Advertisement

ಮೆಟ್ರೋ ಈಗ ಉತ್ತರ ಮುಖಿ!

01:35 PM Dec 26, 2017 | Team Udayavani |

ಬೆಂಗಳೂರು: ನಮ್ಮ ಮೆಟ್ರೋದ ಈವರೆಗಿನ ಎಲ್ಲ ಮಾರ್ಗಗಳು ಹಾಗೂ ಪ್ರಸ್ತಾವಿತ ಯೋಜನೆಗಳಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿರುವ ನಗರದ ಉತ್ತರ ಭಾಗ, ಅಂದರೆ ಮೇಕ್ರಿ ವೃತ್ತ, ಹೆಬ್ಟಾಳ ಭಾಗಕ್ಕೆ ಮೆಟ್ರೋ ಸಂಪರ್ಕ ಭಾಗ್ಯ ಲಭ್ಯವಾಗುವ ಸೂಚನೆ ದೊರೆತಿದೆ. ಈಗಾಗಲೇ ಉಕ್ಕಿನ ಸೇತುವೆ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಉತ್ತರ ಭಾಗದ ನಾಗರಿಕರಿಗೆ ನಮ್ಮ ಮೆಟ್ರೋ ಅತ್ಯುತ್ತಮ ಸಾರಿಗೆ ವ್ಯವಸ್ಥೆಯಾಗಲಿದೆ.

Advertisement

ಸಚಿವ ಸಂಪುಟ ಈಚೆಗೆ ಅನುಮೋದಿಸಿರುವ ನಾಗವಾರ-ವಿಮಾನ ನಿಲ್ದಾಣ ಮಾರ್ಗಕ್ಕೆ ಸಂಬಂಧಿಸಿದ ಯೋಜನಾ ವರದಿಯ ನಡಾವಳಿಯಲ್ಲಿ, ಭವಿಷ್ಯದಲ್ಲಿ ನಗರಕ್ಕೆ ಸಂಪರ್ಕ ಕಲ್ಪಿಸಲು ಒಂದು ಮಾರ್ಗವನ್ನು ಮೀಸಲಿಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಅದರಂತೆ ನಾಗವಾರದಿಂದ ಆರಂಭಗೊಳ್ಳುವ ಮೆಟ್ರೋ ಮಾರ್ಗವು ಆರ್‌.ಕೆ.ಹೆಗ್ಡೆ ನಗರದ ಬಳಿ ಎಡಕ್ಕೆ ತಿರುವು ಪಡೆಯುತ್ತದೆ. ಅಲ್ಲಿ ಭವಿಷ್ಯದಲ್ಲಿ ನಗರಕ್ಕೆ ಸಂಪರ್ಕ ಕಲ್ಪಿಸುವ ಸಲುವಾಗಿ ಒಂದು ಮೆಟ್ರೋ ಮಾರ್ಗವನ್ನು ಮೀಸಲಿಡಲು ಉದ್ದೇಶಿಸಲಾಗಿದೆ. ಇದೇ ಕಾರಣಕ್ಕೆ ಆರ್‌.ಕೆ.ಹೆಗ್ಡೆ ನಗರದ ಬಳಿ ಇಂಟರ್‌ಚೇಂಜ್‌ ಸ್ಟೇಷನ್‌ ನಿರ್ಮಿಸುವುದಾಗಿ ನಿಗಮ ಹೇಳಿದೆ.

ಕೋಗಿಲು ಕ್ರಾಸ್‌ನಿಂದ ಮೆಟ್ರೋ?: ಕೋಗಿಲು ಕ್ರಾಸ್‌ನಿಂದ ನಗರದ ಹೃದಯಭಾಗಕ್ಕೆ ಮೆಟ್ರೋ ಸಂಪರ್ಕಿಸುವ ಬಗ್ಗೆಯೂ ಚಿಂತನೆಯಿದೆ. ಇದು ಹೆಬ್ಟಾಳ, ಮೇಕ್ರಿ ವೃತ್ತ ಸೇರಿದಂತೆ ನಗರದ ಉತ್ತರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದು ಸಾಧ್ಯವಾದರೆ, ಉಕ್ಕಿನ ಸೇತುವೆ ಯೋಜನೆ ವಂಚಿತ ಆ ಭಾಗದ ಜನರಿಗೆ ಅತ್ಯುತ್ತಮ ಸಾರಿಗೆ ಸೇವೆ ಸಿಗಲಿದೆ.

