ವಿಧಾನ ಪರಿಷತ್ತು: ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದಲ್ಲಿ ಕನ್ನಡಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಒಂದು ವೇಳೆ ಅನ್ಯಾಯವಾದರೆ ಅದನ್ನು ಸಹಿಸಿಕೊಳ್ಳುವುದೂ ಇಲ್ಲ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಗುರುವಾರ ಜೆಡಿಎಸ್‌ನ ಚೌಡರೆಡ್ಡಿ ತೂಪಲ್ಲಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುತ್ತಿಗೆ ಮತ್ತು ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವವರಲ್ಲಿ ಹೆಚ್ಚಿನವರು ಕನ್ನಡಿಗರಾಗಿದ್ದಾರೆ. ಮೆಟ್ರೋದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಕನ್ನಡಿಗರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಮತ್ತು ಆದರೆ ಅದನ್ನು ಸಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಬೆಂಗಳೂರು ಮೆಟ್ರೋದಲ್ಲಿ ಸುಮಾರು 1,500 ಕನ್ನಡಿಗರು ಕಾಯಂ ಉದ್ಯೋಗದಲ್ಲಿದ್ದಾರೆ. ತಾಂತ್ರಿಕ ಮತ್ತು ತಜ್ಞ ಸಿಬ್ಬಂದಿಯನ್ನು ಅನಿವಾರ್ಯವಾಗಿ ಗುತ್ತಿಗೆ ಅಥವಾ ನಿಯೋಜನೆ ಮೇಲೆ ತೆಗೆದುಕೊಳ್ಳಲಾಗುತ್ತದೆ. ಆದರೆ, 2ನೇ ಹಂತದ ಯೋಜನೆಯಲ್ಲಿ ತರಬೇತಿ ಕೊಟ್ಟು ಕನ್ನಡಿಗರನ್ನೇ ನೇಮಿಸಿಕೊಳ್ಳಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
150 ಬೋಗಿ ಖರೀದಿ: ಬೆಂಗಳೂರು ಮೆಟ್ರೋ ರೈಲಿನಲ್ಲಿ ಪ್ರತಿ ದಿನ ಸುಮಾರು 3 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ಪೀಕ್ ಅವರ್ಗಳಲ್ಲಿ ನಾಲ್ಕು ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ. ಪ್ರಸ್ತುತ 3 ಬೋಗಿಗಳನ್ನು ಅಳವಡಿಸಲಾಗಿದೆ.
ಮುಂದಿನ ದಿನಗಳಲ್ಲಿ 6 ಬೋಗಿಗಳನ್ನು ಆಳವಡಿಸುವ ಯೋಜನೆ ರೂಪಿಸಿದ್ದು, ಬಿಇಎಂಎಲ್‌ನಿಂದ 150 ಬೋಗಿಗಳನ್ನು ಖರೀದಿಸಲಾಗುತ್ತಿದೆ. ಈ ವರ್ಷ ಡಿಸೆಂಬರ್‌ನಲ್ಲಿ ಬೋಗಿ ನಿರ್ಮಾಣ ಕಾರ್ಯ ಆರಂಭವಾಗಿ, ಮುಂದಿನ ವರ್ಷ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಇದೇ ವೇಳೆ ಕಾಂಗ್ರೆಸ್‌ನ ವೀಣಾ ಅಚ್ಚಯ್ಯ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಿದರು.
ಕನ್ನಡಿಗರ ಮೇಲೆ ದಬ್ಟಾಳಿಕೆ: “ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಮೆಟ್ರೋದಲ್ಲಿ ಕನ್ನಡಿಗರ ಮೇಲೆ ದಬ್ಟಾಳಿಕೆ ನಡೆಯುತ್ತಿದೆ. ಕಾಯಂ ಕೆಲಸದಲ್ಲಿರುವ ಕನ್ನಡಿಗರ ಮೇಲೆ ಗುತ್ತಿಗೆ ಮೇಲೆ ಇರುವ ಅಧಿಕಾರಿಗಳು ದೌರ್ಜನ್ಯ ನಡೆಸುತ್ತಿದ್ದಾರೆ.
ನಿಯೋಜನೆ ಮೇಲೆ ಇರುವ ಹರಿಸ್ವಾಮಿ, ಎನ್.ರಘುರಾಂ ಮತ್ತು ಜೆ.ಮಂಜುನಾಥಸ್ವಾಮಿ ಇವರು ಕನ್ನಡಿಗರಿಗೆ ಅತಿ ಹೆಚ್ಚು ಕಿರುಕುಳ ನೀಡುತ್ತಿದ್ದು, ಈ ಮೂವರು ಅಧಿಕಾರಿಗಳನ್ನು ಬೇರೆಡೆ ನಿಯೋಜಿಸುವ ಜತೆಗೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು,’ ಎಂದು ಚೌಡರೆಡ್ಡಿ ತೂಪಲ್ಲಿ ಒತ್ತಾಯಿಸಿದರು.