Advertisement
ಬಳ್ಳಾರಿ ನಗರ ಬಳ್ಳಾರಿ ನಗರ ಕ್ಷೇತ್ರ ಜಿಲ್ಲೆಯಲ್ಲೇ ಹೈವೋಲ್ಟೆಜ್ ಕ್ಷೇತ್ರವಾಗಿದೆ. ಬಿಜೆಪಿಯಿಂದ ಶಾಸಕ ಜಿ.ಸೋಮ ಶೇಖರ ರೆಡ್ಡಿ, ಕಾಂಗ್ರೆಸ್‌ನಿಂದ ನಾರಾ ಭರತ್ ರೆಡ್ಡಿ, ಕೆಆರ್‌ಪಿ ಪಕ್ಷದಿಂದ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ನಿ ಅರುಣಾ ಸ್ಪರ್ಧಿಸಿದ್ದು ರೆಡ್ಡಿತ್ರಯರ ನಡುವೆ ತೀವ್ರ ಫೈಟ್ ಇದೆ. ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ವಲಸೆ ಬಂದು ಜೆಡಿಎಸ್‌ನಿಂದ ಕಣಕ್ಕಿಳಿದಿರುವ ಮಾಜಿ ಶಾಸಕ ಅನಿಲ್ ಲಾಡ್, ರೆಡ್ಡಿತ್ರಯ ರಿಗೆ ಸಡ್ಡು ಹೊಡೆದಿದ್ದಾರೆ. ಬಿಜೆಪಿ, ಕಾಂಗ್ರೆಸ್, ಕೆಆರ್‌ಪಿ ಅಭ್ಯರ್ಥಿಗಳು ಮೂವರು ರೆಡ್ಡಿ ಸಮುದಾಯದವರಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ಅನಿಲ್ ಲಾಡ್ ಕ್ಷತ್ರಿಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದಲ್ಲಿ ಎಸ್ಸಿ, ಮುಸ್ಲಿಂ, ವಾಲ್ಮೀಕಿ, ಲಿಂಗಾಯತ, ಕುರುಬ, ಬಲಿಜ ಸಮುದಾಯಗಳ ಮತಗಳು ನಿರ್ಣಾಯಕ. ಸದ್ಯ ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ ಶಾಸಕರಾಗಿದ್ದಾರೆ. ರಾಜ್ಯ ಸೇರಿ ಜಿಲ್ಲೆಯ ಇನ್ನಷ್ಟು ಅಭಿವೃದ್ಧಿಗೆ
ಮಾಜಿ ಸಿಎಂ ಯಡಿಯೂರಪ್ಪ, ಸಚಿವ ಬಿ.ಶ್ರೀರಾಮುಲು ನೋಡಿ ಬಿಜೆಪಿಗೆ ಮತ ನೀಡುವಂತೆ ಹೇಳಿದ್ದಾರೆ. ವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ 3 ಕಾಂಗ್ರೆಸ್, 2 ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಬಳ್ಳಾರಿ ಗ್ರಾಮೀಣ ಜಿಲ್ಲೆಯ ಮತ್ತೂಂದು ಹೈವೋಲ್ಟೆಜ್ ಕಣ. ರೆಡ್ಡಿ ಗರಡಿಯಲ್ಲಿ ಪಳಗಿದ್ದ ಸಚಿವ ಶ್ರೀರಾಮುಲು ಬಿಜೆಪಿಯಿಂದ, ಇವರ ಆಪ್ತ, ಶಾಸಕ ಬಿ.ನಾಗೇಂದ್ರ ಕಾಂಗ್ರೆಸ್‌ನಿಂದ ಪರಸ್ಪರ ಪ್ರತಿಸ್ಪರ್ಧಿಗಳಾಗಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ ಫೈಟ್ ನಡೆಯಲಿದ್ದು, ಕ್ಷೇತ್ರದ ಜನರ ಚಿತ್ತ ಈಗಿನಿಂದಲೇ ಫಲಿತಾಂಶದತ್ತ ನೆಟ್ಟಿದೆ. ಬಳ್ಳಾರಿ ಗ್ರಾಮೀಣ ಎಸ್‌ಟಿ ಮೀಸಲು ಕ್ಷೇತ್ರವಾಗಿದ್ದರಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ಎಸ್‌ಟಿ (ವಾಲ್ಮೀಕಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ, ವಾಲ್ಮೀಕಿ, ಲಿಂಗಾಯತ, ಕುರುಬ, ಬಲಿಜ ಸಮುದಾಯಗಳ ಮತಗಳು ನಿರ್ಣಾಯಕವಾಗಿವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ ಸದ್ಯ ಹಾಲಿ ಶಾಸಕರಾಗಿದ್ದಾರೆ. 