ಬೆಂಗಳೂರು: ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೇಯರ್ ಗಂಗಾಬಿಕೆ ತಿಳಿಸಿದ್ದಾರೆ.
ಪಾಲಿಕೆ ವತಿಯಿಂದ ನಗರ ಪ್ಲಾಸ್ಟಿಕ್ ಮುಕ್ತ ಅಭಿಯಾನದಡಿ ಆಯೋಜಿಸಲಾಗಿದ್ದ “ಪ್ಲಾಗ್‌ರನ್’ ಕಾರ್ಯಕ್ರಮಕ್ಕೆ ಎಂ.ಜಿ.ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆಯ ಮುಂಭಾಗ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಕಸ ಉತ್ಪತ್ತಿಯ ಜತೆಗೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಹೆಚ್ಚಾಗುತ್ತಿದೆ. ಸಾರ್ವನಿಕರು ಎಲ್ಲೆಂದರಲ್ಲಿ ಕಸ ಬಿಸಾಡುತ್ತಾರೆ. ಇದು ನಿಲ್ಲಬೇಕು ಎಂದು ಹೇಳಿದರು.
ಪ್ಲಾಸ್ಟಿಕ್ ಸಂಪೂರ್ಣ ನಿಷೇಧದ ನಿಟ್ಟಿನಲ್ಲಿ ನಗರದ ಹಲವೆಡೆ ಏಕಕಾಲಕ್ಕೆ ಪ್ಲಾಗ್‌ರನ್ ಕಾರ್ಯಮ ಏರ್ಪಡಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಜಿಸುವ ಮೂಲಕ ಎಲ್ಲರೂ ನರಗರದ ಸ್ವತ್ಛತೆ ಕಾಪಾಡಲು ಶ್ರಮವಹಿಸಬೇಕು. ಇನ್ನು ಸ್ವತ್ಛತೆ ಕಾರ್ಯಕ್ರಮಗಳು ಒಂದು ದಿನಕ್ಕೆ ಸೀಮಿತವಾಗಬಾರದು. ಹೀಗಾಗಿ ವರ್ಷವಿಡೀ ಹಲವು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವ ಚಿಂತನೆ ನಡೆಸಲಾಗಿದೆ ಎಂದರು.
ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಮಾತಾನಾಡಿ, ನಗರದಲ್ಲಿ ಸಂಗ್ರಹವಾಗುವ ಒಟ್ಟು 5,700 ಟನ್ ತ್ಯಾಜ್ಯದಲ್ಲಿ ಶೇ.20ರಷ್ಟು ಪ್ಲಾಸ್ಟಿಕ್ ತ್ಯಾಜ್ಯವಿರುತ್ತದೆ. ಇನ್ನು ಕಸದಿಂದ ಪ್ಲಾಸ್ಟಿಕ್ ಪ್ರತ್ಯೇಕ ಮಾಡುವುದು ಕಷ್ಟದ ಕೆಲಸವಾಗಿದೆ. ಹೀಗಾಗಿ, ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಉಪ ಮೇಯರ್ ರಮೀಳಾ ಉಮಾಶಂಕರ್, ಬೆಂಗಳೂರ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಗಿನ್ನೀಸ್‌ನತ್ತ ಬಿಬಿಎಂಪಿ ಚಿತ್ತ: ನಗರದ 54 ಸ್ಥಳಗಳಲ್ಲಿ ಏಕಕಾಲಕ್ಕೆ ಆರಂಭವಾದ ಪ್ಲಾಗ್‌ರನ್‌ನಲ್ಲಿ, ಶಾಲಾ ವಿದ್ಯಾರ್ಥಿಗಳು, ಸ್ವಯಂ ಸೇವಕ ಸಂಸ್ಥೆಗಳು ಹಾಗೂ ನಾಗರಿಕರು ಸೇರಿ ಒಟ್ಟು ಏಳು ಸಾವಿರಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದರು.
ಗಿನ್ನಿಸ್ ಬುಕ್ ಆಫ್ ರೆಕಾರ್ಡ್‌ಗೆ ಸೇರಲು ಪ್ಲಾಗ್‌ರನ್ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾಟೆಲ್ ಸಂಗ್ರಹಿಸಿ ಗಿನ್ನೀಸ್ ದಾಖಲೆ ನಿರ್ಮಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಅವುಗಳನ್ನು ಕೇಂದ್ರ ಕಚೇರಿಯ ಗಾಜಿನ ಮನೆಯಲ್ಲಿ ಸಂಗ್ರಹಮಾಡಲಾಗಿದೆ. ಬೆಳಗ್ಗೆ 9 ಗಂಟೆಯಿಂದ ರಾತ್ರಿ 9ರವರೆಗೆ ಪ್ಲಾಗ್‌ರನ್ ಕಾರ್ಯಕ್ರಮ ನಡೆದಿದ್ದು, ಒಂದೇ ದಿನದಲ್ಲಿ 32 ಟನ್‌ಗೂ ಹೆಚ್ಚು ಪ್ಲಾಸ್ಟಿಕ್ ಸಂಗ್ರಹವಾಗಿರಬಹುದು ಎಂದು ಪ್ಲಾಗ್‌ರನ್‌ನ ಮುಖ್ಯ ಮಾರ್ಗದರ್ಶಿ ರಾಮಕೃಷ್ಣ ತಿಳಿಸಿದ್ದಾರೆ.