Advertisement

ಗಡುವಿಗೆ ಮುನ್ನವೇ ಮೆಟ್ರೋ ಪೂರ್ಣ?

10:38 AM Feb 10, 2020 | Suhan S |

ಬೆಂಗಳೂರು: ಅಂದುಕೊಂಡಂತೆ ಎಲ್ಲವೂ ನಡೆದರೆ, ಬಿಎಂಆರ್‌ಸಿಎಲ್‌ ಸ್ವತಃ ಹಾಕಿಕೊಂಡ ಪರಿಷ್ಕೃತ ಗಡುವಿಗಿಂತ ಮುನ್ನವೇ ಎರಡನೆಯ ಹಂತದ ವಿಸ್ತರಿಸಿದ ಮೊದಲ ಮಾರ್ಗವನ್ನು ಲೋಕಾರ್ಪಣೆ ಮಾಡಲಿದೆ.

Advertisement

ಸುಮಾರು 6.29 ಕಿ.ಮೀ. ಉದ್ದದ ಯಲಚೇನಹಳ್ಳಿ- ಅಂಜನಾಪುರ ಟೌನ್‌ಶಿಪ್‌ ಮಾರ್ಗವನ್ನು 2020ರ ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವುದಾಗಿ ನಿಗಮವು ಗಡುವು ವಿಧಿಸಿಕೊಂಡಿದೆ. ಪ್ರಸ್ತುತ ಕಾಮಗಾರಿ ಪ್ರಗತಿಯ ಅವಲೋಕನ ಹಾಗೂ ಅಧಿಕಾರಿಗಳ ಲೆಕ್ಕಾಚಾರದ ಪ್ರಕಾರ ಈ ನಿಗದಿತ ಗುರಿಗೂ ಎರಡು ತಿಂಗಳು ಮೊದಲೇ ಅಂದರೆ ಜೂನ್‌ ಅಥವಾ ಜುಲೈನಲ್ಲಿ ಪೂರ್ಣಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಇದಾಗಿ ತಿಂಗಳ ಅಂತರದಲ್ಲಿ ಪ್ರಯಾಣಿಕರ ಸೇವೆಗೂ ಮುಕ್ತವಾಗಲಿದೆ.

ಈ ನಿಟ್ಟಿನಲ್ಲಿ ಭರದ ಸಿದ್ಧತೆಗಳು ನಡೆದಿದ್ದು, ನಿಲ್ದಾಣಗಳ ಸಿವಿಲ್‌ ಕಾಮಗಾರಿ ಮುಗಿದಿದೆ. ಹಳಿಗಳ ಜೋಡಣೆಯೂ ಪೂರ್ಣಗೊಂಡಿದ್ದು, ವಿದ್ಯುತ್‌ ಪೂರೈಸುವ ಕೆಲಸ ಪ್ರಗತಿಯಲ್ಲಿದೆ. ಬರುವ ಮಾರ್ಚ್‌ನಿಂದ ಸಿಗ್ನಲ್‌ ಅಳವಡಿಕೆ ಕಾರ್ಯ ಶುರುವಾಗಲಿದೆ. ಇದಕ್ಕೆ ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಇದರಲ್ಲಿ ಕೇಬಲ್‌, ಸಾಫ್ಟ್ವೇರ್‌, ವಿಡಿಯೋ ಸ್ಕ್ರೀನ್‌ ಮತ್ತಿತರ ತಾಂತ್ರಿಕ ಉಪಕರಣಗಳ ಅಳವಡಿಕೆ ಮಾಡಬೇಕಾಗುತ್ತದೆ. ನಂತರದ ಒಂದು ವಾರದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮೋದನೆ ಸಿಗಲಿದೆ. ಒಟ್ಟಾರೆ ಜೂನ್‌ ಅಂತ್ಯ ಅಥವಾ ಜುಲೈ ಮೊದಲ ವಾರದಲ್ಲಿ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಿದ್ಧತೆ ನಡೆದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಇದರೊಂದಿಗೆ ಹಸಿರು ಮಾರ್ಗದ ಉದ್ದ 30.29 ಕಿ.ಮೀ.ನಷ್ಟು ಹಿಗ್ಗಲಿದೆ. ಕನಕಪುರದಿಂದ ಬರುವವರು ಅಂಜನಾಪುರ ಟೌನ್‌ಶಿಪ್‌ನಲ್ಲೇ ಇಳಿದು, ಅಲ್ಲಿಂದ ಮೆಟ್ರೋದಲ್ಲಿ ನಗರಕ್ಕೆ ಬರಬಹುದು. ಈ ಮೂಲಕ ಆ ಭಾಗದ ಸಂಚಾರದಟ್ಟಣೆಯಿಂದ ಜನರಿಗೆ ಮುಕ್ತಿ ಸಿಗಲಿದೆ. ಈ ಮಧ್ಯೆ ಈಗಾಗಲೇ ಪ್ರಯಾಣ ದರ ನಿಗದಿಪಡಿಸುವ ಪ್ರಕ್ರಿಯೆ ಕೂಡ ಉನ್ನತ ಮಟ್ಟದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.

