Advertisement
ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಹಾಗೂ ನಾಗಸಂದ್ರ-ಯಲಚೇನಹಳ್ಳಿ ನಡುವೆ ಮೆಟ್ರೋ ಪ್ರಯಾಣ ದರ ಕ್ರಮವಾಗಿ 45 ರೂ. ಹಾಗೂ 60 ರೂ. ಇದೆ. ಈ ನಿಗದಿತ ಅವಧಿಯನ್ನು ಕ್ರಮಿಸಲು ಮೆಟ್ರೋ ತೆಗೆದುಕೊಳ್ಳುವ ಸಮಯ 40ರಿಂದ 50 ನಿಮಿಷಗಳು. ಇದೇ ಮಾರ್ಗಗಳ ನಡುವೆ ಬಸ್‌ನಲ್ಲಿ ಹೊರಟರೆ ಪ್ರಯಾಣ ದರ ಕ್ರಮವಾಗಿ 21 ರೂ. ಹಾಗೂ 24 ರೂ. ಆಗುತ್ತದೆ. ಸಮಯ ಒಂದೂವರೆಯಿಂದ ಎರಡು ತಾಸು ಬೇಕಾಗುತ್ತದೆ.
Related Articles
Advertisement
ಇನ್ನು ಮೆಟ್ರೋ ಸಂಪೂರ್ಣವಾಗಿ ಆರಂಭವಾದ ನಂತರ ಬಸ್‌ಗಳ ಜತೆಗೆ ಆಟೋ ಮತ್ತು ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಿಗೆ ಕತ್ತರಿ ಬೀಳಲಿದೆ ಎಂದು ಹೇಳಲಾಗುತ್ತಿದೆ. ಈ ಎರಡೂ ಮಾರ್ಗಗಳ ನಾಲ್ಕೂ ಟರ್ಮಿನಲ್‌ಗಳ ನಡುವಿನ ಆಟೋ ಮತ್ತು ಟ್ಯಾಕ್ಸಿ ಪ್ರಯಾಣ ದರಗಳಿಗೆ ಹೋಲಿಸಿದರೆ, ಮೆಟ್ರೋ ಪ್ರಯಾಣದರ ನಾಲ್ಕು ಪಟ್ಟು ಕಡಿಮೆ ಇದೆ. ಹೀಗಾಗಿ ಟ್ಯಾಕ್ಸಿ, ಆಟೋ ಬಳಸುವವರು ಮಟ್ರೋ ಮೊರೆ ಹೋಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಆಟೋ ಸೇವೆಗೆ ಆತಂಕವಿಲ್ಲ: ಆದರೆ, ಈ ವಾದವನ್ನು ಆಟೋ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಮೀನಾಕ್ಷಿ ಸುಂದರಂ ತಳ್ಳಿಹಾಕುತ್ತಾರೆ. “ಮೆಟ್ರೋ ಕೇವಲ ನಿರ್ದಿಷ್ಟ ಮಾರ್ಗದಲ್ಲಿ ಸಂಚರಿಸುತ್ತದೆ. ಆದರೆ, ಆಟೋಗಳು ಜನರ ಮನೆ ಬಾಗಿಲಿಗೆ ಕೊಂಡೊಯ್ಯುತ್ತವೆ. ಅಷ್ಟಕ್ಕೂ ಆಟೋಗಳು ಬೈಯಪ್ಪನಹಳ್ಳಿ-ಮೈಸೂರು ರಸ್ತೆ ಅಥವಾ ನಾಗಸಂದ್ರ-ಯಲಚೇನಹಳ್ಳಿಯಂತಹ ದೂರದ ಪ್ರದೇಶಗಳಿಗೆ ಬಾಡಿಗೆ ಹೋಗುವುದೇ ಇಲ್ಲ. ಹಾಗೆ ಹೋದರೆ ಚಾಲಕರಿಗೆ ನಷ್ಟವೇ ಹೆಚ್ಚು,’ ಎಂದು ಅಭಿಪ್ರಾಯಪಡುತ್ತಾರೆ.
