ಬೆಂಗಳೂರು: ನಗರದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳ ವೀಕ್ಷಣೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವವರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು ಪಂದ್ಯಾವಳಿ ನಡೆಯುವ ದಿನಗಳಂದು ವಿಶೇಷ ಟಿಕೆಟ್ ವ್ಯವಸ್ಥೆ ಮಾಡಿದೆ.
ಅ. 20, 26, ನ. 4, 9 ಮತ್ತು 12ರಂದು ನಗರ ದಲ್ಲಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ನಡೆಯ ಲಿವೆ. ಈ ದಿನಗಳಂದು ಎಲ್ಲ ಮೆಟ್ರೋ ನಿಲ್ದಾಣ ಗಳಲ್ಲಿ “ರಿಟರ್ನ್ ಜರ್ನಿ ಪೇಪರ್ ಟಿಕೆಟ್’ಗಳನ್ನು ಪರಿಚಯಿಸಲಾಗಿದೆ. ಆಯಾ ದಿನಗಳಂದು ಬೆಳಿಗ್ಗೆ 7 ಗಂಟೆಗೆ ಲಭ್ಯವಿರಲಿವೆ. ಈ ಪೇಪರ್ ಟಿಕೆಟ್‌ಗಳ ಬೆಲೆ 50 ರೂ. ಆಗಿದ್ದು, ಕಬ್ಬನ್ ಉದ್ಯಾನ ಮತ್ತು ಎಂ.ಜಿ. ರಸ್ತೆ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಸಂಜೆ 4ರ ನಂತರ ಪ್ರಯಾಣಿಸಬಹುದು. ಒಂದು ಬಾರಿ ಪ್ರಯಾಣಕ್ಕೆ ಮಾತ್ರ ಇದು ಮಾನ್ಯವಾಗಿರುತ್ತದೆ.
ಇದಲ್ಲದೆ, ಕ್ಯುಆರ್ ಕೋಡ್ ಟಿಕೆಟ್‌ಗಳನ್ನು ಖರೀದಿಸಿದರೆ, ಸಾಮಾನ್ಯದರಕ್ಕಿಂತ ಶೇ. 5ರಷ್ಟು ರಿಯಾಯ್ತಿ ದೊರೆಯಲಿದ್ದು, ಪಂದ್ಯಗಳು ನಡೆಯುವ ದಿನಗಳಂದು ಪ್ರಯಾಣಿಸಲು ಇದು ಅನ್ವಯ ಆಗಲಿದೆ. ಕ್ಯುಆರ್ ಟಿಕೆಟ್‌ಗಳನ್ನು ವಾಟ್ಸ್‌ಆ್ಯಪ್ ಅಥವಾ “ನಮ್ಮ ಮೆಟ್ರೋ’ ಆ್ಯಪ್ ಇಲ್ಲವೇ ಪೇಟಿಎಂ ಮೂಲಕ ಪಂದ್ಯ ಆರಂಭವಾಗುವ ಮೊದಲು ಖರೀದಿಸಬಹುದು. ಆ ಮೂಲಕ ಯಾವುದೇ ಅಡಚಣೆ ಇಲ್ಲದೆ ಪ್ರಯಾಣಿಬಹುದು ಎಂದು ನಿಗಮ ತಿಳಿಸಿದೆ.
ಇನ್ನು ಎಂದಿನಂತೆ ಸ್ಮಾರ್ಟ್‌ಕಾರ್ಡ್ ಮತ್ತು ಎನ್‌ಸಿಎಂಸಿ ಕಾರ್ಡ್‌ಗಳನ್ನೂ ಉಪಯೋಗಿ ಸಬಹುದು. ಪಂದ್ಯಾವಳಿ ವೀಕ್ಷಣೆ ಹಿನ್ನೆಲೆಯಲ್ಲಿ ಕಬ್ಬನ್ ಉದ್ಯಾನ ಮತ್ತು ಎಂ.ಜಿ. ರಸ್ತೆಯಲ್ಲಿ ಆಗಬಹುದಾದ ದಟ್ಟಣೆ ತಗ್ಗಿಸಲು ಈ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.