ಈಗಾಗಲೇ ಅನುಮೋದನೆಗೊಂಡಿರುವ ಏರ್‌ಪೋರ್ಟ್‌ ಮೆಟ್ರೋ ಮಾರ್ಗವು ವಿಮಾನ ನಿಲ್ದಾಣದಿಂದ ಬಂದು, ಕೋಗಿಲು ಕ್ರಾಸ್‌ನಲ್ಲಿ ಎಡಕ್ಕೆ ತಿರುವು ಪಡೆಯುತ್ತದೆ. ಆ ತಿರುವಿನಿಂದ ನಗರದ ಸೆಂಟ್ರಲ್‌ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ತಂದು ಸೇರಿಸುವ ಆಲೋಚನೆ ನಿಗಮಕ್ಕಿದೆ. ಈ ಮಾರ್ಗದ ಅಂತರ 8 ಕಿ.ಮೀ ಆಗಿದ್ದು, ಉಕ್ಕಿನ ಸೇತುವೆಗಿಂತಲೂ ದುಪ್ಪಟ್ಟು ವೆಚ್ಚವಾಗಲಿದೆ. ಆದರೆ, ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಹೆಚ್ಚು ಸೂಕ್ತ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

Advertisement

ಈ ಮಾರ್ಗದ ಅಗತ್ಯವೇನು?: 62.6 ಕಿ.ಮೀ ಹೊರವರ್ತುಲ ಮತ್ತು 106 ಕಿ.ಮೀ. ಪೆರಿಫೆರಲ್‌ ರಸ್ತೆಯಲ್ಲಿ ಮೆಟ್ರೋ ಜಾಲ ವಿಸ್ತರಿಸುವ ಯೋಜನೆಯಿದೆ. ಆದರೆ, ಈ ಯೋಜನೆಯಲ್ಲಿ ನಗರದ ಉತ್ತರಕ್ಕೆ ಅಂದರೆ ಮೇಕ್ರಿ ವೃತ್ತ, ಹೆಬ್ಟಾಳದ ಪ್ರಸ್ತಾಪವಿಲ್ಲ. ಈ ಹಿಂದಿದ್ದ ಹೈಸ್ಪೀಡರ್‌ ರೈಲು ಹಾಗೂ ಉಕ್ಕಿನ ಸೇತುವೆ ನಿರ್ಮಾಣ ಯೋಜನೆ ಪ್ರಸ್ತಾವನೆಗಳನ್ನೂ ಕೈಬಿಡಲಾಗಿದೆ. ಈಗ ನಾಗವಾರ-ವಿಮಾನ ನಿಲ್ದಾಣ ಮೆಟ್ರೋ ಮಾರ್ಗವೂ ನಗರದ ಉತ್ತರ ಭಾಗಕ್ಕೆ ಸಂಪರ್ಕ ಕಲ್ಪಿಸುವುದಿಲ್ಲ.

ಈ ಹಿನ್ನೆಲೆಯಲ್ಲಿ ಕೋಗಿಲು ಕ್ರಾಸ್‌ನಿಂದ ಸೆಂಟ್ರಲ್‌ ಕಾಲೇಜು ನಡುವೆ ಮೆಟ್ರೋ ಮಾರ್ಗ ನಿರ್ಮಿಸುವ ಚಿಂತನೆಯಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು “ಉದಯವಾಣಿ’ಗೆ ತಿಳಿಸಿವೆ. ಆರಂಭದಲ್ಲಿ ರೂಪಿಸಿದ ಯೋಜನೆಯ ನಕ್ಷೆಯಲ್ಲಿ ಹೆಬ್ಟಾಳ ಮಾರ್ಗದಲ್ಲಿ ಮೆಟ್ರೋ ಮಾರ್ಗ ನಿರ್ಮಿಸುವ ಪ್ರಸ್ತಾವನೆ ಇದ್ದು, ಭೂ ಸ್ವಾಧೀನ ಕೂಡ ನಡೆದಿತ್ತು. ನಂತರದಲ್ಲಿ ಅವಗಣನೆಗೆ ಒಳಗಾದ ಈ ಮಾರ್ಗ ಕಡಿಮೆ ಅಂತರದಲ್ಲಿ ನೇರವಾಗಿ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ ಎಂದು ಸಾರಿಗೆ ತಜ್ಞ ಪ್ರೊ.ಎಂ.ಎನ್‌. ಶ್ರೀಹರಿ ಅಭಿಪ್ರಾಯಪಡುತ್ತಾರೆ.

