ಬಾಗಲಕೋಟೆ: ಮಾಜಿ ಸಚಿವ, ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಸೀಡಿ ಪ್ರಕರಣದ ಸಂತ್ರಸ್ತೆ 10ಕ್ಕೂ ಹೆಚ್ಚು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.
ನವನಗರದ ತಮ್ಮ ನಿವಾಸದಲ್ಲಿ ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಜಿಲ್ಲಾ ಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ವೇಳೆಗೆ ಅವರು ಚೇತರಿಸಿಕೊಂಡಿದ್ದು, 2ರಿಂದ 3 ದಿನಗಳ ಕಾಲ ಚಿಕಿತ್ಸೆ ಅಗತ್ಯವಿದೆ. ಪ್ರಾಣಕ್ಕೆ ತೊಂದರೆಯಿಲ್ಲ ಎಂದು ಜಿಲ್ಲಾಸ್ಪತ್ರೆಯ ವೈದ್ಯ ಡಾ| ವಿಜಯಕುಮಾರ ತಿಳಿಸಿದ್ದಾರೆ.
ಜೀವ ಬೆದರಿಕೆ ಆರೋಪ: ಸೀಡಿ ಪ್ರಕರಣದ ಬಳಿಕ ಒಂದಿಲ್ಲೊಂದು ಹೇಳಿಕೆ ಕೊಡುತ್ತ ಸುದ್ದಿಯಲ್ಲಿರುವ ಸಂತ್ರಸ್ತೆ ಈಗ ಶಾಸಕ ಮೇಟಿ ವಿರುದ್ಧ ಪರೋಕ್ಷ ಆರೋಪ ಮಾಡಿದ್ದಾರೆ. ಹದಿನೈದು ದಿನಗಳ ಹಿಂದೆ ಮೇಟಿ ಬೆಂಬಲಿಗರಿಂದ ನನಗೆ ಜೀವ ಬೆದರಿಕೆ ಕರೆ ಬಂದಿತ್ತು. ಹೀಗಾಗಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದೇನೆ ಎಂದು ಮಾಧ್ಯಮದವರಿಗೆ ಹೇಳಿದ್ದು, ಮೇಟಿ ಬೆಂಬಲಿಗರು ಯಾರು ಎಂಬುದು ಸ್ಪಷ್ಟಪಡಿಸಿಲ್ಲ.
ಅಸ್ಪಷ್ಟ ಆರೋಪ: ಕಳೆದ ತಿಂಗಳು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಪುನಃ ಕೆಲಸಕ್ಕೆ ತೆಗೆದುಕೊಳ್ಳದಿದ್ದರೆ ಭ್ರಷ್ಟಾಚಾರ ಬಯಲಿಗೆ ಎಳೆಯುತ್ತೇನೆ ಎಂದು ಗಡುವು ನೀಡಿದ್ದ ಮಹಿಳೆ, ಬಳಿಕ ಮಾಧ್ಯಮಗಳಿಂದ ದೂರ ವಿದ್ದರು. ಕೆಲಸಕ್ಕೆ ತೆಗೆದುಕೊಳ್ಳದಿದ್ದರೂ ಯಾವುದೇ ಹೇಳಿಕೆ ಕೊಡಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಶೀಘ್ರ ಬಹಿರಂಗ ಪಡಿಸುತ್ತೇನೆ ಎಂದಿದ್ದಾರೆ.
15 ದಿನಗಳ ಹಿಂದೆ ನನಗೆ ಮೇಟಿ ಅವರ ಬೆಂಬಲಿಗರಿಂದ ಜೀವ ಬೆದರಿಕೆ ಕರೆ ಬಂದಿತ್ತು. ಅವರಿಂದ ಸಾಯುವ ಬದಲು, ನಾನೇ ಸಾಯಬೇಕು ಎಂದು ತೀರ್ಮಾನಿಸಿ, ಆತ್ಮಹತ್ಯೆಗೆ ಯತ್ನಿಸಿದ್ದೆ.
ಸಂತ್ರಸ್ತೆ