Advertisement

ವಿಧಾನ-ಕದನ 2023: ಉಡುಪಿಯಲ್ಲೂ ಚಟುವಟಿಕೆ ಜೋರು

12:46 AM Apr 15, 2023 | Team Udayavani |

ಉಡುಪಿ: ಜಿಲ್ಲಾದ್ಯಂತ ಚುನಾವಣ ಕಣ ರಂಗೇರುತ್ತಿದ್ದರೂ ರಾಜ್ಯ, ರಾಷ್ಟ್ರ ನಾಯಕರ ಭೇಟಿ, ಪ್ರಚಾರ ಭರಾಟೆ ಇನ್ನಷ್ಟೇ ಶುರುವಾಗಬೇಕಿದೆ. ಬಹುತೇಕ ಅಭ್ಯರ್ಥಿಗಳು ಎ.17ರಂದು ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಈ ಮಧ್ಯೆ ಜೆಡಿಎಸ್‌ ಜಿಲ್ಲೆಯ ಐದೂ ಕ್ಷೇತ್ರಕ್ಕೂ ಅಭ್ಯರ್ಥಿಯನ್ನು ಘೋಷಿಸಿದೆ.

Advertisement

ಉಡುಪಿ
ಟಿಕೆಟ್‌ ಕೈ ತಪ್ಪಿದ್ದಕ್ಕೆ ಬೇಸರಗೊಂಡು ಬಳಿಕ ಸಮಾಧಾನಗೊಂಡಿರುವ ಕೆ. ರಘುಪತಿ ಭಟ್‌ ಅವರು ಅಧಿಕೃತ ಅಭ್ಯರ್ಥಿ ಯಶ್‌ಪಾಲ್‌ ಸುವರ್ಣ ಅವರೊಂದಿಗೆ ಬೂತ್‌ಮಟ್ಟದಲ್ಲಿ ಪ್ರಚಾರ ಆರಂಭಿಸಿದರು. ಬಿಜೆಪಿ ಮುಖಂಡರು ಜಿಲ್ಲಾ ಕಚೇರಿಯಲ್ಲಿ ಅಂಬೇಡ್ಕರ್‌ ಜಯಂತಿ ಪೂರೈಸಿ, ವಿವಿಧ ಸಭೆಗಳನ್ನು ನಡೆಸಿದರು. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ರಾಜ್‌ ಕಾಂಚನ್‌ ಅವರು ಕಾಂಗ್ರೆಸ್‌ ಭವನದಲ್ಲಿ ಅಂಬೇಡ್ಕರ್‌ ಜಯಂತಿಯಲ್ಲಿ ಪಾಲ್ಗೊಂಡು, ಬ್ರಹ್ಮಾವರದಲ್ಲಿ ವಿಶೇಷ ಸಭೆ ನಡೆಸಿದರು. ಬಳಿಕ ಉಡುಪಿಯ ಜಾಮಿಯಾ ಮಸೀದಿಗೂ ಭೇಟಿ ನೀಡಿದರು.

ಕಾಪು
ಕ್ಷೇತ್ರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ, ದೈವ, ದೇವಸ್ಥಾನಗಳ ಭೇಟಿ ನೀಡುವ ಮೂಲಕ ಚುನಾವಣೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಬಿಜೆಪಿ ಅಭ್ಯರ್ಥಿ ಸುರೇಶ್‌ ಶೆಟ್ಟಿ ಗುರ್ಮೆ ಅವರ ಚುನಾವಣೆ ಕಚೇರಿ ಉದ್ಘಾಟನೆ ನಡೆಯಿತು. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಗಣಹೋಮ ನಡೆಸಿದ್ದು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿಲ್ಲಾಧ್ಯಕ್ಷ ಸುರೇಶ್‌ ನಾಯಕ್‌ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದರು. ಬಳಿಕ ಅಡ್ವೆ ಬ್ರಹ್ಮಬೈದರ್ಕಳ ಗರೋಡಿ, ನಂದಿಕೂರು ದುರ್ಗಾಪರಮೇಶ್ವರೀ ದೇವಸ್ಥಾನ ಸೇರಿದಂತೆ ವಿವಿಧೆಡೆಗೆ ಭೇಟಿ ನೀಡಲಾಯಿತು. ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಅವರು 10 ಗ್ರಾಮೀಣ ಕಾಂಗ್ರೆಸ್‌ ಕಾರ್ಯಕರ್ತರ ಜತೆಗೆ ಸಮಾಲೋಚಿಸಿ ಪಾದೆಬೆಟ್ಟು ಕಂಬೆರ್ಕಳ ದೈವಸ್ಥಾನ, ಅಡ್ವೆ ಬ್ರಹ್ಮಬೈದರ್ಕಳ ಗರೋಡಿ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿ, ಬಳಿಕ ಮಸೀದಿಗೆ ಭೇಟಿ ನೀಡಿದರು. ಜೆಡಿಎಸ್‌ ಕಾರ್ಯಕರ್ತರ ಸಭೆಗಳು ನಡೆದಿದ್ದು, ಅಭ್ಯರ್ಥಿ ಸಬಿನಾ ಸಮದ್‌ ಪ್ರಚಾರ ಚಟುವಟಿಕೆ ಬಿರುಸುಗೊಳಿಸಿದ್ದಾರೆ.

