ಬೆಂಗಳೂರು: “ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ಸಿಹಿ ಸುದ್ದಿ. ಬರುವ ವಾರದಿಂದ ಮೆಟ್ರೋ ಸೇವೆ ಒಂದು ತಾಸು ಮುಂಚಿತವಾಗಿಯೇ ಲಭ್ಯವಾಗಲಿದ್ದು, ಇದರೊಂದಿಗೆ ಕೊರೊನಾ ಪೂರ್ವದಲ್ಲಿದ್ದ ಸೇವೆಯೇ ಜನರಿಗೆ ಸಿಗಲಿದೆ.
ಪ್ರಸ್ತುತ ಬೆಳಗಿನಜಾವ 6ರಿಂದ ಮೆಟ್ರೋ ಕಾರ್ಯಾರಂಭ ಆಗುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಈ ಸೇವೆಯನ್ನುಡಿ. 20ರಿಂದ ಪ್ರತಿದಿನ ಒಂದು ತಾಸು ಮುಂಚಿತವಾಗಿ ಅಂದರೆ 5 ಗಂಟೆಯಿಂದಲೇ ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ನಿರ್ಧರಿಸಿದೆ. ಭಾನುವಾರ ಮಾತ್ರ ಈಗಿರುವಂತೆಯೇ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಕಾರ್ಯಾಚರಣೆ ಮಾಡಲಿದೆ.
ಪರಿಷ್ಕೃತ ವೇಳಾಪಟ್ಟಿಯು ಡಿ.20ರಿಂದ ಜಾರಿಗೆ ಬರಲಿದ್ದು, ಅದರಂತೆ ಸೋಮವಾರದಿಂದ ಶನಿವಾರದವರೆಗೆ ನಾಗಸಂದ್ರ, ರೇಷ್ಮೆ ಸಂಸ್ಥೆ, ಕೆಂಗೇರಿ, ಬೈಯಪ್ಪನಹಳ್ಳಿ ಸೇರಿದಂತೆ ನಾಲ್ಕೂ ಟರ್ಮಿನಲ್‌ಗಳಿಂದ ಮೊದಲ ರೈಲು ಬೆಳಗಿನಜಾವ 5 ಗಂಟೆಗೆ ನಿರ್ಗಮಿಸಲಿದೆ. ಇದೇ ಟರ್ಮಿನಲ್‌ಗಳಿಂದ ವಾರದ ಎಲ್ಲ ದಿನಗಳೂ ಕೊನೆಯ ರೈಲು ರಾತ್ರಿ 11 ಗಂಟೆಗೆ ಹೊರಡಲಿದ್ದು, ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ರಾತ್ರಿ 11.30ಕ್ಕೆ ನಾಲ್ಕೂ ರೈಲುಗಳು ನಿರ್ಗಮಿಸಲಿವೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾತ್ರಿ ಕರ್ಫ್ಯೂ ತೆರವಾದ ನಂತರದಿಂದ ಬೆಳಗಿನಜಾವ ನಾನಾ ಭಾಗಗಳಿಂದ ಬಸ್‌ಗಳು, ರೈಲುಗಳಲ್ಲಿ ಇಲ್ಲಿಗೆ ಬಂದಿಳಿಯುವವರು, ಕೆಲಸಕ್ಕೆ ತೆರಳುವವರ ಸಂಖ್ಯೆಯಲ್ಲಿ ಸಾಕಷ್ಟು ಏರಿಕೆ ಕಂಡುಬಂದಿದೆ. ಆದರೆ, ಅವರಿಗೆ ಮೆಟ್ರೋ ಸೇವೆ ಇಲ್ಲದ್ದರಿಂದ ಅನಿವಾರ್ಯವಾಗಿ ಬಸ್‌ಗಳು ಅಥವಾ ಆಟೋ, ಟ್ಯಾಕ್ಸಿಗಳನ್ನು ಅವಲಂಬಿಸಬೇಕಿದೆ. ಈ ಸಂಬಂಧ ಪ್ರಯಾಣಿಕರಿಂದ ಸಾಕಷ್ಟು ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿಬಿಎಂಆರ್‌ಸಿಎಲ್ ತನ್ನ ಸೇವೆಯನ್ನು ವಿಸ್ತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.