ಬಸವಕಲ್ಯಾಣ: ಈ ಬಾರಿ ಚುನಾವಣೆಯಲ್ಲಿ ಮತ ಯಂತ್ರಗಳ ಬಗ್ಗೆ ಜನರಲ್ಲಿ ಸಂಶಯ ಮೂಡಬಾರದು ಎನ್ನುವ ಉದ್ದೇಶದಿಂದ ಚುನಾವಣಾ ಆಯೋಗ ವಿವಿಪ್ಯಾಟ್ ಎನ್ನುವ ವಿನೂತನ ಯಂತ್ರ ಸಿದ್ಧಪಡಿಸಿದ್ದು, ಪ್ರತಿ ಮತಗಟ್ಟೆ ಕೇಂದ್ರದಲ್ಲಿ ಇವಿಎಂ ಯಂತ್ರದ ಜತೆಗೆ ಇದನ್ನು ಅಳವಡಿಸಲಾಗುತ್ತಿದೆ ಎಂದು ತರಬೇತಿದಾರ ಗಣಪತಿ ಮೈನಾಳೆ ಹೇಳಿದರು.
ಹುಲಸೂರನಲ್ಲಿ ರವಿವಾರ ಆಯೋಜಿಸಿದ್ದ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರ ಕುರಿತ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾನಾಡಿದ ಅವರು, ಮತ ಚಲಾಯಿಸಿದ ವ್ಯಕ್ತಿಯು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎನ್ನುವ ಬಗ್ಗೆ ಅವರಿಗೆ ಖಾತ್ರಿ ಪಡಿಸಲು ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದರು.
ದೇಶದಲ್ಲಿ ನಡೆಯುವ ಚುನಾವಣೆಗಳಲ್ಲಿ ಮತದಾನಕ್ಕಾಗಿ ಅಳವಡಿಸಲಾಗುವ ಇವಿಎಂ ಯಂತ್ರಗಳ ಬಗ್ಗೆ ಕೆಲವರು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ವಿವಿಪ್ಯಾಟ್ ಎನ್ನುವ ವಿನೂತನ ಯಂತ್ರ ಆವಿಷ್ಕರಿಸಿದೆ. ಜನರು ಇವಿಎಂ ಯಂತ್ರದಲ್ಲಿ ಮತ ಚಲಾಯಿಸಿದ ನಂತರ ಇದರ ಪಕ್ಕದಲ್ಲಿಯೇ ಇರಲಿರುವ ವಿವಿಪ್ಯಾಟ್ ಯಂತ್ರದಲ್ಲಿ ಅವರು ಯಾವ ಅಭ್ಯರ್ಥಿಗೆ ಮತಚಲಾಯಿಸಿದ್ದಾರೆ ಎನ್ನುವ ಕುರಿತು ಖಾತ್ರಿ ಪಡಿಸಲಾಗುತ್ತಿದೆ. ಅಭ್ಯರ್ಥಿ ಹೆಸರು, ಅವರ ಚಿಹ್ನೆ ಯಂತ್ರದಲ್ಲಿ ಏಳು ಸೆಕೆಂಡ್‌ಗಳ ಕಾಲ ಕಾಣಿಸಿಕೊಳ್ಳಲಿದ್ದು, ನಂತರ ಸ್ವಯಂ ಚಾಲಿತವಾಗಿ ಒಂದು ಖಾತ್ರಿ ಪತ್ರ ಮುದ್ರಣಗೊಂಡು ಯಂತ್ರದಲ್ಲಿ ಶೇಖರಿಸಿಕೊಳ್ಳುತ್ತದೆ ಎಂದು ವಿವರಿಸಿದರು.
ಇದೇ ವೇಳೆ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರ ಕುರಿತು ಜನರು ಪ್ರಶ್ನೆಗಳನ್ನು ಕೇಳಿ ಅಧಿಕಾರಿಗಳಿಂದ ಉತ್ತರ ಪಡೆದು ಸಂಶಯ ನಿವಾರಣೆ ಮಾಡಿಕೊಂಡರು.
ನಂತರ ಪಟ್ಟಣದ ವಿವಿಧ ಬಡಾವಣೆಗೆ ತೆರಳಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಬಿಎಲ್ ಒಗಳು ಮನೆ, ಮನೆಗೆ ಭೇಟಿ ನೀಡಿ ಮರದಾರರ ಪಟ್ಟಿಯಲ್ಲಿ ಹೊಸದಾಗಿ ಸೆರ್ಪಡೆಗೆ ಇಚ್ಚಿಸುವ ಹಾಗೂ ಹೆಸರು ರದ್ದುಪಡಿಸುವ ಜನರಿಂದ ಅರ್ಜಿ ಸ್ವಿಕರಿಸಿದರು.
ಉಪತಹಶೀಲ್ದಾರ್ ಸಂಜುಕುಮಾರ ಭೈರೆ, ಕಂದಾಯ ನಿರೀಕ್ಷಕ ಮೌನೇಶ್ವರ ಸ್ವಾಮಿ, ಪಿಡಿಒ ಸುಗಂಧಾ ರಾಧು ಸೇರಿದಂತೆ ಇಲಾಖೆ ಸಿಬ್ಬಂದಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.