ಬೆಂಗಳೂರು: ಸಾಮಾನ್ಯವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ತುಂಬಿ ತುಳುಕುತ್ತಿದ್ದ ವಿಧಾನಸೌಧ ಗುರುವಾರ ಪೊಲೀಸ್ ಮಯವಾಗಿತ್ತು.
ಮುಂಬೈನ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ ಅತೃಪ್ತ ಶಾಸಕರು ವಿಧಾನ ಸಭಾಧ್ಯಕ್ಷರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಯಾವುದೇ ಲೋಪ ಆಗದಂತೆ ಸೂಕ್ತ ಭದ್ರತೆ ಒದಗಿಸುವಂತೆ ಸುಪ್ರೀಂ ಕೋರ್ಟ್ ರಾಜ್ಯ ಪೊಲೀಸ್ ಇಲಾಖೆಗೆ
ಸೂಚಿಸಿತ್ತು.
ಈ ಹಿನ್ನೆಲೆಯಲ್ಲಿ ಖುದ್ದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಹಾಗೂ ನಗರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನೇತೃತ್ವದಲ್ಲಿ ವಿಧಾನಸೌಧ ಮತ್ತು ವಿಕಾಸಸೌಧಕ್ಕೆ ಭದ್ರತೆ ನೀಡಲಾಗಿತ್ತು.
ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಸಿಸಿಬಿ ಜಂಟಿ ಆಯುಕ್ತರು, ಎಂಟು ವಿಭಾಗಗಳ ಡಿಸಿಪಿಗಳು, 30 ಎಸಿಪಿಗಳು, 60 ಇನ್‌ಸ್ಪೆಕ್ಟರ್,100 ಮಂದಿ ಸಬ್ ಇನ್‌ಸ್ಪೆಕ್ಟರ್, 120 ಎಎಸ್‌ಐ,ಆರು ಕೆಎಸ್‌ಆರ್‌ಪಿ ತುಕಡಿ ಸೇರಿ 600ಕ್ಕೂ ಅಧಿಕ ಸಿಬ್ಬಂದಿ ನಿಯೋಜಿಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನಾನ್‌ಎಕ್ಸಿಕ್ಯೂಟಿವ್ ಪೊಲೀಸ್ ಅಧಿಕಾರಿಗಳನ್ನು ನೇಮಿಸಲಾಗಿತ್ತು.ಮತ್ತೂಂದೆಡೆ ಅತೃಪ್ತ ಶಾಸಕರು ಮುಂಬೈನಿಂದ ಬೆಂಗಳೂರಿಗೆ ಆಗಮಿಸುವ ಸಂಬಂಧ ಗುರುವಾರದಿಂದ ನಾಲ್ಕು ದಿನಗಳ ಕಾಲ ವಿಧಾನಸೌಧದ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.