ಕಾರ್ಕಳ
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ.ಸುನಿಲ್‌ಕುಮಾರ್‌ ವಿವಿಧೆಡೆ ಪ್ರಚಾರ ನಡೆಸಿದರು. ದಾನಶಾಲೆ ಜೈನ ಸ್ವಾಮೀಜಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದು ಮಂಗಳೂರಿಗೆ ತೆರಳಿ ಪಕ್ಷದ ಸಭೆಯಲ್ಲಿ ಪಾಲ್ಗೊಂಡರು. ಇನ್ನೂ ಅಭ್ಯರ್ಥಿ ಘೋಷಣೆಯಾಗದ ಕಾರಣ ಕಾಂಗ್ರೆಸ್‌ ಪಾಳಯದಲ್ಲಿ ಹೆಚ್ಚಿನ ಚಟುವಟಿಕೆ ಕಂಡು ಬಂದಿಲ್ಲ. ಪಕ್ಷೇತರ ಅಭ್ಯರ್ಥಿ ಪ್ರಮೋದ್‌ ಮುತಾಲಿಕ್‌ ವಿವಿಧೆಡೆ ಪ್ರಚಾರ ಕೈಗೊಂಡರು. ಅವರ ಅಭಿಮಾನಿ ಬಳಗವು ಎ.16ರಂದು ಬೈಲೂರಿನಲ್ಲಿ ಪ್ರಜಾ-ವಿಜಯ ಬಹಿರಂಗ ಸಭೆ ನಡೆಸಲಿದ್ದು, ವೀರ ಸಾವರ್ಕರ್‌ ಮೊಮ್ಮಗ ಸಾತ್ಯಕೀ ಸಾವರ್ಕರ್‌ ಪಾಲ್ಗೊಳ್ಳುವರು.

ಬೈಂದೂರು
ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೋಪಾಲ ಪೂಜಾರಿ ನೇತೃತ್ವದಲ್ಲಿ ಕಟ್‌ ಬೆಲೂ¤ರಿನಲ್ಲಿ ಬೈಂದೂರು, ವಂಡ್ಸೆ ಎರಡೂ ಬ್ಲಾಕ್‌ ಸಮಿತಿ ಸಭೆ ನಡೆಯಿತು. ಈ ವೇಳೆ 300 ಕ್ಕೂ ಅಧಿಕ ಮಂದಿ ಸೇರ್ಪಡೆಯಾದರು. ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಶಾಸಕ ಬಿ.ಎಂ.ಸುಕುಮಾರ್‌ ಶೆಟ್ಟಿಯವರನ್ನು ಭೇಟಿಯಾಗಿ, ಮಾತುಕತೆ ನಡೆಸಿದರು. ಇದಲ್ಲದೆ ಉಳಿದ ಆಕಾಂಕ್ಷಿಗಳನ್ನೂ ಭೇಟಿಯಾದರು. ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿದರು.

Advertisement

ಕುಂದಾಪುರ
ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಅವರ ಹೆಸರು ಘೋಷಣೆ ಆದ ಬಳಿಕ ಕಾರ್ಯಕರ್ತರ ಮೊದಲ ಸಭೆ ಕೋಟೇಶ್ವರದಲ್ಲಿ ನಡೆಯಿತು. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಿದ್ದರು. ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಅವರು ಗ್ರಾಮೀಣ ಪ್ರದೇಶಗಳಲ್ಲಿ ಮತಯಾಚನೆ ನಡೆಸಿದರು.

ಜೆಡಿಎಸ್‌ ಅಭ್ಯರ್ಥಿಗಳು
ಜೆಡಿಎಸ್‌ ಜಿಲ್ಲೆಯ ಐದೂ ಕ್ಷೇತ್ರ ಗಳಿಗೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಉಡುಪಿ- ದಕ್ಷತ್‌ ಆರ್‌.ಶೆಟ್ಟಿ, ಕಾರ್ಕಳ-ಶ್ರೀಕಾಂತ್‌ ಕೊಚ್ಚಾರು, ಕಾಪು-ಸಬಿನಾ ಸಮದ್‌, ಕುಂದಾಪುರ- ರಮೇಶ್‌ ಕುಂದಾಪುರ ಹಾಗೂ ಬೈಂದೂರು-ಮನ್ಸೂರ್‌ ಇಬ್ರಾಹಿಮ್‌ ಅಭ್ಯರ್ಥಿಗಳು.

Advertisement

Udayavani is now on Telegram. Click here to join our channel and stay updated with the latest news.

Next