Advertisement

ಬೆಳಿಗ್ಗೆ 5.30 ರಿಂದ ರಾತ್ರಿ 11ರವರೆಗೆ ಮೆಟ್ರೋ ಸಂಚಾರ

12:42 PM Jun 17, 2017 | Team Udayavani |

ಬೆಂಗಳೂರು: “ನಮ್ಮ ಮೆಟ್ರೋ’ ಸಂಚಾರ ವೇಳಾಪಟ್ಟಿ ಪರಿಷ್ಕೃತಗೊಂಡಿದ್ದು, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಸೇರಿದಂತೆ ಎಲ್ಲ ನಾಲ್ಕೂ ಟರ್ಮಿನಲ್‌ಗ‌ಳಿಂದಲೂ ಏಕಕಾಲದಲ್ಲಿ  ಸೋಮವಾರದಿಂದ ಪ್ರತಿದಿನ ಬೆಳಗಿನಜಾವ 5.30ರಿಂದ  ರಾತ್ರಿ 11ಗಂಟೆವರೆಗೂ  ಮೆಟ್ರೋ ರೈಲು ಸಂಚಾರ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

Advertisement

ಸಾರ್ವಜನಿಕರ ಮನವಿಯಂತೆ ಮೆಟ್ರೋ ಸಂಚಾರ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು ರಾತ್ರಿ ಸಂಚಾರವನ್ನು 11ಗಂಟೆವರೆಗೆ ವಿಸ್ತರಿಸಲಾಗಿದೆ. ಇಂದು ಸಂಜೆ 6ಕ್ಕೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಮೆಟ್ರೋ ಮೊದಲ ಹಂತವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಭಾನುವಾರ ಸಂಜೆ 4ರಿಂದ ಎರಡೂ ಕಾರಿಡಾರ್‌ಗಳಲ್ಲಿ ಸಂಚಾರ ಸೇವೆ ಆರಂಭಗೊಳ್ಳಲಿದೆ. ಸೋಮವಾರದಿಂದ ನಿತ್ಯ ಬೆಳಗಿನಜಾವ 5.30ರಿಂದ ರಾತ್ರಿ 11ರವರೆಗೆ ಸೇವೆ ಲಭ್ಯವಾಗಲಿದೆ. 

ಬೈಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ ಮತ್ತು ಯಲಚೇನಹಳ್ಳಿ ಟರ್ಮಿನಲ್‌ಗ‌ಳಿಂದ ಏಕಕಾಲದಲ್ಲಿ ಬೆಳಗಿನಜಾವ 5ಕ್ಕೇ ರೈಲುಗಳು ಹೊರಡಲಿವೆ. ಆದರೆ, ಇದು ಪೈಲಟ್‌ ರೈಲು ಆಗಿರುತ್ತದೆ. ಇದು ನಿತ್ಯ ವಾಣಿಜ್ಯ ಸಂಚಾರಕ್ಕೂ ಮುನ್ನ ಪರೀಕ್ಷಾರ್ಥ ಸಂಚಾರ ಮಾಡಲಿದ್ದು, ಇದರ ವೇಗಮಿತಿ ಗಂಟೆಗೆ ಕೇವಲ 25 ಕಿ.ಮೀ. ಇರುತ್ತದೆ. ನಂತರ 5.30ಕ್ಕೆ ಇದೇ ಟರ್ಮಿನಲ್‌ಗ‌ಳಿಂದ ಪ್ರಯಾಣಿಕರ ಸೇವೆ ಶುರುವಾಗಲಿದೆ. 