ಸದ್ಯಕ್ಕಂತೂ ಹೆಬ್ಟಾಳ ಮಾರ್ಗದಲ್ಲಿ ಮೆಟ್ರೋ ನಿರ್ಮಿಸುವ ಪ್ರಸ್ತಾವ ನಿಗಮದ ಮುಂದಿಲ್ಲ. ಮುಂದಿನ ದಿನಗಳಲ್ಲಿ ಅಂತಹ ಪ್ರಸ್ತಾವನೆಗಳು ಬಂದರೆ ತಿಳಿಸಲಾಗುವುದು.
-ಯು.ಎ.ವಸಂತರಾವ್‌, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಎಂಆರ್‌ಸಿ

ದೇವನಹಳ್ಳಿಗೂ ವಿಸ್ತರಣೆ?: ನಾಗವಾರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಟ್ರಂಪೆಟ್‌ ಇಂಟರ್‌ಚೇಂಜ್‌ ನಿರ್ಮಿಸಲು ಉದ್ದೇಶಿಸಲಾಗಿದೆ. ಚಿಕ್ಕಜಾಲ ಮತ್ತು ವಿಮಾನ ನಿಲ್ದಾಣ ಪಶ್ಚಿಮ ಭಾಗದ ಮಧ್ಯೆ ಒಂದು ಟ್ರಂಪೆಟ್‌ ಇಂಟರ್‌ಚೇಂಜ್‌ ಸ್ಟೇಷನ್‌ ಬರಲಿದೆ. ಇದರಿಂದ ಭವಿಷ್ಯದಲ್ಲಿ ದೇವನಹಳ್ಳಿಗೂ ಮೆಟ್ರೋ ಸಂಪರ್ಕ ವಿಸ್ತರಿಸುವ ಆಲೋಚನೆ ಇದೆ ಎಂದು ನಿಗಮ ತಿಳಿಸಿದೆ. 

ಎರಡು ಇಂಟರ್‌ ಚೇಂಜ್‌: 29.06 ಕಿ.ಮೀ. ಉದ್ದದ ನಾಗವಾರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಧ್ಯೆ ಏಳು ನಿಲ್ದಾಣಗಳು ಬರಲಿದ್ದು, ಈ ಪೈಕಿ ಆರ್‌.ಕೆ. ಹೆಗ್ಡೆನಗರ (ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಇಂಟರ್‌ಚೇಂಜ್‌ ನಿಲ್ದಾಣ), ಜಕ್ಕೂರು, ಕೋಗಿಲು ಕ್ರಾಸ್‌, ಚಿಕ್ಕಜಾಲ, ಟ್ರಂಪೆಟ್‌ ಸ್ಟೇಷನ್‌ (ದೇವನಹಳ್ಳಿಗೆ ಸಂಪರ್ಕ ಕಲ್ಪಿಸುವುದು), ವೆಸ್ಟ್‌ ಕೆಐಎ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ ಸ್ಟೇಷನ್‌ ಸೇರಿ ಎರಡು ಇಂಟರ್‌ಚೇಂಜ್‌ ಇರಲಿವೆ.

ಶುಲ್ಕ ಸಂಗ್ರಹಕ್ಕೆ ಅನುಮತಿ ಕಡ್ಡಾಯ: ನಾಗವಾರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ತಗಲುವ 5,950.02 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಪಾಲು ಸಾವಿರ ಕೋಟಿ ರೂ. ಇದೆ. ಈ ಮೊತ್ತವನ್ನು ಪ್ರಾಧಿಕಾರವು ವಿಮಾನ ಪ್ರಯಾಣಿಕರಿಂದ ಸಂಗ್ರಹಿಸಲಿದ್ದು, ಇದಕ್ಕಾಗಿ ಪ್ರತಿ ಪ್ರಯಾಣಿಕರಿಗೆ 60ರಿಂದ 80 ರೂ. ಹೆಚ್ಚುವರಿಯಾಗಿ ಸಂಗ್ರಹಿಸಲು ನಿರ್ಧರಿಸಿದೆ. ಆದರೆ, ಈ ಸಂಬಂಧದ ಪ್ರಸ್ತಾವಕ್ಕೆ ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ (ಎಇಆರ್‌ಎ)ದಿಂದ ಅನುಮತಿ ಕಡ್ಡಾಯ.

* ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next