Advertisement
ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದ ನಾಯಕರ ಪ್ರವಾಸದಿಂದ ಚುನಾವಣೆ ಉತ್ಸಾಹ, ಹುಮ್ಮಸ್ಸು ದಿನೇ ದಿನೆ ಏರುತ್ತಲೇ ಇದೆ. ಕಚೇರಿಯ ಸಭೆಗೆ ಸೀಮಿತವಾಗಿದ್ದ ಪ್ರಚಾರ ಪ್ರಕ್ರಿಯೆ ಈಗ ವಾರ್ಡ್, ಗ್ರಾ.ಪಂ.ಗೂ ತಲುಪಿದೆ. ಮನೆ ಮನೆಗೂ ಪ್ರಮುಖರು ಭೇಟಿ ನೀಡುತ್ತಿದ್ದಾರೆ. ಕೆಲವರಿಗೆ ಮತದಾರರ “ಪ್ರೀತಿ”ಯೂ ಸಿಗುತ್ತಿದೆ.
ರಾಜಕೀಯ ಸಮಾವೇಶಗಳಿಗೆ ಜನ ಮೊದಲಿನಂತೆ ಸೇರುತ್ತಿಲ್ಲ. ಮೋದಿ, ಅಮಿತ್ ಶಾ ಬಂದಾಗ ಸೇರುವಷ್ಟು ಜನ ಬೇರೆ ನಾಯಕರು ಬಂದಾಗ ಸೇರುತ್ತಿಲ್ಲ ಎಂಬುದು ಬಿಜೆಪಿ ನಾಯಕರ ಅರಿವಿಗೂ ಬಂದಿದೆ. ಹಾಗೆಯೇ ಕಾಂಗ್ರೆಸ್ ಪರಿಸ್ಥಿತಿಯೂ ಭಿನ್ನವಾಗಿಲ್ಲ. ಸಿದ್ದರಾಮಯ್ಯ ಬಂದಾಗ ಸೇರುವಷ್ಟು ಜನ ಬೇರೆ ನಾಯಕರು ಬಂದಾಗ ಒಟ್ಟಾಗುತ್ತಿಲ್ಲ. ಹೀಗಾಗಿ ಸಮಾವೇಶ ಆಯೋಜನೆಯ ಜತೆಗೆ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳನ್ನು ಕರೆತರುವುದು ದೊಡ್ಡ ಸವಾಲಾಗಿದೆ. ಹಾಗಾಗಿ ಸಮಾವೇಶಕ್ಕೂ ಮೊದಲು ನಿರ್ದಿಷ್ಟ ಕ್ಷೇತ್ರಕ್ಕೆ ಪ್ರತ್ಯೇಕ ಉಸ್ತುವಾರಿ ನೇಮಿಸಿ, ಜವಾಬ್ದಾರಿ ಹಂಚಿಕೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಿಗೂ ನಿರ್ದಿಷ್ಟ ಸಂಖ್ಯೆಯಲ್ಲಿ ಜನರನ್ನು ಕರೆದುಕೊಂಡು ಬರುವ ಟಾಸ್ಕ್ ನೀಡಲಾಗುತ್ತಿದೆ.
Related Articles
ಬಿಜೆಪಿಯ ಪರವಾಗಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉಡುಪಿ, ಬೈಂದೂರು ಕ್ಷೇತ್ರದಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿ ಹುರುಪು ತುಂಬಿದ್ದರೆ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ರಣದೀಪ್ ಸುಜೇìವಾಲಾ ಜಿಲ್ಲೆಗೆ ಭೇಟಿ ನೀಡಿ ಪ್ರಮುಖರ ಸಭೆ ನಡೆಸಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದ್ದಾರೆ.
Advertisement
ಸಮಾವೇಶ ವರ್ಸಸ್ ಸಮಾವೇಶಬಿಜೆಪಿಯಿಂದ ಮಹಿಳಾ ಮೋರ್ಚಾ, ಯುವ ಮೋರ್ಚಾದ ಸಮಾವೇಶ ನಡೆಸಲಾಗಿದೆ. ಎಸ್ಸಿ, ಎಸ್ಟಿ ಮೋರ್ಚಾ, ಹಿಂದುಳಿದ ಮೋರ್ಚಾದ ಸಮಾವೇಶ ನಿಗದಿಯಾಗಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ತನ್ನ ಅಲ್ಪಸಂಖ್ಯಾಕರ ಘಟಕ, ಹಿಂದುಳಿದ ವರ್ಗಗಳ ಘಟಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಘಟಕದ ಪ್ರತ್ಯೇಕ ಸಮಾವೇಶ ನಡೆಸಲು ಚರ್ಚೆ ಆರಂಭಿಸಿದೆ. ಇದಕ್ಕಾಗಿ ಮಂಡಲ ಮಟ್ಟದಲ್ಲಿ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗುತ್ತಿದೆ. ಉತ್ಸವ, ಕ್ರೀಡಾಕೂಟ
ಎಲ್ಲ ಕ್ಷೇತ್ರವ್ಯಾಪ್ತಿಯಲ್ಲೂ ಕ್ರೀಡಾಕೂಟದ ಆಯೋಜನೆ, ಉತ್ಸವಗಳ ಪ್ರಮಾಣ ಹೆಚ್ಚಾಗುತ್ತಿದೆ. ಪ್ರತೀ ಶನಿವಾರ, ರವಿವಾರ ಬಹುತೇಕ ಎಲ್ಲ ಊರುಗಳಲ್ಲೂ ಕ್ರಿಕೆಟ್, ವಾಲಿಬಾಲ್, ಕಬಡ್ಡಿ ಹೀಗೆ ವಿವಿಧ ಕ್ರೀಡಾಕೂಟಗಳು ಆಯೋಜನೆಯಾಗುತ್ತಿವೆ. ರಾಜಕೀಯ ನಾಯಕರಿಗೆ ಅದರಲ್ಲೂ ಟಿಕೆಟ್ ಆಕಾಂಕ್ಷಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿಲ್ಲ. ಒಟ್ಟಿನಲ್ಲಿ ಚುನಾವಣೆ ಕಾರಣಕ್ಕಾಗಿಯೇ ಕ್ರೀಡಾಕೂಟ, ಉತ್ಸವಗಳ ಮೇಲಾಟವೂ ನಡೆಯುತ್ತಿವೆ. ~ ರಾಜು ಖಾರ್ವಿ ಕೊಡೇರಿ