ಬೆಂಗಳೂರು: ಹಲವು ಬಾರಿ ಮುನ್ಸೂಚನೆ ನೀಡಿದರೂ ತಮ್ಮ ಬೇಡಿಕೆಗಳಿಗೆ ಬಿಎಂಆರ್‌ಸಿ ಆಡಳಿತ ಮಂಡಳಿ ಸ್ಪಂದಿಸದ ಆರೋಪದ ಹಿನ್ನೆಲೆಯಲ್ಲಿ ಮೆಟ್ರೋ ನೌಕರರ ಸಂಘವು ಜೂ.4ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನಿರ್ಧರಿಸಿದ್ದಾರೆ. ಈಚೆಗೆ ನಡೆದ ಬಿಎಂಆರ್‌ಸಿ ನೌಕರರ ಸಂಘದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಸಂಬಂಧ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆಸರಿಯದಿರಲು ಸಂಘ ಪಟ್ಟುಹಿಡಿದಿದೆ.
ಈಗಾಗಲೇ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಿಎಂಆರ್‌ಸಿ ಆಡಳಿತ ಮಂಡಳಿಗೆ ನೋಟಿಸ್ ನೀಡಿರುವ ಸಂಘ, ಹೈಕೋರ್ಟ್‌ಗೆ ಕೂಡ ಈ ಸಂಬಂಧ ಅಫಿಡವಿಟ್ ಸಲ್ಲಿಸಿದೆ. ಸಾಕಷ್ಟು ಸಮಯಾವಕಾಶ ನೀಡಿದಾಗ್ಯೂ ಆಡಳಿತ ಮಂಡಳಿಯು ಅಸಹಕಾರ ತೋರುತ್ತಿದೆ. ಈ ಮೂಲಕ ನ್ಯಾಯಾಲಯದ ಆದೇಶ ಪಾಲಿಸದೆ, ನ್ಯಾಯಾಂಗ ನಿಂದನೆ ಮಾಡಿದೆ ಎಂದು ಅಫಿಡವಿಟ್‌ನಲ್ಲಿ ಹೇಳಿರುವುದಾಗಿ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣಮೂರ್ತಿ ತಿಳಿಸಿದರು.
60 ದಿನಗಳಾದ್ರೂ ಸ್ಪಂದನೆ ಇಲ್ಲ: ಸಂಘದ ಮಾನ್ಯತೆ, ನೌಕರರ ಬಡ್ತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ನೌಕರರ ಸಂಘ ನಿಗಮದ ಆಡಳಿತ ಮಂಡಳಿ ಮೊರೆಹೋಗಿತ್ತು. ಆದರೆ, ಇದಕ್ಕೆ ಸ್ಪಂದಿಸದ ಹಿನ್ನೆಲೆಯಲ್ಲಿ ಮಾರ್ಚ್ 22ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಈ ಮಧ್ಯೆ ಮಾರ್ಚ್ 20ರಂದು ಹೈಕೋರ್ಟ್ ಮುಷ್ಕರದ ಬದಲಿಗೆ, ಪರಸ್ಪರ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಇಬ್ಬರಿಗೂ ಸೂಚಿಸಿ, 30 ದಿನಗಳ ಗಡುವು ನೀಡಿತ್ತು. ಆದರೆ, ಈಗ 60 ದಿನಗಳಾದರೂ ಮಂಡಳಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುತ್ತಿಲ್ಲ. ಹಾಗಾಗಿ, ಅನಿವಾರ್ಯವಾಗಿ ಮುಷ್ಕರಕ್ಕೆ ಮುಂದಾಗಿರುವುದಾಗಿ ಅವರು ಹೇಳಿದರು.
ಮೊದಲ 30 ದಿನಗಳು ಮಂಡಳಿಯು ಬರೀ ಸಭೆಗಳನ್ನು ನಡೆಸಿತು. ಆದರೆ, ಅದು ಬರೀ ಒಂದು ಬದಿಯ ಚರ್ಚೆ ಆಯಿತು. ಬೇಡಿಕೆ ಈಡೇರಿಸುವ ಬಗ್ಗೆ ಲಿಖೀತವಾಗಿ ಭರವಸೆ ನೀಡುವಂತೆ ಕೇಳಿಕೊಳ್ಳಲಾಗಿದೆ. ಅದಕ್ಕೂ ಸ್ಪಂದನೆ ದೊರಕಿಲ್ಲ. ತದನಂತರದ 30 ದಿನಗಳು ಕೂಡ ಇದು ಪುನರಾವರ್ತನೆಯಾಯಿತು. ಈಗ ಏಕಾಏಕಿ ತಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿಲ್ಲ ಎಂದು ಒಂದು ವಾಕ್ಯದ ಉತ್ತರ ನೀಡಿ ಕೈತೊಳೆದುಕೊಂಡಿದೆ. ಈ ಧೋರಣೆ ನಿರಾಶೆ ಉಂಟುಮಾಡಿದೆ ಬೇಸರ ವ್ಯಕ್ತಪಡಿಸಿದರು.
ಮುಷ್ಕರದ ನಡೆ…
-ಮಾರ್ಚ್ 22ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ನೌಕರರ ಸಂಘ ಕರೆ
-ಮಾರ್ಚ್ 20ರಂದು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಲು ಹೈಕೋರ್ಟ್ ಸೂಚನೆ. 30 ದಿನಗಳ ಗಡುವು
-ಹೈಕೋರ್ಟ್ ಸೂಚನೆ ಮೇರೆಗೆ ವಾರಕ್ಕೆ ಎರಡು ಬಾರಿ ಸಭೆ
-ಏಪ್ರಿಲ್ 23ರಂದು ಮತ್ತೆ ಬಿಎಂಆರ್‌ಸಿ ಮಂಡಳಿಗೆ ಮುಷ್ಕರದ ಎಚ್ಚರಿಕೆ
-ಏಪ್ರಿಲ್ 27ರಂದು ಹೈಕೋರ್ಟ್‌ನಲ್ಲಿ ಎಸ್ಮಾ ತೆರವಿಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಮೇ 3ರ ಒಳಗೆ ಹಣಕಾಸಿಗೆ ಸಂಬಂಧಿಸದ ಸಮಸ್ಯೆಗಳನ್ನು ಪರಿಹರಿಸಲು ಕೋರ್ಟ್ ಸೂಚನೆ.
-ಮೇ 3ರಂದು ನಿಗಮದ ಆಡಳಿತ ಮಂಡಳಿಯಿಂದ ಸಂಘಕ್ಕೆ ಪತ್ರ.
-ಮೇ 17ರಂದು ಮಂಡಳಿ ಧೋರಣೆ ಖಂಡಿಸಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ನೋಟಿಸ್