ಬೆಂಗಳೂರು: ಬಹುದೊಡ್ಡ ಮೂಲಸೌಕರ್ಯ ಯೋಜನೆಯಾಗಿರುವ “ನಮ್ಮ ಮೆಟ್ರೋ ಯೋಜನೆಯ’ 1 ಮತ್ತು 2ನೇ ಹಂತದ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಹಾಗೂ “ಬೆಂಗಳೂರು ಮೆಟ್ರೋ ರೈಲು ನಿಗಮ’ (ಬಿಎಂಆರ್‌ಸಿಎಲ್) ಷರತ್ತುಗಳನ್ನು ಪಾಲಿಸಿದೆಯೇ ಎಂಬ ಬಗ್ಗೆ ವರದಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಈ ಕುರಿತಂತೆ ದೊಮ್ಮಲೂರು ನಿವಾಸಿ ಡಿ.ಟಿ. ದೆವರೆ ಹಾಗೂ ಬೆಂಗಳೂರು ಎನ್ವಿರಾನ್‌ಮೆಂಟ್ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾ. ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಗುರುವಾರ ವಿಚಾರಣೆಗೆ ಬಂದಿತ್ತು. ಅರ್ಜಿ ಸಂಬಂಧ ಕೆಲಕಾಲ ವಾದ ಆಲಿಸಿದ ನ್ಯಾಯಪೀಠ, ಯೋಜನೆಗೆ ಅನುಮೋದನೆ ನೀಡುವಾಗ ತಾನು ವಿಧಿಸಿದ್ದ ಷರತ್ತುಗಳನ್ನು ರಾಜ್ಯ ಸರ್ಕಾರ ಹಾಗೂ ಬಿಎಂಆರ್‌ಸಿಎಲ್ ವತಿಯಿಂದ ಪಾಲನೆ ಮಾಡಲಾಗಿದೆಯೇ ಅಥವಾ ಇಲ್ಲ ಎಂಬ ಬಗ್ಗೆ ಪರಿಶೀಲಿಸಿ ಮಾ.16ರೊಳಗೆ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಮೆಟ್ರೋ ಯೋಜನೆಯ 1 ಮತ್ತು 2ನೇ ಹಂತದ ಯೋಜನೆಗೆ ನೀಡುವಾಗ ” ಸಂಯೋಜಿತ ಸಂಚಾರ ಅನುಪಾತ ತರ್ಕಬದ್ಧಗೊಳಿಸುವಿಕೆ ಯೋಜನೆ’ (ಐಟಿಆರ್‌ಆರ್‌ಪಿ) ಹಾಗೂ “ಸಮಗ್ರ ಚಲನಶೀಲತ ಯೋಜನೆ’ (ಸಿಎಂಪಿ) ತಯಾರಿಸಿ ಅನುಷ್ಠಾನಗೊಳಿಸುವುದು ಸೇರಿದಂತೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ಗೆ ಹಲವು ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತುಗಳ ಪಾಲನೆ ಕಡ್ಡಾಯ ಎಂದು ಯೋಜನೆ ಸಂಬಂಧ 2006ರ ಮೇ 11 ಮತ್ತು 2014ರ ಫೆ.21ರ ಅನುಮೋದನಾ ಪತ್ರ. 2010ರ ಡಿ.24 ಮತ್ತು 2017ರ ಫೆ.24ರಂದು ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ, ರಾಜ್ಯದ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಎಂಆರ್‌ಸಿಎಲ್ ನಡುವೆ ಆಗಿರುವಒಡಂಬಡಿಕೆಯಲ್ಲಿ ಸ್ಪಷ್ಟವಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಷರತ್ತುಗಳನ್ನು ಪಾಲಿಸಲಾಗಿಲ್ಲ ಎಂದು ಅರ್ಜಿದಾರರು ದೂರಿದ್ದಾರೆ.
