ಬೆಂಗಳೂರು: “ನಮ್ಮ ಮೆಟ್ರೋ’ ಎರಡನೇ ಹಂತದ ಕಾಮಗಾರಿ ಪೂರ್ಣಗೊಳಿಸಲು ಈ ಹಿಂದೆ ನಿಗದಿಪಡಿಸಿದ್ದ ಗಡುವು ಮತ್ತೆ ವಿಸ್ತರಣೆಯಾಗಿದ್ದು, 2024ಕ್ಕೆ ಬಹುನಿರೀಕ್ಷಿತ ಯೋಜನೆಯು ಸೇವೆಗೆ ಮುಕ್ತವಾಗಲಿದೆ. ಈ ಮೂಲಕ ದಶಕದ ಯೋಜನೆ ಇದಾಗಲಿದೆ. 72 ಕಿ.ಮೀ. ಉದ್ದದ 26,405 ಕೋಟಿ ಅಂದಾಜು ವೆಚ್ಚದ ಈ ಯೋಜನೆಗೆ 2012ರಲ್ಲಿ ರಾಜ್ಯ ಸರ್ಕಾರ 2014ರಲ್ಲಿ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿತ್ತು.
2020ರಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಹಲವು ಕಾರಣಗಳಿಂದ ಅನೇಕ ಬಾರಿ ಗಡುವು ವಿಸ್ತರಣೆಯಾಗಿತ್ತು. ಇತ್ತೀಚೆಗೆ 2023ರ ಗುಡುವು ನೀಡಲಾಗಿತ್ತು. ಈಗ ಮತ್ತೆ ಒಂದೂವರೆ ವರ್ಷ ಮುಂದೂಡಲ್ಪಟ್ಟಿದೆ. ಎರಡನೇ ಹಂತದ ಜತೆಗೆ ನಾಗವಾರ-ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗ, ಕೆ.ಆರ್. ಪುರ- ಸಿಲ್ಕ್ ಬೋರ್ಡ್ ಮಾರ್ಗದ ಯೋಜನೆಗಳನ್ನೂ ಇದೇ ಅವಧಿಯಲ್ಲಿ ಮಾಡಿಮುಗಿಸುವುದಾಗಿ ಸ್ವತಃ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೊಂಡಿದೆ.
ಈ ಯೋಜನೆಯಲ್ಲಿ ಮೊದಲಿಗೆ ನಾಯಂಡಹಳ್ಳಿಯ ಮೈಸೂರು ರಸ್ತೆ-ಕೆಂಗೇರಿ ಹಾಗೂ ಯಲಚೇನಹಳ್ಳಿ-ಅಂಜನಾಪುರ ಮಾರ್ಗಗಳು ಸೇವೆಗೆ ಮುಕ್ತಗೊಳ್ಳಲಿವೆ. ಇಲ್ಲಿನ ಕಾಮಗಾರಿಯು 2020ರ ಅಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಪೂರ್ಣಗೊಳ್ಳಲಿದೆ. ತದನಂತರದಲ್ಲಿ ಉಳಿದೆರಡು ವಿಸ್ತರಿಸಿದ ಮಾರ್ಗಗಳನ್ನು ಲೋಕಾರ್ಪಣೆಗೊಳಿಸಲಾಗುವುದು. ಕೊನೆಯಲ್ಲಿ ಅಂದರೆ 2024ಕ್ಕೆ ಗೊಟ್ಟಿಗೆರೆ- ನಾಗವಾರ, ಹೊರವರ್ತುಲ ರಸ್ತೆಯಲ್ಲಿ ಬರುವ ಕೆ.ಆರ್. ಪುರ- ಸಿಲ್ಕ್ಬೋರ್ಡ್ ಹಾಗೂ ನಾಗವಾರ-ಹೆಬ್ಟಾಳ-ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದೆ.
