ಬೆಂಗಳೂರು: ಸೌಲಭ್ಯಗಳ ಕೊರತೆಯಿಂದ ನಿರುಪಯುಕ್ತವಾಗಿರುವ ಪೀಣ್ಯ ಬಸವೇಶ್ವರ ಬಸ್ ನಿಲ್ದಾಣಕ್ಕೆ ಸಮಗ್ರ ಸಾರಿಗೆ ಸೇವೆ ಕಲ್ಪಿಸಲು ಮುಂದಾಗಿರುವ ಸರ್ಕಾರ, ಬಸ್ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕ ಕಲ್ಪಿಸಲು ಚಿಂತನೆ ನಡೆಸಿದೆ.
ಪೀಣ್ಯ ಬಸವೇಶ್ವರ ಬಸ್ ನಿಲ್ದಾಣದ ಮೂಲಕ ಸುಮಾರು 17 ಜಿಲ್ಲೆಗಳ ಬಸ್‌ಗಳು ಹಾದುಹೋಗುತ್ತವೆ. ಆದರೆ, ಸೂಕ್ತ ಸಾರಿಗೆ ಸಂಪರ್ಕ ಸೇವೆಗಳ ಕೊರತೆ ಹಿನ್ನೆಲೆಯಲ್ಲಿ ಪ್ರಯಾಣಿಕರು ವಿಮುಖರಾಗಿದ್ದಾರೆ. ಇದರಿಂದ ಸುಮಾರು 70 ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡ ನಿಲ್ದಾಣವು ನಿರೀಕ್ಷಿತ ಮಟ್ಟದಲ್ಲಿ ಉಪಯೋಗ ಆಗುತ್ತಿಲ್ಲ.
ಈ ಹಿನ್ನೆಲೆಯಲ್ಲಿ ಸಮಗ್ರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬಿಬಿಎಂಪಿ, ಸಾರಿಗೆ ಇಲಾಖೆ, ಬಿಎಂಆರ್‌ಸಿ ಒಟ್ಟಾಗಿ ಮುಖ್ಯರಸ್ತೆಯಿಂದ ಪೀಣ್ಯ ಬಸ್ ನಿಲ್ದಾಣದ ನಡುವೆ ಸಂಪರ್ಕ ಸೇತುವೆ ಕಲ್ಪಿಸಲು ಮುಂದಾಗಿವೆ.
ಈ ಪೈಕಿ ನಿಲ್ದಾಣದ ಪಕ್ಕದಲ್ಲೇ ಪೀಣ್ಯ ಡಿಪೋಗೆ ಮೆಟ್ರೋ ಹಾದುಹೋಗಿದೆ. ಇಲ್ಲೊಂದು ನಿಲ್ದಾಣ ನಿರ್ಮಿಸಲು ಯೋಜಿಸಲಾಗಿದೆ. ಈ ಸಂಬಂಧದ ಸಾಧಕ-ಬಾಧಕಗಳ ಕುರಿತು ಕಾರ್ಯಸಾಧು ತಾಂತ್ರಿಕ ಅಧ್ಯಯನ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದರು.
ಯಶ್ ರಾಯಭಾರಿ: ಫೆಬ್ರವರಿ ಎರಡನೇ ವಾರದಲ್ಲಿ ನಡೆಸಲು ಉದ್ದೇಶಿಸಿರುವ ವಿರಳ ಸಂಚಾರ ದಿನಾಚರಣೆಗೆ ಸಂಬಂಧಿಸಿದಂತೆ ಈಗಾಗಲೇ ವಿವಿಧೆಡೆಯಿಂದ ಬೆಂಬಲ ವ್ಯಕ್ತವಾಗಿದೆ. ಇದಕ್ಕೆ ನಟ ಯಶ್ ಪ್ರಚಾರದ ರಾಯಭಾರಿಯಾಗಿ ನೇಮಿಸಲು ನಿರ್ಧರಿಸಲಾಗಿದೆ. ಯಶ್ ಕೂಡ ಸಮ್ಮತಿಸಿದ್ದಾರೆ. ಇನ್ನು ಸಾರಿಗೆ ಇಲಾಖೆ ಕೂಡ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ಸರ್ಕಾರೇತರ ಸ್ವಯಂ ಸೇವಾ ಸಂಘಟನೆಗಳು, ಪರಿಸರವಾದಿಗಳೊಂದಿಗೂ ಚರ್ಚೆ ನಡೆಸಲಿದೆ ಎಂದರು.
ಟ್ರಾವೆಲೇಟರ್: ಪ್ರಯಾಣಿಕರ ಅನುಕೂಲಕ್ಕಾಗಿ ಬಸವೇಶ್ವರ ಬಸ್ ನಿಲ್ದಾಣದಿಂದ ನೇರವಾಗಿ ಪೀಣ್ಯ ಕೈಗಾರಿಕಾ ಮೆಟ್ರೋ ನಿಲ್ದಾಣಕ್ಕೆ ಎಸ್ಕಲೇಟರ್ ಮಾದರಿಯ ಅಟೋಮೆಟಿಕ್ ಚಲಿಸುವ ಪಾದಚಾರಿ ಮಾರ್ಗ (ಟ್ರಾವೆಲೇಟರ್) ನಿರ್ಮಿಸಲು ಉದ್ದೇಶಿಸಲಾಗಿದೆ. ಬಸವೇಶ್ವರ ಬಸ್ ನಿಲ್ದಾಣ-ಪೀಣ್ಯ ಕೈಗಾರಿಕಾ ಮೆಟ್ರೋ ನಿಲ್ದಾಣದ ನಡುವಿನ ಅಂತರ ಸುಮಾರು 800 ಮೀ.ನಿಂದ 1 ಕಿ.ಮೀ.
ಇದರ ನಡುವೆ ಖಾಸಗಿ ಸಹಭಾಗಿತ್ವದಲ್ಲಿ ಟ್ರಾವೆಲೇಟರ್ ನಿರ್ಮಿಸುವ ಚಿಂತನೆ ಇದೆ. ಇದು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಸಾಧಕ-ಬಾಧಕಗಳ ಕುರಿತು ಕಾರ್ಯಸಾಧು ಅಧ್ಯಯನ ನಡೆಸಲಾಗುವುದು. ವಾರದಲ್ಲಿ ಈ ಸಂಬಂಧ ವರದಿ ಸಿದ್ಧಪಡಿಸಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ತಿಳಿಸಿದರು.