ಅನುಷ್ಠಾನದಲ್ಲಿ ಲೋಪ: ಮೆಟ್ರೋ 1 ಮತ್ತು 2ನೇ ಹಂತದಲ್ಲಿ ಐಟಿಆರ್ ಆರ್‌ಪಿ ಹಾಗೂ ಸಿಎಂಪಿ ಸಿದ್ದಪಡಿಸಿ ಅನುಷ್ಠಾನಕ್ಕೆ ತರಲಾಗಿಲ್ಲ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್ ಸಂಪೂರ್ಣ ವಿಫಲವಾಗಿದೆ. ಅನುಮೋದನೆ ಮತ್ತು ಒಡಂಬಡಿಕೆಯ ಷರತ್ತುಗಳನ್ನು ಉಲ್ಲಂ ಸಲಾಗಿದೆ. ಇದರಿಂದಾಗಿ ಯೋಜನೆಯ ಅನುಷ್ಠಾನದಲ್ಲಿ ಗಂಭೀರವಾದ ಲೋಪಗಳಾಗಿದ್ದು, ವ್ಯತಿರಿಕ್ತ ಪರಿಣಾಮಗಳು ಎದುರಿಸಬೇಕಾಗಿದೆ. ಮೆಟ್ರೋ 1ನೇ ಹಂತದ ಡಿಪಿಆರ್ ಪ್ರಕಾರ 2007ರಲ್ಲಿ 8.2 ಲಕ್ಷ, 2011ರಲ್ಲಿ 10.2 ಲಕ್ಷ ಮತ್ತು 2021ರ ವೇಳೆಗೆ 16.1 ಲಕ್ಷ ನಿರೀಕ್ಷಿತ ಪ್ರಯಾಣಿಕರನ್ನು ಅಂದಾಜಿಸಲಾಗಿತ್ತು. ಆದರೆ, ಐಟಿಆರ್ ಆರ್‌ಪಿ ಮತ್ತು ಸಿಎಂಪಿ ಅನುಷ್ಠಾನಗೊಳಿಸದ ಕಾರಣ ಈ ಅಂದಾಜು ವಿಫಲಗೊಂಡಿದೆ. 2019ರ ಜನವರಿಯ ಮಾಹಿತಿ ಪ್ರಕಾರ ನಿರೀಕ್ಷಿತ ಪ್ರಯಾಣಿಕರ ಸಂಖ್ಯೆ 4ಲಕ್ಷ ಇದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಭಿವೃದ್ಧಿ ಯೋಜನೆ ತಡೆಗೆ ಒತ್ತು : ಮೆಟ್ರೋ 1ನೇ ಹಂತ ನಿಗದಿತ ಅವಧಿಗಿಂತ ತುಂಬಾ ತಡವಾಗಿ ಪೂರ್ಣಗೊಂಡಿದೆ. 2ನೇ ಹಂತದ ಕಾಮಗಾರಿ ಸಹ ನಿಗದಿತ ಅವಧಿಯೊಳಗೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಈ ಮಧ್ಯೆ”ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂ ನಡುಡುವೆ ಪರಿಷ್ಕೃತ 5,995 ಕೋಟಿ ಅಂದಾಜು ವೆಚ್ಚದ 2ಎ ಯೋಜನೆ ಮತ್ತು ಕೆ.ಆರ್. ಪುರಂನಿಂದ ವಿಮಾನ ನಿಲ್ದಾಣದ ನಡುವೆ ಪರಿಷ್ಕೃತ 10,854 ಅಂದಾಜು ವೆಚ್ಚದ 2ಬಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಹಾಗಾಗಿ, ಐಟಿಆರ್ ಆರ್‌ಪಿ ಮತ್ತು ಸಿಎಂಪಿ ಸಿದ್ದಪಡಿಸಿ ಅನುಷ್ಠಾನಗೊಳಿಸುವಂತೆ ಆದೇಶ ನೀಡಬೇಕು. ಅಲ್ಲಿವರೆಗೆ ಬೆಂಗಳೂರಿನ ಸಂಚಾರಕ್ಕೆ ಸಂಬಂಧಿಸಿದ 50 ಸಾವಿರ ಕೋಟಿ ರೂ. ಮೊತ್ತದ ಮೇಲ್ಪಟ್ಟ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳದಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮೆಟ್ರೋ ನಿಗಮಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಕಾಮಗಾರಿ ಸ್ಥಗಿತ ಸಾಧ್ಯತೆ : ಒಂದೊಮ್ಮೆ ಬಿಎಂಆರ್‌ಸಿಎಲ್ ಷರತ್ತುಗಳನ್ನು ಪಾಲಿಸಿಲ್ಲ ಎಂದು ಕೇಂದ್ರ ಸರ್ಕಾರ ವರದಿ ನೀಡಿದರೆ, ಮೆಟ್ರೋ ಯೋಜನೆಯ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ನಿಲ್ಲಿಸಲು ಆದೇಶ ಮಾಡಬೇಕಾಗುತ್ತದೆ ಎಂದು ನ್ಯಾಯಪೀಠ ರಾಜ್ಯ ಸರ್ಕಾರ ಮತ್ತು ಬಿಎಂಆರ್‌ಸಿಎಲ್‌ಗೆ ಎಚ್ಚರಿಕೆ ನೀಡಿದೆ.