ವಿಸ್ತರಣೆಗೆ ಕಾರಣ: ಭೂಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ, ಗುತ್ತಿಗೆದಾರರ ಬದಲಾವಣೆ, ಚುನಾವಣಾ ನೀತಿ ಸಂಹಿತೆಯಂತಹ ಹಲವು ಅನಿವಾರ್ಯ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ ಎಂದೂ ನಿಗಮವು ಸಮಜಾಯಿಷಿ ನೀಡಿದೆ. ಅನಿಲ ಕೊಳವೆ ಮಾರ್ಗ ಹಾದುಹೋಗಿದ್ದರಿಂದ ವಿಮಾನ ನಿಲ್ದಾಣದ ಮಾರ್ಗದ ವಿನ್ಯಾಸ ಬದಲಾವಣೆ ಮಾಡಲಾಗಿದೆ.
ಇನ್ನು ಗೊಟ್ಟಿಗೆರೆ-ನಾಗವಾರ ಮಾರ್ಗದ ಸುರಂಗ ಕಾಮಗಾರಿಗೆ ಟೆಂಡರ್ ಕರೆದಿದ್ದರೂ ಅಂದಾಜು ಮೊತ್ತಕ್ಕಿಂತ ಹೆಚ್ಚು ಮೊತ್ತವನ್ನು ಉಲ್ಲೇಖೀಸಿದ್ದರಿಂದ ಮರುಟೆಂಡರ್ ಕರೆಯಬೇಕಾಯಿತು. ಕೆ.ಆರ್. ಪುರ- ಸಿಲ್ಕ್ ಬೋರ್ಡ್ ಮಾರ್ಗದ ಮೊದಲ ಟೆಂಡರ್ ರದ್ದಾಗಿದೆ. ಇದೇ ಯೋಜನೆಯಲ್ಲಿ ಕೆ.ಆರ್. ಪುರದಲ್ಲಿ ಸಿಗ್ನಲ್‌ರಹಿತ ಕಾರಿಡಾರ್ ನಿರ್ಮಿಸುವ ಪ್ರಯತ್ನ ಆರಂಭವಾಗಿದೆ. ಇದಕ್ಕಾಗಿ ಮತ್ತಷ್ಟು ಸಮಯ ಬೇಕಿದೆ ಎಂದು ಹೇಳಿದೆ.
ಇಡೀ ಆಗಸ್ಟ್ ತಿಂಗಳಲ್ಲಿ ಮೆಟ್ರೋ ರೈಲಿನಲ್ಲಿ 1.26 ಕೋಟಿ ಪ್ರಯಾಣಿಕರು ಸಂಚರಿಸಿದ್ದು, ಇದರಿಂದ 33.44 ಕೋಟಿ ರೂ. ಆದಾಯ ಬಂದಿದೆ. ಈ ಪೈಕಿ ಶೇ. 68.31ರಷ್ಟು ಜನ ಸ್ಮಾರ್ಟ್ ಕಾರ್ಡ್ ಬಳಸಿದ್ದು, ಶೇ. 37.76ರಷ್ಟು ಜನ ಟೋಕನ್ ತೆಗೆದುಕೊಂಡು ಪ್ರಯಾಣಿಸಿದ್ದಾರೆ.
ವಿವಿಧ ಮಾರ್ಗಗಳ ಪೂರ್ಣಗೊಳಿಸಲು ಹಾಕಿಕೊಂಡ ಗಡುವು ವಿವರ
ಮಾರ್ಗ ಉದ್ದ (ಕಿ.ಮೀ.ಗಳಲ್ಲಿ) ಗಡುವು
ಬೈಯ್ಯಪ್ಪನಹಳ್ಳಿ- ವೈಟ್‌ಫೀಲ್ಡ್ 15.50 2021
ಮೈಸೂರು ರಸ್ತೆ- ಕೆಂಗೇರಿ 6.46 2021
ಯಲಚೇನಹಳ್ಳಿ- ಅಂಜನಾಪುರ 6.29 2021
ನಾಗಸಂದ್ರ- ಬಿಐಇಎಲ್ 3.77 2021
ಆರ್.ವಿ. ರಸ್ತೆ- ಬೊಮ್ಮಸಂದ್ರ 18.82 2021
ನಾಗವಾರ- ವಿಮಾನ ನಿಲ್ದಾಣ 29 2023
ಕೆ.ಆರ್. ಪುರ- ಸಿಲ್ಕ್ ಬೋರ್ಡ್ 17 2024
ಗೊಟ್ಟಿಗೆರೆ- ನಾಗವಾರ 21.25 2024