಆಪರೇಟರ್ ನೇಮಕಾತಿಗೆ ಮೀನಮೇಷ ಯಾಕೆ?
ಹಾಗೆಯೇ ರೈಲಿನಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಸಾಮಾಜಿಕ ಅಂತರವನ್ನು ಕಾಪಾಡುವ ಜತೆಗೆ ಮುಖವಾಡ ಧರಿಸಿಬೇಕು. ಈಗಾಗಲೇ ಮೆಟ್ರೋ ನಿಗಮವು ಕೋವಿಡ್ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೈ-ನೈರ್ಮಲ್ಯತೆ ಸೇರಿದಂತೆ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ.ಆ ಮಾರ್ಗ ಸೂಚಿಯನ್ನು ಸಾರ್ವಜನಿಕರು ಪಾಲನೆ ಮಾಡಿ ಕಾರ್ಯನಿರ್ವಹಿಸುವಂತೆ ನಿಗಮದ ಅಧಿಕಾರಿಗಳು ಮನವಿ ಮಾಡಿದ್ದಾರೆ.