9 ವರ್ಷಗಳ ಬಳಿಕ ಪುನಃ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಾಮುಲು, ಕ್ಷೇತ್ರ ನನಗೆ ಹೊಸದಲ್ಲ. ಮತದಾರರು ನನ್ನ ಕೈ ಹಿಡಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರೆ, ಕ್ಷೇತ್ರದಲ್ಲಿ ಎಷ್ಟೇ ಹಣ ಸುರಿದರೂ ಬಿಜೆಪಿ ನೋಟು, ಕಾಂಗ್ರೆಸ್‌ಗೆ ಓಟು ಎಂಬ ಮಾತು ಮತದಾರರದ್ದಾಗಿದೆ ಎಂದು ಶಾಸಕ ಬಿ.ನಾಗೇಂದ್ರ ಗೆಲ್ಲುವ ಹುಮ್ಮಸ್ಸು ತೋರ್ಪಡಿಸುತ್ತಿದ್ದಾರೆ.. ಸಿರುಗುಪ್ಪ ಕ್ಷೇತ್ರ
ಭತ್ತದನಾಡು ಖ್ಯಾತಿಯ ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲೂ ಚುನಾವಣ ಕದನ ಈ ಬಾರಿ ಕುತೂಹಲ ಮೂಡಿಸುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ಎಂ.ಎಸ್.ಸೋಮಲಿಂಗಪ್ಪ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಬಿ.ಎಂ.ನಾಗರಾಜ್ ಕಣಕ್ಕಿಳಿದಿದ್ದು, ಕಾಂಗ್ರೆಸ್-ಬಿಜೆಪಿ ನಡುವೆಯೇ ನೇರ ಹಣಾಹಣಿ ಏರ್ಪಟ್ಟಿದೆ. ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು ಕೆಆರ್‌ಪಿ ಪಕ್ಷದ ಅಭ್ಯರ್ಥಿ ಧರಪ್ಪ ನಾಯಕ ಹವಣಿಸುತ್ತಿದ್ದಾರೆ. ಸಿರುಗುಪ್ಪ ವಿಧಾನಸಭಾ ಕ್ಷೇತ್ರ ಎಸ್‌ಟಿ ಮಿಸಲು ಕ್ಷೇತ್ರವಾಗಿದ್ದು ವಾಲ್ಮೀಕಿ, ಲಿಂಗಾಯತ, ಕುರುಬರು, ದಲಿತ ಮತಗಳು ನಿರ್ಣಾಯಕವಾಗಿದ್ದು, ಮುಸ್ಲಿಂ ಮತಗಳು ಕಡಿಮೆ ಪ್ರಮಾಣದಲ್ಲಿವೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ.ಎಸ್.ಸೋಮಲಿಂಗಪ್ಪ ಹಾಲಿ ಶಾಸಕರಾಗಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರ ವಿರೋಧದ ನಡುವೆಯೂ ಟಿಕೆಟ್ ಪಡೆದು ಕಣಕ್ಕಿಳಿದಿದ್ದಾರೆ. ಅದೇ ರೀತಿ ಕಾಂಗ್ರೆಸ್‌ನ ಬಿ.ಎಂ. ನಾಗರಾಜ್ ಅವರು ಸಹ ತೀವ್ರ ಪೈಪೋಟಿ ನಡುವೆ ಟಿಕೆಟ್ ಪಡೆದು ಕದನಕ್ಕಿಳಿದಿದ್ದಾರೆ. ಕ್ಷೇತ್ರದ ಲಿಂಗಾಯತ ಸಮುದಾಯದ ಪ್ರಭಾವಿ ಮುಖಂಡರು ಬಿ.ಎಂ.ನಾಗರಾಜ ಬೆನ್ನಿಗಿದ್ದಾರೆ. ಆದರೆ ಪೈಪೋಟಿ ನೀಡುತ್ತಿರುವ ಕೆಆರ್‌ಪಿ ಅಭ್ಯರ್ಥಿ ಧರಪ್ಪ ನಾಯಕ, ಪಡೆಯುವ ಮತಗಳು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳ ಸೋಲು-ಗೆಲುವನ್ನು ನಿರ್ಧರಿಸಲಿದ್ದಾರೆ.