ಬೈಯಪ್ಪನಹಳ್ಳಿ ಮತ್ತು ಯಲಚೇನಹಳ್ಳಿಯಿಂದ ರಾತ್ರಿ 11ಕ್ಕೆ, ಮೈಸೂರು ರಸ್ತೆ ಹಾಗೂ ನಾಗಸಂದ್ರದಿಂದ ರಾತ್ರಿ 11.50ಕ್ಕೆ ಕೊನೆಯ ರೈಲು ಹೊರಡಲಿದೆ. 
ಪೂರ್ವ-ಪಶ್ಚಿಮ (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ಮಾರ್ಗದಲ್ಲಿ ಕನಿಷ್ಠ 4ರಿಂದ ಗರಿಷ್ಠ 20 ನಿಮಿಷಗಳ ಅಂತರದಲ್ಲಿ ಹಾಗೂ ಉತ್ತರ-ದಕ್ಷಿಣ (ನಾಗಸಂದ್ರ-ಯಲಚೇನಹಳ್ಳಿ) ನಡುವೆ ಕನಿಷ್ಠ 6ರಿಂದ ಗರಿಷ್ಠ 20 ನಿಮಿಷಗಳ ಅಂತರದಲ್ಲಿ ರೈಲುಗಳು ಸಂಚರಿಸಲಿವೆ ಎಂದು ಪ್ರಕಟಣೆ ತಿಳಿಸಿದೆ.  

ಸಂಜೆ 6ಕ್ಕೆ ಸಂಚಾರ ಆರಂಭ: ವಿಧಾನಸೌಧ ಆವರಣದಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಶನಿವಾರ ಸಂಜೆ 6ಕ್ಕೆ ರಿಮೋಟ್‌ ಗುಂಡಿ ಒತ್ತುವ ಮೂಲಕ ಚಾಲನೆ ನೀಡುತ್ತಿದ್ದಂತೆ ಯಲಚೇನಹಳ್ಳಿ ಮತ್ತು ಸಂಪಿಗೆ ರಸ್ತೆಯ ಮಂತ್ರಿಸ್ಕ್ವೇರ್‌ ನಿಲ್ದಾಣಗಳಿಂದ ಏಕಕಾಲದಲ್ಲಿ ಮೆಟ್ರೋ ರೈಲುಗಳು ಸಾಂಕೇತಿಕವಾಗಿ ಸಂಚಾರ ಆರಂಭಿಸಲಿವೆ. ಹೀಗೆ ಹೊರಡುವ ರೈಲುಗಳು ಮೆಜೆಸ್ಟಿಕ್‌ಗೆ ಬಂದು ನಿಲ್ಲಲಿವೆ. ಇದಲ್ಲದೆ, ಹೆಚ್ಚುವರಿಯಾಗಿ ಶ್ರೀರಾಮಪುರ ಮತ್ತು ಕುವೆಂಪು ರಸ್ತೆ ನಿಲ್ದಾಣಗಳಲ್ಲಿ ತಲಾ ಒಂದು ರೈಲು ನಿಲುಗಡೆ ಮಾಡಲಾಗಿರುತ್ತದೆ. ಜನದಟ್ಟಣೆ ಹೆಚ್ಚಾದರೆ, ಈ ರೈಲುಗಳ ಸೇವೆ ಪಡೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

ಪ್ರಯಾಣ ದರವೂ ಪರಿಷ್ಕರಣೆ:  ಮೆಟ್ರೋ ವೇಳಾಪಟ್ಟಿ ಜತೆಗೆ ಪ್ರಯಾಣ ದರ ಕೂಡ ಪರಿಷ್ಕರಿಸಲು ಬಿಎಂಆರ್‌ಸಿ ನಿರ್ಧರಿಸಿದ್ದು, ಸರಾಸರಿ ಶೇ. 10ರಷ್ಟು ದರ ಹೆಚ್ಚಳ ಆಗಲಿದೆ. ಪರಿಷ್ಕೃತ ದರ ಎರಡೂ ಕಾರಿಡಾರ್‌ಗಳಿಗೆ ಅನ್ವಯ ಆಗಲಿದೆ. ಕನಿಷ್ಠ ದರ ಪ್ರಸ್ತುತ 10 ರೂ. ಹಾಗೂ ಗರಿಷ್ಠ ದರ 40 ರೂ. (ಬೈಯಪ್ಪನಹಳ್ಳಿ-ಮೈಸೂರು ರಸ್ತೆ) ಇದೆ. ಭಾನುವಾರದಿಂದ ಈ ದರದಲ್ಲಿ ಶೇ. 10ರಷ್ಟು ಹೆಚ್ಚಳ ಆಗಲಿದೆ. ಎಷ್ಟು ರೂ. ಆಗಲಿದೆ ಎಂಬುದನ್ನು ಶನಿವಾರ ಪ್ರಕಟಿಸಲಾಗುವುದು ಎಂದು ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ತಿಳಿಸಿದ್ದಾರೆ. 

