Advertisement

ವಿಧಾನ-ಕದನ 2023: ಯಮಕನಮರಡಿಯಲ್ಲಿ ಸತೀಶ್‌ ಗೆಲುವಿನ ಓಟಕ್ಕೆ ಅಷ್ಟಗಿ ಮತ್ತೆ ಅಡ್ಡಗಾಲು?

11:47 PM Apr 27, 2023 | Team Udayavani |

ಬೆಳಗಾವಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಮತ್ತು ಬಿಜೆಪಿ ಬಿಟ್ಟು ಜೆಡಿಎಸ್‌ ಸೇರಿರುವ ಮಾರುತಿ ಅಷ್ಟಗಿ ಸ್ಪರ್ಧೆಯಿಂದ ಯಮಕನಮರಡಿ ಕ್ಷೇತ್ರ ಈ ಬಾರಿ ಅತ್ಯಂತ ಪ್ರತಿಷ್ಠೆಯ ಕಣವಾಗಿ ಬದಲಾಗಿದೆ. 2008ರಲ್ಲಿ ಈ ಕ್ಷೇತ್ರ ಉದಯವಾದ ಅನಂತರ ಇದುವರೆಗೆ ನಡೆದಿರುವ ಮೂರೂ ಚುನಾವಣೆಗಳಲ್ಲೂ ಸತೀಶ್‌ ಜಾರಕಿಹೊಳಿ ಜಯಶಾಲಿಯಾಗಿದ್ದಾರೆ.

Advertisement

ಎಸ್‌ಟಿ ಮೀಸಲು ಕ್ಷೇತ್ರವಾಗಿರುವ ಯಮಕನಮರಡಿ ಒಟ್ಟು 1,99,186 ಮತದಾರರನ್ನು ಹೊಂದಿದೆ. ಇದರಲ್ಲಿ 99,307 ಪುರುಷ ಮತದಾರರಿದ್ದಾರೆ. ಕಳೆದ ಚುನಾವಣೆಯಲ್ಲಿ ಕ್ಷೇತ್ರ ದಲ್ಲಿ ಪ್ರಚಾರ ಮಾಡದೇ ಕೇವಲ 2,850 ಅತ್ಯಲ್ಪ ಮತಗಳ ಅಂತರದಿಂದ ಗೆದ್ದಿದ್ದ ಸತೀಶ್‌ ಜಾರಕಿಹೊಳಿ ಈ ಬಾರಿಯ ಚುನಾವಣೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿ ದ್ದಾರೆ. ಸತೀಶ್‌ ಅವರ ಪ್ರಾಬಲ್ಯದ ನಡುವೆ ಹೊಸಮುಖವಾಗಿರುವ ಬಿಜೆಪಿ ಅಭ್ಯರ್ಥಿ ಬಸವರಾಜ ಹುಂದ್ರಿ ಮತ್ತು ಅವರ ನಾಯಕರ ತಂತ್ರಗಾರಿಕೆ ಫಲಕೊಡುವುದೇ ಎಂಬ ಪ್ರಶ್ನೆ ಕ್ಷೇತ್ರದ ಜನರಲ್ಲಿದೆ. ಹಿಂದುಳಿದ ವರ್ಗದ ಜನರೇ ಇಲ್ಲಿ ನಿರ್ಣಾಯಕ ಮತದಾರರು. ಹೀಗಾಗಿ ಇಲ್ಲಿ ಜಾತಿ ಪೈಪೋಟಿ ಕಾಣುತ್ತಿಲ್ಲ. ಅಭಿವೃದ್ಧಿ ಕೆಲಸಗಳೇ ಚುನಾವಣೆಯ ಪ್ರಮುಖ ವಿಷಯ. ಇದರ ಜತೆಗೆ ಈ ಬಾರಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಸ್ಪರ್ಧೆ ಮತ್ತು ಕೆಲವು ನಾಯಕ ರಿಂದ ಮಾರುತಿ ಅಷ್ಟಗಿ ಟಿಕೆಟ್‌ ತಪ್ಪಿದೆ ಎಂಬ ಸುದ್ದಿ ಹೆಚ್ಚು ಚರ್ಚೆಯಾಗುತ್ತಿದೆ. ಇದು ಬಿಜೆಪಿ ಅಭ್ಯರ್ಥಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

ಸತೀಶ್‌ ಜಾರಕಿಹೊಳಿ ಅನುಭವಿ ಮತ್ತು ಪ್ರಭಾವಶಾಲಿ ನಾಯಕರು. ಕಳೆದ ಮೈತ್ರಿ ಸರಕಾರ ದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಹಿಂದೆ ಅಬಕಾರಿ, ಜವುಳಿ ಖಾತೆ ನಿರ್ವಹಿಸಿದ್ದರು.

ಇನ್ನು ಬಿಜೆಪಿ ಮೂಲಕ ಮೊದಲ ಬಾರಿಗೆ ಚುನಾವಣೆಗೆ ಧುಮುಕಿರುವ ಗುತ್ತಿಗೆದಾರ ಬಸವರಾಜ ಹುಂದ್ರಿ ಕ್ಷೇತ್ರದಲ್ಲಿ ಹೊಸಬರು. ಇಲ್ಲಿನ ಹೊಂದಾಣಿಕೆ ರಾಜಕಾರಣ ಮತ್ತು ಮತದಾರರನ್ನು ಸೆಳೆಯುವ ತಂತ್ರಗಾರಿಕೆ ಕರಗತ ಮಾಡಿಕೊಂಡಿಲ್ಲ. ರಾಜಕಾರಣದಲ್ಲಿ ಇನ್ನೂ ಬಹಳ ಪಳಗಬೇಕಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಬಿಜೆಪಿಯಿಂದ ಬಂಡಾಯ ಎದ್ದಿರುವ ಮಾರುತಿ ಅಷ್ಟಗಿ ಬಹಳ ಆತಂಕ ಉಂಟುಮಾಡಿದ್ದಾರೆ. ಹೀಗಾಗಿ ಬಸವರಾಜ ಹಾದಿ ಬಹಳ ದುರ್ಗಮವಾಗಿದೆ.

ಅಷ್ಟಗಿ ಸ್ಪರ್ಧೆಯಿಂದ ಸಂಚಲನ: ಕಳೆದ ಎರಡು ಚುನಾವಣೆಗಳಲ್ಲಿ ಬಿಜೆಪಿ ಯಿಂದ ಸ್ಪರ್ಧೆ ಮಾಡಿ ಸೋತಿದ್ದ ಮಾರುತಿ ಅಷ್ಟಗಿ 2018ರ ಚುನಾವಣೆಯಲ್ಲಿ ಸತೀಶ್‌ ಜಾರಕಿಹೊಳಿ ಅವರನ್ನು ಸೋಲಿನ ದಡಕ್ಕೆ ತಂದು ನಿಲ್ಲಿಸಿದ್ದರು. ಈ ಬಾರಿ ಅದೇ ವಿಶ್ವಾಸ ಮತ್ತು ಗೆಲುವಿನ ಆಸೆಯಿಂದ ಮಾರುತಿ ಅಷ್ಟಗಿ ಬಿಜೆಪಿ ಟಿಕೆಟ್‌ ನಿರೀಕ್ಷೆ ಮಾಡಿದ್ದರು. ಆದರೆ ಟಿಕೆಟ್‌ ತಪ್ಪಿದ್ದರಿಂದ ಬಂಡಾಯವೆದ್ದು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ದ್ದಾರೆ.

Advertisement

~ ಕೇಶವ ಆದಿ

Advertisement

Udayavani is now on Telegram. Click here to join our channel and stay updated with the latest news.

Next