Related Articles
ಜಿಲ್ಲೆಯಲ್ಲೇ ಇಂದಿಗೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿಯವರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಹಾಲಿ ಶಾಸಕ ಈ.ತುಕಾರಾಮ್ ಈಗಾಗಲೇ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಇದೀಗ ಮತ್ತೂಮ್ಮೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದಾರೆ. ಇವರ ವಿರುದ್ಧ 2018ರ ಬಿಜೆಪಿ ಪರಾಜಿತ ಅಭ್ಯರ್ಥಿ ದಿ| ಡಿ.ರಾಘವೇಂದ್ರ ಅವರ ಪತ್ನಿ ಶಿಲ್ಪಾ ಪಾಟೀಲ್ ಬಿಜೆಪಿಯಿಂದ ಸ್ಪರ್ಧಿಸಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಫೈಟ್ ಏರ್ಪಟ್ಟಿದೆ. ಈ ನಡುವೆ ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ದಿವಾಕರ್ ಕೆಆರ್‌ಪಿ ಪಕ್ಷದಿಂದ, ಕುರೇಕುಪ್ಪ ಸೋಮಪ್ಪ ಜೆಡಿಎಸ್‌ನಿಂದ ಸ್ಪರ್ಧಿಸಿದ್ದಾರೆ. ಇಬ್ಬರಿಂದಲೂ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳಿಗೆ ಒಳಪೆಟ್ಟು ನೀಡುವ ಸಾಧ್ಯತೆಯಿದೆ. ಸಂಡೂರು ಕ್ಷೇತ್ರ ಸಹ ಎಸ್‌ಟಿ ಮೀಸಲಾಗಿದೆ. ಲಿಂಗಾಯತ, ಮುಸ್ಲಿಂ, ಕುರುಬ, ವಾಲ್ಮೀಕಿ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಟಿಕೆಟ್ ತಪ್ಪಿದ್ದಕ್ಕೆ ಬಿಜೆಪಿ ಬಿಟ್ಟು ಕೆಆರ್‌ಪಿ ಪಕ್ಷದಿಂದ ಸ್ಪರ್ಧಿಸಿರುವ ಕೆ.ಎಸ್.ದಿವಾಕರ್, ಬಿಜೆಪಿ ಮತಗಳನ್ನು ಮತ್ತು ಜೆಡಿಎಸ್ ಅಭ್ಯರ್ಥಿ ಕುರೇಕುಪ್ಪ ಸೋಮಪ್ಪ ಕಾಂಗ್ರೆಸ್ ಮತಗಳನ್ನು ಪಡೆದಲ್ಲಿ ಕಾಂಗ್ರೆಸ್, ಬಿಜೆಪಿಗೆ ಒಂದಷ್ಟು ನಷ್ಟವಾಗುವ ಸಾಧ್ಯತೆಯಿದೆ. ಸತತ ಹ್ಯಾಟ್ರಿಕ್ ಗೆಲುವು ಸಾಧಿ ಸಿರುವ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಸದ್ಯ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ.
Advertisement
ಕಂಪ್ಲಿ ಹೊಸದಾಗಿ ಕ್ಷೇತ್ರ ರಚನೆಯಾದ ಬಳಿಕ ನಾಲ್ಕನೇ ಚುನಾವಣೆ ಎದುರಿಸುತ್ತಿರುವ ಕಂಪ್ಲಿ ವಿಧಾನಸಭೆ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆಯಿಂದ ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಎನಿಸಿದರೂ ಆಂತರಿಕವಾಗಿ ಕಾಂಗ್ರೆಸ್-ಬಿಜೆಪಿ ಪಕ್ಷಗಳ ನಡುವೆಯೇ ನೇರ ಫೈಟ್ ಏರ್ಪಟ್ಟಿದೆ. ಕ್ಷೇತ್ರದ ಹಾಲಿ ಶಾಸಕ ಜೆ.ಎನ್.ಗಣೇಶ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇವರ ವಿರುದ್ದ ಕಳೆದ ಬಾರಿ ಸೋಲಿನಿಂದ ಹ್ಯಾಟ್ರಿಕ್ ಗೆಲುವು ತಪ್ಪಿದ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್‌ನಿಂದ ವಲಸೆ ಬಂದ ರಾಜುನಾಯಕ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್ ಮೇಲಿನ ಬಂಡಾಯವನ್ನು ಜೆಡಿಎಸ್ ರೂಪದಲ್ಲಿ ಪ್ರದರ್ಶಿಸುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗಿ, ಬಿಜೆಪಿಗೆ ಲಾಭವಾಗಲಿದೆ ಎಂದು ಕ್ಷೇತ್ರದ ಜನರ ಲೆಕ್ಕಾಚಾರವಾಗಿದ್ದು, ಫಲಿತಾಂಶದವರೆಗೆ ಕಾದು ನೋಡಬೇಕಾಗಿದೆ. ಕಂಪ್ಲಿ ಕ್ಷೇತ್ರ ಎಸ್‌ಟಿ ಮೀಸಲಾಗಿದ್ದರಿಂದ ಚುನಾವಣ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳು ಎಸ್‌ಟಿ (ವಾಲ್ಮೀಕಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಂಪ್ಲಿ ಕ್ಷೇತ್ರದಲ್ಲಿ ಎಸ್‌ಟಿ, ಲಿಂಗಾಯತ, ಕುರುಬ, ಎಸ್‌ಸಿ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜೆ.ಎನ್.ಗಣೇಶ್ ಹಾಲಿ ಶಾಸಕರಾಗಿದ್ದಾರೆ. ಕಂಪ್ಲಿ ಸಕ್ಕರೆ ಕಾರ್ಖಾನೆಯನ್ನು ಸಚಿವ ಶ್ರೀರಾಮುಲು ಪತ್ನಿ ಹೆಸರಲ್ಲಿ ಕಬ್ಜಾ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ವಾಪಸ್ ಪಡೆಯುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಈಚೆಗೆ ಭರವಸೆ ನೀಡಿದ್ದಾರೆ. ~ ವೆಂಕೋಬಿ ಸಂಗನಕಲ್ಲು