ಮೊದಲ ಹಂತ ಪೂರ್ಣಗೊಳ್ಳಲು ವಿಳಂಬಾಗಿದ್ದೇಕೆ? 
ಬೆಂಗಳೂರು:
42.3 ಕಿ.ಮೀ. ಉದ್ದದ “ನಮ್ಮ ಮೆಟ್ರೋ’ ಯೋಜನೆ ಮೊದಲ ಹಂತ ಪೂರ್ಣಗೊಳ್ಳಲು ಒಂದು ದಶಕ ಹಿಡಿಯಿತು. ಈ ವಿಳಂಬಕ್ಕೆ ತಾಂತ್ರಿಕ ಸಮಸ್ಯೆ ಮಾತ್ರವಲ್ಲ; ಆರಂಭದಲ್ಲಿ ಯೋಜನೆಗೆ ಎದುರಾದ ಪ್ರತಿಭಟನೆಗಳೂ ಕಾರಣ ಆಗಿವೆ. 

ಮೊದಲ ಹಂತದ ಯೋಜನೆ ಕೈಗೆತ್ತಿಕೊಂಡಾಗ ಮನೆ ಮತ್ತು ಮರಗಳು ಬಲಿ, ಭೂಸ್ವಾಧೀನ, ಮಾರ್ಗಗಳ ಮಾರ್ಪಾಡು ಸೇರಿದಂತೆ ಅನೇಕ ಕಾರಣಗಳಿಗೆ ವಿರೋಧಗಳು ವ್ಯಕ್ತವಾದವು. ಇದರಲ್ಲಿ ಕೆಲವು ರಾಜಕೀಯ ಪ್ರೇರಿತವೂ ಆಗಿದ್ದವು. ಈ ಮಧ್ಯೆ ಮೆಟ್ರೋ ಬೇಕೋ ಅಥವಾ ಮಾನೊ ಸಾಕೋ ಎಂಬ ಚರ್ಚೆಯಿಂದಲೇ ಯೋಜನೆ ಸುಮಾರು ದಿನಗಳು ನೆನೆಗುದಿಗೆ ಬಿದ್ದಿತು. 

ಕೊನೆಗೂ ಮೆಟ್ರೋ ಕೈಗೆತ್ತಿಕೊಂಡ ನಂತರ ಪ್ರತಿಭಟನೆಗಳು ನಡೆಯುತ್ತಲೇ ಇದ್ದವು. ಎತ್ತರಿಸಿದ ಮಾರ್ಗದವರೆಗೂ ಒಂದು ರೀತಿಯ ಅಡತಡೆಯಾದರೆ, ಸುರಂಗದಲ್ಲಿ ಮತ್ತೂಂದು ಅಡ್ಡಿ ಎದುರಾಯಿತು. ನಗರದ ಕಲ್ಲುಮಿಶ್ರಿತ ಮಣ್ಣಿನಿಂದ ಮೆಟ್ರೋ ಕಾಮಗಾರಿ ಮತ್ತೆ ಮಂದ ಗತಿ ಪೆಡೆದುಕೊಂಡಿತು. 2013ರಲ್ಲಿ ಮುಗಿಯಬೇಕಿದ್ದ ಯೋಜನೆಗೆ 2017ಕ್ಕೆ ಲೋಕಾರ್ಪಣೆಗೊಳ್ಳುತ್ತಿದೆ. 

ಈ ವಿಳಂಬವು ಯೋಜನಾ ವೆಚ್ಚದ ಮೇಲೆ ಪರಿಣಾಮ ಬೀರಲು ಕಾರಣವಾಯಿತು. ಆರಂಭದಲ್ಲಿ 6,395 ಕೋಟಿ ಇದ್ದ ಯೋಜನಾ ವೆಚ್ಚ, ಪೂರ್ಣಗೊಳ್ಳುವ ವೇಳೆಗೆ 13,845 ಕೋಟಿ ರೂ.ಗಳಿಗೆ ತಲುಪಿತು. 

Advertisement

Udayavani is now on Telegram. Click here to join our channel and stay updated with the latest news.

Next