“ಉದ್ದೇಶಿತ ಮಾರ್ಗದಲ್ಲಿ ರಸ್ತೆ ಮೂಲಕ ನಗರದ ಇನ್ನೊಂದು ತುದಿಗೆ ಅಂದರೆ ಪೀಣ್ಯಕ್ಕೆ ತೆರಳಲು ಪೀಕ್‌ ಅವರ್‌ನಲ್ಲಿ ಗಂಟೆಗಟ್ಟಲೆ ಸಮಯ ವ್ಯಯ ಆಗುತ್ತಿದೆ. ಆದ್ದರಿಂದ ಬೆಳಿಗ್ಗೆ 10ಕ್ಕೆ ಕೆಲಸಕ್ಕೆ ತೆರಳಲು 8.30ಕ್ಕೇ ಮನೆ ಬಿಡುತ್ತಿದ್ದೇನೆ. ಮನೆಯಿಂದ ಬಸ್‌, ನಂತರ ಯಲಚೇನ ಹಳ್ಳಿಯಿಂದ ಮೆಟ್ರೋ ಏರಿ ಪೀಣ್ಯಕ್ಕೆ ಹೋಗುತ್ತೇನೆ. ಅಂಜನಾಪುರ ಟೌನ್‌ಶಿಪ್‌ನಿಂದಲೇ ಮೆಟ್ರೋ ಬಂದರೆ, ನಿರ್ದಿಷ್ಟ ಅವಧಿಯಲ್ಲಿ ತಲುಪಬಹುದು. ಸಮಯ ಉಳಿತಾಯದ ಜತೆಗೆ ವಾಹನಗಳು ಉಗುಳುವ ಹೊಗೆಯನ್ನು ಸೇವಿಸುವ ಗೋಳು ಕೂಡ ತಪ್ಪಲಿದೆ’ ಎಂದು ಅಂಜನಾಪುರದ ಕೆ. ಮಂಜುನಾಥ್‌ ತಿಳಿಸಿದರು.

Advertisement

ಒಟ್ಟಾರೆ ಈ ಮಾರ್ಗ ನಿರ್ಮಾಣಕ್ಕೆ ಎರಡು ಹೆಕ್ಟೇರ್‌ ಜಾಗದ ಅವಶ್ಯಕತೆ ಇತ್ತು. ಈ ಪೈಕಿ 850 ಚದರ ಮೀಟರ್‌ನಷ್ಟು ನೈಸ್‌ ವ್ಯಾಪ್ತಿಗೆ ಒಳಪಟ್ಟ ಜಾಗವೂ ಸೇರಿದೆ. ಭೂಸ್ವಾಧೀನ ಪ್ರಕ್ರಿಯೆ ಕಗ್ಗಂಟಾಗಿದ್ದು, ಅದು ಡಿಪೋ ಕಾಮಗಾರಿ ವಿಳಂಬದಲ್ಲಿ ಪರಿಣಮಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪೀಣ್ಯ ಡಿಪೋದಿಂದಲೇ ಮೆಟ್ರೋ ರೈಲುಗಳ ಕಾರ್ಯಾಚರಣೆ ನಡೆಸಲು ಬಿಎಂಆರ್‌ ಸಿಎಲ್‌ ಉದ್ದೇಶಿಸಿದೆ. ಆದರೆ, ಇದರಿಂದ ಕಾರ್ಯಾಚರಣೆಗೆ ತೊಂದರೆ ಆಗಲಿದೆ. ಯಾಕೆಂದರೆ, ನಿತ್ಯ 25 ಕಿ.ಮೀ. ದೂರದಿಂದ ಸೇವೆ ಆರಂಭಗೊಳ್ಳಬೇಕು. ರೈಲಿನಲ್ಲಿ ಯಾವುದೇ ತಾಂತ್ರಿಕ ದೋಷಗಳು ಕಂಡುಬಂದರೆ, ಪೀಣ್ಯಕ್ಕೆ ಹೋಗಬೇಕಾಗುತ್ತದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ವಿಸ್ತರಣೆ ಬೆನ್ನಲ್ಲೇ ಮೆಜೆಸ್ಟಿಕ್‌ನ ಇಂಟರ್‌ಚೇಂಜ್‌ನಲ್ಲಿ ಒತ್ತಡ ಹೆಚ್ಚಲಿದೆ. ಈಗಾಗಲೇ ಬೆಳಿಗ್ಗೆ ಮತ್ತು ಸಂಜೆ ನೇರಳೆ ಜನರಿಂದ ತುಂಬಿತುಳುಕುತ್ತಿದೆ. ಮುಂದಿನ ದಿನಗಳಲ್ಲಿ ಅಂಜನಾಪುರ ಟೌನ್‌ಶಿಪ್‌ನಿಂದ ಕಾರ್ಯಾಚರಣೆ ಮಾಡುವುದರಿಂದ ಜನದಟ್ಟಣೆ ಮತ್ತಷ್ಟು ಅಧಿಕವಾಗಲಿದೆ. ಆಗ, ರೈಲುಗಳ ಫ್ರಿಕ್ವನ್ಸಿ’ (ಎರಡು ರೈಲುಗಳ ನಡುವಿನ ಕಾರ್ಯಾಚರಣೆ ಅಂತರ) ಹೆಚ್ಚಿಸಬೇಕಾಗುತ್ತದೆ. ಇದನ್ನು ಹೇಗೆ ನಿರ್ವಹಿಸಲಿದೆ ಎಂಬುದನ್ನು ಕಾದುನೋಡಬೇಕು.

 

-ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next