Advertisement
ಸುರಂಗದಿಂದ ಎತ್ತರಿಸಿದ ಮಾರ್ಗ ಪ್ರವೇಶಿಸುವ ಜಾಗಗಳಲ್ಲಿ ಕಿಡಿಗೇಡಿಗಳು ಮೆಟ್ರೋ ರೈಲುಗಳ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಮಂತ್ರಿಸ್ಕ್ವೇರ್ ಸಂಪಿಗೆ ರಸ್ತೆ ಪ್ರವೇಶಿಸುವ ಮಾರ್ಗದಲ್ಲಿ ಈ ಕಲ್ಲುತೂರಾಟ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಸಂಬಂಧ ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಬಿಎಂಆರ್‌ಸಿಎಲ್‌ನಿಂದ ದೂರು ಕೂಡ ದಾಖಲಾಗಿರುವುದು ತಡವಾಗಿ ಬೆಳಕಿಗೆಬಂದಿದೆ.
Related Articles
Advertisement
ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು: ಈ ಹಿಂದೆ ಮೆಟ್ರೊ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ಗಂಭೀರವಾಗಿ ತೆಗೆದು ಕೊಂಡಿದ್ದ ಶ್ರೀರಾಮಂಪುರ ಪೊಲೀಸರು ಸಂಪಿಗೆ ರಸ್ತೆ ಮತ್ತು ಕೆಂಪೇಗೌಡ ಮಾರ್ಗದ ನಡುವೆ ಸಂಚರಿಸುವ ಮೆಟ್ರೊ ರೈಲಿನ ಮೇಲೆ ತೀವ್ರ ನಿಗಾವಹಿಸಿದ್ದರು. ಸಂಜೆ ಮತ್ತು ರಾತ್ರಿಯ ವರೆಗೂ ಗಸ್ತು ತಿರುಗಿ ಕಿಡಿಗೇಡಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಹಲವು ದಿನಗಳ ಕಾಲ ಪೊಲೀಸರು ಗಸ್ತು ತಿರುಗುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚರಗೊಂಡಿದ್ದ ಕಿಡಿಗೇಡಿಗಳು ಮೆಟ್ರೊ ರೈಲಿನತ್ತ ಕಲ್ಲು ತೂರಾಟ ನಡೆಸುವುದನ್ನು ನಿಲ್ಲಿಸಿದ್ದರು.
ಶ್ರೀರಾಂಪುರದಲ್ಲಿ ಮಾತ್ರ ಇಂತಹ ಘಟನೆ: ನಗರದ ನಾಲ್ಕೂ (ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ವರೆಗೆ, ನಾಗಸಂದ್ರದಿಂದ ಯಲಚೇನಹಳ್ಳಿ ವರೆಗೆ ) ದಿಕ್ಕುಗಳಲ್ಲಿ ಮೆಟ್ರೊ ರೈಲು ಸಂಚರಿಸುತ್ತಿದೆ. ಆದರೆ ಎಲ್ಲಿ ಕೂಡ ಇಂತಹ ಘಟನೆಗಳು ನಡೆಯುತ್ತಿಲ್ಲ. ಕೇವಲ ಶ್ರೀರಾಂಪುರ ಭಾಗದಲ್ಲಿ ಮಾತ್ರ ಮೆಟ್ರೊ ರೈಲಿನ ಮೇಲೆ ಕಲ್ಲು ತೂರಾಟ ನಡೆಯುತ್ತಿದೆ. ಹೀಗಾಗಿ, ಈ ಬಗ್ಗೆ ನಿಗಾವಹಿಸುವ ಅಗತ್ಯವಿದೆ ಎಂದು ಮೆಟ್ರೊ ರೈಲು ಹಿರಿಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳು ತಿಳಿಸಿದ್ದಾರೆ.
ಸುರಕ್ಷತೆಗೆ ಆದ್ಯತೆ: ಮುಂಜಾನೆಯಿಂದ ರಾತ್ರಿವರೆಗೂ ಹಲವು ಸಂಖ್ಯೆಯಲ್ಲಿ ಮೆಟ್ರೋದಲ್ಲಿ ಸಾವಿರಾರು ಜನ ಪ್ರಯಾಣಿಸುತ್ತಾರೆ. ಆದರೆ ಕಲ್ಲು ತೂರಾಟದಂತಹ ಘಟನೆಗಳು ಆಗಾಗ್ಗೆ ಮರುಕಳಿಸುವುದರಿಂದ ಪ್ರಯಾಣಿಕರು ಕೂಡ ಆತಂಕಗೊಳ್ಳುತ್ತಾರೆ. ಪ್ರಯಾಣಿಕರಿಗೆ ಸುರಕ್ಷತೆ ನೀಡುವುದು ಮೆಟ್ರೊ ರೈಲ್ವೆಯ ಮೊದಲ ಆದ್ಯತೆಯಾಗಿದೆ. ಆ ಹಿನ್ನೆಲೆಯಲ್ಲಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಪೊಲೀಸರ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಶ್ರೀರಾಂಪುರ ವ್ಯಾಪ್ತಿಯಲ್ಲಿ ಕಿಡಿಗೇಡಿಗಳು ಮೆಟ್ರೊ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ್ದು, ಆ ಹಿನ್ನೆಲೆಯಲ್ಲಿ ಮೆಟ್ರೊ ರೈಲಿನ ಎರಡು ಗಾಜುಗಳಿಗೆ ಹಾನಿ ಉಂಟಾಗಿದೆ. ಈ ಸಂಬಂಧ ಶ್ರೀರಾಂಪುರ ಪೊಲೀಸರಿಗೆ ದೂರು ನೀಡಲಾಗಿದೆ.-ಯಶವಂತ್ ಚವಾಣ್, ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