ಬೆಂಗಳೂರು: “ನಮ್ಮ ಮೆಟ್ರೋ’ ಈಗಾಗಲೇ ಮೊದಲ ಹಂತ 42.3 ಕಿ.ಮೀ. ಪೂರ್ಣಗೊಂಡಿದ್ದು, ಸುಮಾರು 72 ಕಿ.ಮೀ. ಉದ್ದದ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗಿದೆ. 2019ರಲ್ಲಿ ಎರಡು ವಿಸ್ತರಿಸಿದ ಮಾರ್ಗಗಳನ್ನು ಪೂರ್ಣಗೊಳಿಸುವ ಗುರಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿ) ಹೊಂದಿದೆ.
ಮೈಸೂರು ರಸ್ತೆಯಿಂದ ಕೆಂಗೇರಿ (6.46 ಕಿ.ಮೀ.) ಹಾಗೂ ಯಲಚೇನಹಳ್ಳಿಯಿಂದ ಕನಕಪುರ ರಸ್ತೆ (6.29 ಕಿ.ಮೀ.) ಮಾರ್ಗವನ್ನು ಮುಂದಿನ ಒಂದು ವರ್ಷದಲ್ಲಿ ಪೂರ್ಣಗೊಳಿಸುವುದು ಈ ವರ್ಷದ ಪ್ರಮುಖ ಗುರಿ. ಇದರೊಂದಿಗೆ ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ (15.5 ಕಿ.ಮೀ.) ಹಾಗೂ ಆರ್.ವಿ.ರಸ್ತೆ-ಎಲೆಕ್ಟ್ರಾನಿಕ್ ಸಿಟಿ-ಬೊಮ್ಮಸಂದ್ರ (18.82 ಕಿ.ಮೀ.) ಮಾರ್ಗದಲ್ಲಿ ಮೆಟ್ರೋ ಯೋಜನೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವ ಗುರಿ ಇದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ತಿಳಿಸಿದರು.
ಅದೇ ರೀತಿ, ಹೊರವರ್ತುಲ ರಸ್ತೆಯಲ್ಲಿ ಬರುವ ಸೆಂಟ್ರಲ್ ಸಿಲ್ಕ್ಬೋರ್ಡ್-ಕೆ.ಆರ್. ಪುರ ಮತ್ತು ನಗರದಿಂದ ವಿಮಾನ ನಿಲ್ದಾಣದ ನಡುವೆ ಭೂಸ್ವಾಧೀನ, ಯುಟಿಲಿಟಿಗಳ ಸ್ಥಳಾಂತರ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಅದನ್ನೂ ಪೂರೈಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಉಪನಗರ ರೈಲಿಗೆ ಬೇಕಿದೆ ಚಾಲನೆ: ಸಂಚಾರದಟ್ಟಣೆ ನಿರ್ವಹಣೆಗೆ ಮೆಟ್ರೋ ನೆಚ್ಚಿಕೊಂಡರೆ ಸಾಲದು, ಅದಕ್ಕಿಂತ ಹೆಚ್ಚು ಪಾತ್ರ ಉಪನಗರ ರೈಲುಗಳದ್ದಾಗಿದೆ. ನಿತ್ಯ ಸುತ್ತಲಿನ ಊರುಗಳಿಂದ ಸಾವಿರಾರು ಜನ ಇಲ್ಲಿಗೆ ಬಂದಿಳಿಯುತ್ತಾರೆ. ಅದರ ಸಂಚಾರದಟ್ಟಣೆಯೇ ಅಧಿಕವಾಗಿದೆ. ಹಾಗಾಗಿ, ಉಪನಗರಗಳಿಗೆ ಕಮ್ಯುಟರ್ ರೈಲು ಸಂಪರ್ಕ ಕಲ್ಪಿಸುವ ಮೂಲಕ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಗೊಳ್ಳುತ್ತಿದ್ದು, ಬಜೆಟ್‌ನಲ್ಲಿ ಹಣವನ್ನೂ ಮಿಸಲಿಟ್ಟಾಗಿದೆ. ಬರುವ ವರ್ಷದಲ್ಲಿ ಇದನ್ನು ಆದ್ಯತೆ ಮೇರೆಗೆ ಕಾರ್ಯರೂಪಕ್ಕೆ ತರುವ ಪ್ರಯತ್ನಗಳು ನಡೆಯಬೇಕು ಎಂದು ತಜ್ಞರು ಒತ್ತಾಯಿಸುತ್ತಾರೆ.
ಫಲಿತಾಂಶ ತೃಪ್ತಿಕರವಾಗಿಲ್ಲ: ನಗರದ ವಾಹನಗಳ ಸಂಖ್ಯೆ 70 ಲಕ್ಷ ದಾಟಿದೆ. ಜನಸಂಖ್ಯೆ ಕೋಟಿ ಮೀರಿದೆ. ಅದಕ್ಕೆ ತಕ್ಕಂತೆ ಬೇಡಿಕೆಗಳೂ ಹೆಚ್ಚುತ್ತಿವೆ. ಹಾಗಾಗಿ, ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರಗಳ ಫಲಿತಾಂಶ ತೃಪ್ತಿಕರವಾಗಿಲ್ಲ. ಈ ಹಿನ್ನೆಲೆಯಲ್ಲಿ ಬರುವ ವರ್ಷ ಮತ್ತಷ್ಟು ಮೆಟೋ ಮಾರ್ಗಗಳು, ಎಲಿವೇಟೆಡ್ ಕಾರಿಡಾರ್‌ಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಹೀಗಾಗಿ, 2019 ರ ವರ್ಷದಲ್ಲಿ ನಗರದ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳು ಜಾರಿಯಾಗಲಿವೆ.