ಬೆಂಗಳೂರು: ಯಲಚೇನಹಳ್ಳಿಯ ಸುತ್ತಮುತ್ತಲಿನ ಖಾಲಿ ಜಾಗಗಳು ಒಂದೊಂದಾಗಿ ಪಾರ್ಕಿಂಗ್ ಸೆಂಟರ್‌ಗಳಾಗಿ ಬದಲಾಗುತ್ತಿದ್ದು, ವಾಹನ ಸವಾರರಿಂದ ಶುಲ್ಕ ಪಡೆಯುತ್ತಿವೆ. ಪಾರ್ಕಿಂಗ್‌ಗೆ ಅವಕಾಶ ನೀಡುವುದು ಒಂದು ಕಡೆ ಅಧಿಕೃತವಾಗಿ ಉದ್ಯಮವಾಗಿ ಬದಲಾಗಿದ್ದರೆ, ಇನ್ನೊಂದು ಕಡೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಮಾರ್ಗವಾಗಿಯೂ ಬದಲಾಗುತ್ತಿದೆ.
ಮೆಟ್ರೋ ನಿಲ್ದಾಣಗಳಲ್ಲಿ ವಾಹನ ನಿಲುಗಡೆಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಸಾರ್ವಜನಿಕರಿಗೆ ಈ ಪಾರ್ಕಿಂಗ್ ಸೌಲಭ್ಯದಿಂದ ಅನುಕೂಲವೂ ಆಗಿದೆ. ಆದರೆ, ಯಲಚೇನಹಳ್ಳಿಯ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ “ಪಾರ್ಕಿಂಗ್’ಗೆ ಅವಕಾಶ ನೀಡುವುದಕ್ಕೆ ಇಲ್ಲಿನ ಮಾಲೀಕರು ಸ್ಪರ್ಧೆಗೆ ಇಳಿದಿದ್ದಾರೆ. ಮೆಟ್ರೋ ನಿಗಮವು ಅಧಿಕೃತವಾಗಿ ಪಾರ್ಕಿಂಗ್ ಶುಲ್ಕವನ್ನು ಪಡೆಯುವುದಕ್ಕೆ ಟೆಂಡರ್ ಪ್ರಕ್ರಿಯೆಯ ಮೂಲಕ ಅವಕಾಶ ನೀಡಿದೆ. ಕೆಲವು ಮಾಲೀಕರು ಮನಸೋ ಇಚ್ಛೆ ದರ ನಿಗದಿ ಮಾಡುತ್ತಿದ್ದಾರೆ.
ಅನಧಿಕೃತ ಪಾರ್ಕಿಂಗ್: ಯಲಚೇನಹಳ್ಳಿಯ ಮೆಟ್ರೋದ ಅಧಿಕೃತ ಪಾರ್ಕಿಂಗ್ ಪ್ರದೇಶದಲ್ಲಿ ಮೂರು ಭಾಗವಾಗಿ ವಿಂಗಡಿಸಲಾಗಿದ್ದು, ಮೊದಲ ಮತ್ತು ಮೂರನೇ ಭಾಗವನ್ನು ಬೆಳವಾಡಿ ಎನ್ನುವವರಿಗೆ ಟೆಂಡರ್ ಪ್ರಕ್ರಿಯೆ ಮೂಲಕ ಮೆಟ್ರೋ ಸಂಸ್ಥೆ ಪಾರ್ಕಿಂಗ್ ಸೆಂಟರ್ ತೆರೆಯುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ, ಮಧ್ಯದ (ಎರಡನೇ) ಭಾಗವು ಅಶೋಕ್ ಎಂಬವರ ಖಾಸಗಿ ಸ್ವತ್ತಾಗಿದ್ದು, ಇಲ್ಲೂ ಪಾರ್ಕಿಂಗ್ ಸೆಂಟರ್ ತೆರೆಯಲಾಗಿದೆ.
ಮೆಟ್ರೋದ ಅಧಿಕಾರಿಗಳು ಹೇಳುವಂತೆ ಮಧ್ಯ ಭಾಗದ ಜಾಗಕ್ಕೂ ಮೆಟ್ರೋಗೂ ಸಂಬಂಧವಿಲ್ಲ. ಆದರೆ, ಮಧ್ಯಭಾಗದ ಜಾಗದ ಮಾಲೀಕರು ಎನ್ನಲಾಗಿರುವ ಅಶೋಕ್ ಎನ್ನುವವರು ಈ ಜಾಗವನ್ನು ಬೆಳವಾಡಿ ಎನ್ನುವವರಿಗೆ ಪಾರ್ಕಿಂಗ್ ಉದ್ದೇಶಕ್ಕಾಗಿ ನೀಡಲಾಗಿದೆ ಎನ್ನುತ್ತಾರೆ. ಎರಡರಲ್ಲೂ ಪ್ರತ್ಯೇಕ ಶುಲ್ಕ ಪಡೆಯಲಾಗುತ್ತಿದೆ. ಸುರಕ್ಷತಾ ಮಾನದಂಡಗಳಿಲ್ಲ: ಯಲಚೇನಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಐದು ಪಾರ್ಕಿಂಗ್ ಸೆಂಟರ್ ಗಳಿವೆ. ಆದರೆ, ಅಧಿಕೃತ ಮತ್ತು ಅನಧಿಕೃತ ಎನ್ನುವ ರೇಖೆ ಹೊರತುಪಡಿಸಿದರೆ, 2ಕಡೆ ಯಾವುದೇ ವ್ಯತ್ಯಾಸವಿಲ್ಲ. ಇಲ್ಲಿನ ಯಾವುದೇ ಸುರಕ್ಷತಾ ಸಾಧನಗಳಿಲ್ಲ. ಭದ್ರತೆಯಿಲ್ಲ.
-ಹಿತೇಶ್ ವೈ