“ಹೆಚ್ಚು ದೂರ ಹೋದಾಗ ತಕ್ಷಣ ಮತ್ತೂಂದು ಬಾಡಿಗೆ ಸಿಗಬೇಕು. ಇಲ್ಲವಾದರೆ, ಅಲ್ಲಿಂದ ಸುಮಾರು ದೂರ ಕ್ರಮಿಸಬೇಕಾಗುತ್ತದೆ. 2-3 ಕಿ.ಮೀ. ಅಂತರದ ಬಾಡಿಗೆ ಸಿಕ್ಕರೆ ಲಾಭ ಹೆಚ್ಚು. ಬೈಯಪ್ಪನಹಳ್ಳಿ-ಮೈಸೂರು ರಸ್ತೆ ನಡುವೆ ಮೆಟ್ರೋ ಸೇವೆ ಆರಂಭವಾದ ನಂತರ ಅಲ್ಲಿ ಆಟೋಗಳ ಸೇವೆಯೇನೂ ಕಡಿಮೆ ಆಗಿಲ್ಲ. ಬದಲಾಗಿ ಮೆಟ್ರೋಗೆ ಆಟೋ “ಸಂಪರ್ಕ ಸೇವೆ’ ಆಗಿ ಬಳಕೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಕಡಿಮೆ ದೂರಕ್ಕೆ ಬಸ್‌ಗಳೇ ಬೆಸ್ಟ್: “ಸಾಮಾನ್ಯ ಬಸ್‌ಗಳಿಗೆ ಹೋಲಿಸಿದರೆ, ಮೆಟ್ರೋ ಪ್ರಯಾಣ ದರ ದುಬಾರಿಯಾಗಿದೆ. ಸಮಯ ಉಳಿತಾಯ ಆಗಬಹುದು. ಆದರೆ, ಸಾಮಾನ್ಯ ವರ್ಗಗಳಿಗೆ ಅದು ಹೊರೆಯೇ ಆಗಲಿದೆ. ಇನ್ನು 3ರಿಂದ 5 ಕಿ.ಮೀ. ಅಂತರದಲ್ಲಿ ಸಂಚರಿಸುವವರಿಗೆ ಬಸ್‌ಗಳೇ ಸೂಕ್ತ. ಉದಾಹರಣೆಗೆ 3 ಕಿ.ಮೀ. ಒಳಗೆ ಸಂಚರಿಸುವವರು ಮೆಟ್ರೋ ನಿಲ್ದಾಣ ಏರಿ, ತಪಾಸಣೆಗೆ ಒಪಡಬೇಕು. ನಂತರ ರೈಲಿಗಾಗಿ ಕಾಯಬೇಕು. ಮತ್ತೆ ಇಳಿದು ನಿಗದಿತ ಸ್ಥಳಕ್ಕೆ ಕಾಲ್ನಡಿಗೆಯಲ್ಲಿ ಸಾಗಬೇಕು,’ ಎಂಬುದು ಬಿಎಂಟಿಸಿ ಅಧಿಕಾರಿಯೊಬ್ಬರ ಅಭಿಪ್ರಾಯ.
ಮಾಸಿಕ ಪಾಸ್ ಸೌಲಭ್ಯ: ಬಿಎಂಟಿಸಿ ಬಸ್‌ನ ಮಾಸಿಕ ಪಾಸ್‌ಗಳ ದರ ತಿಂಗಳಿಗೆ 1,050 ರೂ. ಇದ್ದು, ತಿಂಗಳು ಪೂರ್ತಿ ನಗರದಾದ್ಯಂತ ಪ್ರಯಾಣಿಸಬಹುದು. ಆದರೆ, ಮೆಟ್ರೋ ಸೇವೆಯಲ್ಲಿ ಈ ಸೌಲಭ್ಯವಿಲ್ಲ. ಸ್ಮಾರ್ಟ್ ಕಾರ್ಡ್ ಹೊರತುಪಡಿಸಿದರೆ, ಯಾರೊಬ್ಬರಿಗೂ ಪ್ರಯಾಣ ದರದಲ್ಲಿ ರಿಯಾಯ್ತಿ ಇಲ್ಲ.
ಮಾರ್ಗ: ಬೈಯಪ್ಪನಹಳ್ಳಿ-ಮೈಸೂರು ರಸ್ತೆ (18.1 ಕಿ.ಮೀ.)ಬಸ್ ಮೆಟ್ರೋ ಟ್ಯಾಕ್ಸಿ
21 ರೂ. 45 ರೂ. 200-250 ರೂ. ಮಾರ್ಗ: ನಾಗಸಂದ್ರ-ಯಲಚೇನಹಳ್ಳಿ (24.2 ಕಿ.ಮೀ.)
ಬಸ್ ಮೆಟ್ರೋ ಟ್ಯಾಕ್ಸಿ
25 ರೂ. 60 ರೂ. 250-300 ರೂ. * ಬಿಎಂಟಿಸಿ ವೋಲ್ವೋ ಸೇವೆಗಳು ಈ ಮಾರ್ಗದಲ್ಲಿ ಇಲ್ಲ. ಆದರೆ, ಇಷ್ಟೇ ದೂರ ಕ್ರಮಿಸಲು 60-70 ರೂ. ಪ್ರಯಾಣ ದರವಿದೆ. * ವಿಜಯಕುಮಾರ್ ಚಂದರಗಿ