ನವದೆಹಲಿ: ಕೇಂದ್ರದ ಕೃಷಿ ನೀತಿಗೆ ಸಂಬಂಧಿಸಿದಂತೆ ಪಂಜಾಬ್ ರೈತರು ನಡೆಸುತ್ತಿರುವ ದೆಹಲಿ ಚಳುವಳಿ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರ ದೆಹಲಿ-ಹರಿಯಾಣ ಗಡಿಭಾಗದ ಮೆಟ್ರೋ ರೈಲು ಸೇವೆಯನ್ನು ರದ್ದುಗೊಳಿಸಲಾಗುವುದಾಗಿ ದೆಹಲಿ ಮೆಟ್ರೋ ರೈಲು ನಿಗಮ ತಿಳಿಸಿದೆ.
ಪಂಜಾಬ್, ಹರಿಯಾಣ ಸೇರಿದಂತೆ ದೇಶದ ನಾನಾ ಭಾಗಗಳಿಂದ ಪ್ರತಿಭಟನಾಕಾರರು ಬೃಹತ್ ಸಂಖ್ಯೆಯಲ್ಲಿ ದೆಹಲಿಯತ್ತ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರ ಸಲಹೆಯ ಮೇರೆಗೆ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು DMRC ತಿಳಿಸಿದೆ.
ಗ್ರೀನ್‌ಲೈನ್‌ನಲ್ಲಿರುವ ಬ್ರಿಗೇಡಿಯರ್ ಹೊಸಿಯಾರ್ ಸಿಂಗ್, ಬಹದ್ದೂರ್‌ಗಡ್, ಪಂಡಿತ್ ಶ್ರೀ ರಾಮ್ ಶರ್ಮಾ, ಟಿಕ್ರಿ ಬಾರ್ಡರ್, ಟಿಕ್ರಿ ಕಲಾನ್ ಮತ್ತು ಘೆವ್ರಾ ನಿಲ್ದಾಣಗಳನ್ನು ಈಗ ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (DMRC) ಟ್ವೀಟ್ ಮಾಡಿದೆ.
ಇದನ್ನೂ ಓದಿ:ಚಳಿಗಾಲಕ್ಕೆ ಟ್ರೆಂಡಿ ಬಟ್ಟೆ
ದೆಹಲಿಯಿಂದ NCR ಕಡೆ ತೆರಳುವ ರೈಲು ಪ್ರಯಾಣಕ್ಕೆ ಅವಕಾಶ ನೀಡಲಾಗಿದ್ದು NCR ಕಡೆಯಿಂದ ದೆಹಲಿ ರೈಲು ಪ್ರಯಾಣವನ್ನು ಮುಂದಿನ ಸೂಚನೆ ಬರುವವರೆಗೂ ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಂಪು ವಲಯದ ದಲ್ಶಾದ್ ಗಾರ್ಡನ್ ಮತ್ತು ಮೇಜರ್ ಮೋಹಿತ್ ಶರ್ಮಾ ರಾಜೇಂದರ್ ನಗರದ ನಡುವಿನ ಮೆಟ್ರೋ ರೈಲು ಸೇವೆ ಸೇರಿದಂತೆ ಹಳದಿ ಮತ್ತು ಇತರ ವಲಯದ ಪ್ರದೇಶಗಳ ಮೆಟ್ರೋ ರೈಲು ಸೇವೆಯನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.