ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆಯಾದ ಬಳಿಕ ಮೊದಲ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಜಿಲ್ಲಾ ಕೇಂದ್ರ ವಿಜಯನಗರ (ಹೊಸಪೇಟೆ) ಸಾಮಾನ್ಯ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಲಿದೆ.
ವಿಜಯನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸಿ “ಸಿಂಗ್ ಈಸ್ ಕಿಂಗ್” ಆಗಿರುವ ಹಾಲಿ ಶಾಸಕ ಆನಂದ್ ಸಿಂಗ್ ಈ ಬಾರಿ ಕ್ಷೇತ್ರ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರ ಪುತ್ರ ಸಿದ್ಧಾರ್ಥ್ ಸಿಂಗ್ ಬಿಜೆಪಿಯಿಂದ ಕಣಕ್ಕಿಳಿಸಿದ್ದಾರೆ. ಸಿಂಗ್ ವಿರುದ್ಧ 2008-2018ರಲ್ಲಿ ಸೋಲುವ ಮೂಲಕ ಸಾಂಪ್ರದಾಯಿಕ ಎದುರಾಳಿ ಎಂದೇ ಕರೆಯಲಾಗುವ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಇದೀಗ ಮತ್ತೂಮ್ಮೆ ಕಣಕ್ಕಿಳಿದು ತೊಡೆತಟ್ಟಿದ್ದಾರೆ. ಕ್ಷೇತ್ರದಲ್ಲಿ ಆಪ್, ಉತ್ತಮ ಪ್ರಜಾಕೀಯ, ಕೆಆರ್‌ಪಿಪಿ, ಕೆಆರ್‌ಎಸ್ ಸೇರಿ 10 ಜನ ಪಕ್ಷೇತರ ಅಭ್ಯರ್ಥಿಗಳು ಇದ್ದರೂ, ಒಂದಷ್ಟು ಮತ ಪಡೆಯಲಷ್ಟೇ ಸೀಮಿತವಾಗಲಿದ್ದಾರೆ ಹೊರತು ರಾಷ್ಟ್ರೀಯ ಪಕ್ಷಗಳ ಸೋಲು-ಗೆಲುವಿನ ಮೇಲೆ ಅಷ್ಟಾಗಿ ಪರಿಣಾಮ ಬೀರದು ಎನ್ನಲಾಗುತ್ತಿದೆ.
ಬಿಜೆಪಿ ಅಭ್ಯರ್ಥಿ ಸಿದ್ಧಾರ್ಥ್ ಸಿಂಗ್ ಕಾನೂನು ಪದವೀಧರರಾಗಿದ್ದಾರೆ. ತಂದೆ ಆನಂದ್ ಸಿಂಗ್‌ರ ರಾಜಕೀಯ ಹಿನ್ನೆಲೆ ಹೊಂದಿದ್ದಾರೆ. 2008ರಿಂದ 2018ರ ವರೆಗೆ ಸತತ ಹ್ಯಾಟ್ರಿಕ್ (ಒಂದು ಉಪ ಚುನಾವಣೆ ಸೇರಿ) ಗೆಲುವು ದಾಖಲಿಸಿರುವ ಸಿಂಗ್, ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿದ್ದಾರೆ. ಇದು ಪುತ್ರ ಸಿದ್ಧಾರ್ಥ್ ಸಿಂಗ್‌ಗೆ ಅನುಕೂಲವಾಗಲಿದೆ. ತಂದೆಯ ರಾಜಕೀಯ ವಾರಸತ್ವ ಮುಂದುವರಿಸಲು ವರ್ಷದ ಹಿಂದಿನಿಂದಲೇ ರಾಜಕೀಯ ಪ್ರವೇಶಿಸಿರುವ ಸಿದ್ಧಾರ್ಥ್, ಕ್ಷೇತ್ರದಾದ್ಯಂತ ಗ್ರಾಮವಾಸ್ತವ್ಯ, ನಗರ ವಾಸ್ತವ್ಯ ಮಾಡಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ. ಹೊಸ ಪೇಟೆ ಹೃದಯಭಾಗದಲ್ಲಿ ಚಿತ್ರನಟ ದಿ| ಪುನೀತ್ ರಾಜ್‌ಕುಮಾರ್ ಪುತ್ಥಳಿ ಪ್ರತಿಷ್ಠಾಪಿಸಿ, ರಾಜ್ಯಮಟ್ಟದ ಹೊನಲುಬೆಳಕಿನ ಕಬಡ್ಡಿ ಪಂದ್ಯಾವಳಿ ಆಯೋಜಿಸಿ ಯುವಕರ ಗಮನ ಸೆಳೆದಿದ್ದಾರೆ.
ಅಲ್ಲದೇ ಸಿದ್ಧಾರ್ಥ್ಸಿಂಗ್‌ಗೆ ಅನುಭವದ ಕೊರತೆ ಕಾಡುತ್ತಿದ್ದು, ಪಕ್ಷದಲ್ಲಿ ಕಾರ್ಯಕರ್ತರ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಟಿಕೆಟ್ ತಪ್ಪಿದ ಸೋದರತ್ತೆ ರಾಣಿಸಂಯುಕ್ತ ಅವರು ಈಚೆಗೆ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಚ್.ಆರ್.ಗವಿಯಪ್ಪ, 2004ರಲ್ಲಿ ಪಕ್ಷೇತರರಾಗಿ ಗೆದ್ದು, ಅನಂತರ 2013ರಲ್ಲಿ ಕಾಂಗ್ರೆಸ್, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆನಂದ್‌ಸಿಂಗ್ ವಿರುದ್ಧ ಪರಾಭವಗೊಂಡಿದ್ದಾರೆ. ಇವರ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿದೆ. ಒಮ್ಮೆ ಶಾಸಕರಾಗಿದ್ದ ಅನುಭವವೂ ಇವರಿಗೆ ಇದೆ. ಸರಳ, ಸಜ್ಜನಿಕೆಯ ವ್ಯಕ್ತಿ ಯಾಗಿದ್ದಾರೆ. ಆನಂದ್‌ಸಿಂಗ್ ಮೇಲಿನ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಚುನಾವಣೆಯಲ್ಲಿ ಗವಿಯಪ್ಪರಿಗೆ ಅನುಕೂಲವಾಗಬಹುದು. ಆದರೆ ಸಮಸ್ಯೆ ಹೇಳಿಕೊಳ್ಳಲು ಹೋದರೆ, ಮನೆ ಮುಂದೆ ಬೆಳಗ್ಗೆಯಿಂದ ಸಂಜೆವರೆಗೆ ನಿಂತರೂ ಯಾರೊಬ್ಬರೂ ಮಾತನಾಡಿಸಲ್ಲ, ಗವಿಯಪ್ಪರಿಗೆ ಚುನಾವಣೆ ಯಲ್ಲಷ್ಟೇ ಜನ ಜ್ಞಾಪಕಕ್ಕೆ ಬರುತ್ತಾರೆ. ಆಗಷ್ಟೇ ಹೊರಗೆ ಬಂದು ಮಾತನಾಡಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಉಳಿದಂತೆ ಕಣದಲ್ಲಿ ಎಎಪಿ, ಕೆಆರ್‌ಎಸ್‌ನ ಅಭ್ಯರ್ಥಿಗಳೂ ಇದ್ದಾರೆ.
~ ವೆಂಕೋಬಿ ಸಂಗನಕಲ್ಲು